
ಬೆಂಗಳೂರು: ದೇಶವೇ ಕಾತರದಿಂದ ಕಾಯುತ್ತಿರುವ ಐಪಿಎಲ್‌ನ 18ನೇ ಆವೃತ್ತಿ ಹಲವು ದಾಖಲೆಗಳನ್ನು ಮುರಿಯುವ ನಿರೀಕ್ಷೆಯಿದೆ ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
ಜಿಯೋಸ್ಟಾರ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ‘18 ವರ್ಷಗಳಲ್ಲಿ ಕ್ರಿಕೆಟ್ ವೇಗವಾಗಿ ವಿಕಸನಗೊಂಡಿದೆ. ಈ ಬಾರಿ ಹಲವು ಯುವ ಆಟಗಾರರು ಮೈದಾನಕ್ಕಿಳಿಯಲಿದ್ದು, ಬಲಾಢ್ಯ ತಂಡಗಳ ನಡುವೆ ಜಿದ್ದಾಜಿದ್ದಿ ಇರಲಿದೆ. 1000 ಸಿಕ್ಸ್‌ಗಳು, ಒಂದೇ ಇನ್ನಿಂಗ್‌ನಲ್ಲಿ 300 ರನ್, ಡಬಲ್ ಹ್ಯಾಟ್ರಿಕ್ ಇತ್ಯಾದಿ ದಾಖಲೆ ನಿರ್ಮಾಣವಾದರೂ ಅಚ್ಚರಿಯಿಲ್ಲ’ ಎಂದರು.
ಆರ್‌ಸಿಬಿ ಬಗ್ಗೆ ಮಾತನಾಡುತ್ತಾ, ‘ಸಾಮಾನ್ಯವಾಗಿ ಬ್ಯಾಟಿಂಗ್ ಕಡೆ ಗಮನಹರಿಸುತ್ತಿದ್ದ ತಂಡ ಈ ಬಾರಿ ಬೌಲಿಂಗ್‌ಗೆ ಒತ್ತು ನೀಡಿದೆ. ಈ ಬಾರಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ’ ಎಂದರು.
ಇದನ್ನೂ ಓದಿ: ಆರ್‌ಸಿಬಿ ತವರಿನ ಪಂದ್ಯಗಳ ಟಿಕೆಟ್ ಈ ಸಲವೂ ದುಬಾರಿ! ಒಂದು ಟಿಕೆಟ್ ಬೆಲೆ ಕೇವಲ ₹42,000
ಐಪಿಎಲ್: ಮೊದಲೆರಡು ವಾರ ಬುಮ್ರಾ ಅಲಭ್ಯ?
ನವದೆಹಲಿ: ಮುಂಬೈ ಇಂಡಿಯನ್ಸ್‌ನ ತಾರಾ ವೇಗಿ ಜಸ್‌ಪ್ರೀತ್ ಬುಮ್ರಾ ಐಪಿಎಲ್ 18ನೇ ಆವೃತ್ತಿಯ ಮೊದಲೆರೆಡು ವಾರಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿರುವ ಬುಮ್ರಾ, ಬೆಂಗಳೂರಿನ ಎನ್‌ಸಿಎನಲ್ಲಿ ಬೌಲಿಂಗ್ ಅಭ್ಯಾಸ ಆರಂಭಿಸಿದ್ದಾರಾದರೂ, ಸಂಪೂರ್ಣವಾಗಿ ಫಿಟ್ ಆಗಲು ಇನ್ನೂ ಕೆಲ ಸಮಯ ಬೇಕಾಗಬಹುದು ಎನ್ನಲಾಗಿದೆ. ಮಾ.22ರಿಂದ ಐಪಿಎಲ್ ಆರಂಭಗೊಳ್ಳಲಿದ್ದು, ಜಸ್ಪ್ರೀತ್ ಬುಮ್ರಾ ಏಪ್ರಿಲ್‌ನಲ್ಲಿ ಕಣಕ್ಕಿಳಿಯಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಮೊದಲ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ಔಟ್: 5 ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಮಾರ್ಚ್ 23ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಆದರೆ ಮೊದಲ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅಲಭ್ಯರಾಗಲಿದ್ದಾರೆ.
ಇದನ್ನೂ ಓದಿ: IPL 2025: ಹಾರ್ದಿಕ್ ಪಾಂಡ್ಯ ಬದಲಿಗೆ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ಕ್ಯಾಪ್ಟನ್!
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಮೂರು ಬಾರಿ ಸ್ಲೋ ಓವರ್ ರೇಟ್ ಮಾಡಿತ್ತು. ಈ ತಪ್ಪಿಗಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಇದೀಗ ಒಂದು ಪಂದ್ಯದ ಮಟ್ಟಿಗೆ ನಿಷೇಧಕ್ಕೆ ಗುರಿಯಾಗಿದ್ದಾರೆ. ಈ ಕಾರಣಕ್ಕಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಮೊದಲ ಪಂದ್ಯಕ್ಕೆ ಹಾರ್ದಿಕ್ ಪಾಂಡ್ಯ ಅಲಭ್ಯರಾಗಿದ್ದಾರೆ. ಹೀಗಾಗಿ ತಮ್ಮ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಯಾದವ್ ಚೆನ್ನೈ ಸೂಪರ್ ಕಿಂಗ್ಸ್ ಎದುರು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ
ಐಪಿಎಲ್: ಚೆಂಡಿಗೆ ಎಂಜಲು ಹಾಕಲು ಅವಕಾಶ?
ನವದೆಹಲಿ: ಮಾ.22ರಿಂದ ಆರಂಭಗೊಳ್ಳಲಿ ಸಿದ್ದು, ಎಲ್ಲರ ಅಭಿಪ್ರಾಯ ಸಂಗ್ರಹಿಸಿರುವ ಐಪಿಎಲ್ 18ನೇ ಆವೃತ್ತಿಯಲ್ಲಿ ಆಟ ಗಾರರು ಚೆಂಡಿಗೆ ಎಂಜಲು ಹಾಕಲು ಅವಕಾಶ ನೀಡುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಈ ಬಗ್ಗೆ ಗುರುವಾರ ನಡೆಯಲಿರುವ ನಾಯಕರ ಸಭೆಯಲ್ಲಿ ಪ್ರಸ್ತಾಪಿಸಲು ಬಿಸಿಸಿಐ ನಿರ್ಧರಿಸಿ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಕೋವಿಡ್‌ನಿಂದಾಗಿ ಚೆಂಡಿಗೆ ಎಂಜಲು ಹಾಕುವುದನ್ನು ಐಸಿಸಿ ನಿಷೇಧಿಸಿತ್ತು. ಈ ನಿಯಮವನ್ನು ಬಿಸಿಸಿಐ, ಐಪಿಎಲ್‌ನಲ್ಲೂ ಅಳವಡಿಸಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.