ಸೌತ್ ಆಫ್ರಿಕಾ ವಿರುದ್ದ ಅಂತಿಮ ಏಕದಿನ ಪಂದ್ಯದ ಕುತೂಹಲ ಹೆಚ್ಚಾಗಿದೆ. ಸಂಜು ಸ್ಯಾಮ್ಸನ್ ಶತಕ ಸಿಡಿಸಿ ಅಬ್ಬರಿಸುವ ಮೂಲಕ ಭಾರತ 296 ರನ್ ಸಿಡಿಸಿದೆ.
ಪಾರ್ಲ್(ಡಿ.21) ಸಂಜು ಸ್ಯಾಮ್ಸನ್ ಶತಕ, ತಿಲಕ್ ವರ್ಮಾ ಅರ್ಧಶತಕ ಹಾಗೂ ಅಂತಿಮ ಹಂತದಲ್ಲಿ ರಿಂಕು ಸಿಂಗ್ ಬ್ಯಾಟಿಂಗ್‌ನಿಂದ ಭಾರತ, ಅಂತಿಮ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ದಿಟ್ಟ ಹೋರಾಟ ನೀಡಿದೆ. ಆರಂಭಿಕ ಹಂತದಲ್ಲಿ ಹಿನ್ನಡೆ ಅನುಭವಿಸಿದರೂ ಸ್ಯಾಮ್ಸನ್ ಹೋರಾಟ ಭಾರತದ ಕೈಹಿಡಿಯಿತು. ನಿರ್ಣಾಯಕ ಪಂದ್ಯದಲ್ಲಿ ಭಾರತ 8 ವಿಕೆಟ್ ನಷ್ಟಕ್ಕೆ 296 ರನ್ ಸಿಡಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭಿಕ ರಜತ್ ಪಾಟೀದಾರ್ 22 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಭರವಸೆ ಮೂಡಿಸಿದ್ದ ಸಾಯಿ ಸುದರ್ಶನ್ 10 ರನ್ ಸಿಡಿಸಿ ಔಟಾದರು. ಸಂಜು ಸ್ಯಾಮ್ಸನ್ ಹಾಗೂ ನಾಯಕ ಕೆಎಲ್ ರಾಹುಲ್ ಜೊತೆಯಾಟ ಟೀಂ ಇಂಡಿಯಾಗೆ ನೆರವಾಯಿತು. ಆದರೆ ರಾಹುಲ್ 21 ರನ್ ಸಿಡಿಸಿ ನಿರ್ಗಮಿಸಿದರು.
undefined
ತಿಲಕ್ ವರ್ಮಾ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಸಂಜು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇತ್ತ ತಿಲಕ್ ವರ್ಮಾ ಕೂಡ ಉತ್ತಮ ಸಾಥ್ ನೀಡಿದರು. ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಆದರೆ ವರ್ಮಾ 52 ರನ್ ಸಿಡಿಸಿ ಔಟಾದರು. ಅಬ್ಬರಿಸಿದ ಸಂಜು ಸ್ಯಾಮ್ಸನ್ ಆಕರ್ಷಕ ಸೆಂಚುರಿ ಸಿಡಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಶತಕ ಸಿಡಿಸಿದ ಹೆಗ್ಗಳಿಕಗೆ ಸ್ಯಾಮ್ಸನ್ ಪಾತ್ರರಾದರು.
ಸಂಜು ಸ್ಯಾಮ್ಸನ್ 114 ಎಸೆತದಲ್ಲಿ 108 ರನ್ ಸಿಡಿಸಿ ಔಟಾದರು. 6 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ ಅಬ್ಬರಿಸಿದ್ದರು. ಸಂಜು ಬಳಿಕ ರಿಂಕು ಸಿಂಗ್ ಅಬ್ಬರ ಆರಂಭಗೊಂಡಿತು. ಇದರ ನಡುವೆ ಅಕ್ಸರ್ ಪಟೇಲ್ 1 ರನ್ ಸಿಡಿಸಿ ಔಟಾದರು. ವಾಶಿಂಗ್ಟನ್ ಸುಂದರ್ 14 ರನ್ ಸಿಡಿಸಿ ನಿರ್ಗಮಿಸಿದರು. ಅಂತಿಮ ಹಂತದಲ್ಲಿ ರಿಂಕು ಸಿಂಗ್‌ಗೆ ಅರ್ಶದೀಪ್ ಸಾಥ್ ನೀಡಿದರು.
ರಿಂಕು ಸಿಂಗ್ 27 ಎಸೆತದಲ್ಲಿ 38ರನ್ ಸಿಡಿಸಿದರು. ಇತ್ತ ಅರ್ಶದೀಪ್ ಸಿಂಗ್ 2 ಎಸೆತದಲ್ಲಿ 7 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡು 296 ರನ್ ಸಿಡಿಸಿತು.