
ಹೈದರಾಬಾದ್: ಸಂಜು ಸ್ಯಾಮ್ಸನ್ ಓರ್ವ ಆರಂಭಿಕ ಬ್ಯಾಟರ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅಗತ್ಯವೇ ಇರಲಿಲ್ಲ. ಆದರೆ ಬೇರೆ ಕಾರಣಕ್ಕಾಗಿ ಕೇರಳ ಮೂಲದ ವಿಕೆಟ್ ಕೀಪರ್ ಸಂಜುವನ್ನು ಖರೀದಿಸಲಾಗಿದೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹನುಮ ವಿಹಾರಿ ಅಭಿಪ್ರಾಯಪಟ್ಟಿದ್ದಾರೆ.
ಐಪಿಎಲ್ ಮಿನಿ ಹರಾಜಿಗೂ ಮುನ್ನ ನಡೆದ ಆಟಗಾರರ ವರ್ಗಾವಣೆಯಲ್ಲಿ ರವೀಂದ್ರ ಜಡೇಜಾ ಮತ್ತು ಸ್ಯಾಮ್ ಕರನ್‌ರನ್ನು ಬಿಟ್ಟುಕೊಟ್ಟು, ರಾಜಸ್ಥಾನ ರಾಯಲ್ಸ್ ನಾಯಕರಾಗಿದ್ದ ಸಂಜು ಸ್ಯಾಮ್ಸನ್‌ರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರಿಸಿಕೊಂಡಿತ್ತು. ಸಾಕಷ್ಟು ಗೊಂದಲಗಳ ಬಳಿಕ ಐಪಿಎಲ್‌ನಲ್ಲಿ ನಡೆದ ಅತಿದೊಡ್ಡ ಟ್ರೇಡ್ ಡೀಲ್ ಎನಿಸಿಕೊಂಡಿತ್ತು.
ಆದರೆ, ಬ್ಯಾಟರ್ ಮತ್ತು ಓಪನರ್ ಆಗಿ ಸಂಜು ಚೆನ್ನೈ ಸೂಪರ್ ಕಿಂಗ್ಸ್‌ಗೆ ಸಂಜು ಸ್ಯಾಮ್ಸನ್ ಬೇಕಾಗಿರಲಿಲ್ಲ ಎಂದು ಹನುಮ ವಿಹಾರಿ ಇನ್‌ಸ್ಟಾಗ್ರಾಮ್ ವಿಡಿಯೋದಲ್ಲಿ ಹೇಳಿದ್ದಾರೆ. ಯಾಕಂದ್ರೆ, ಚೆನ್ನೈ ತಂಡದಲ್ಲಿ ಓಪನರ್‌ಗಳಾಗಿ ನಾಯಕ ಋತುರಾಜ್ ಗಾಯಕ್ವಾಡ್, ಆಯುಷ್ ಮಾಥ್ರೆ ಮತ್ತು ಉರ್ವಿಲ್ ಪಟೇಲ್ ಅವರಂತಹ ಆಟಗಾರರಿದ್ದಾರೆ. ಆದರೆ, ಸಂಜುಗೆ ದಕ್ಷಿಣ ಭಾರತದಲ್ಲಿ ಎಲ್ಲಿ ಆಡಿದರೂ ಸಿಗುವ ದೊಡ್ಡ ಅಭಿಮಾನಿ ಬಳಗವೇ ನಿಜವಾಗಿ ಸಂಜುರನ್ನು ಖರೀದಿಸಲು ಚೆನ್ನೈಗೆ ಪ್ರೇರೇಪಿಸಿದ್ದು ಎಂದು ಹನುಮ ವಿಹಾರಿ ಅಭಿಪ್ರಾಯಪಟ್ಟಿದ್ದಾರೆ. ಸಂಜುಗೆ ದಕ್ಷಿಣ ಭಾರತದಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಸಂಜು ಆಡಲು ಹೋದಲ್ಲೆಲ್ಲಾ ಅವನಿಗಾಗಿ ಚಪ್ಪಾಳೆ ತಟ್ಟಲು ಅಭಿಮಾನಿಗಳು ಬರುತ್ತಾರೆ. ಈ ಅಭಿಮಾನಿ ಬಳಗವೇ ಚೆನ್ನೈ ಅವರನ್ನು ತಂಡಕ್ಕೆ ತೆಗೆದುಕೊಳ್ಳಲು ಕಾರಣ ಎಂದು ಅವರು ಹೇಳಿದ್ದಾರೆ.
ಐಪಿಎಲ್ ಅಂದರೆ ಬರೀ ಕ್ರಿಕೆಟ್ ಮಾತ್ರವಲ್ಲ. ಅದರ ಹಿಂದೆ ಬೇರೆ ಹಲವು ವಾಣಿಜ್ಯ ಹಿತಾಸಕ್ತಿಗಳಿವೆ. ಒಬ್ಬ ಆಟಗಾರನನ್ನು ತಂಡಕ್ಕೆ ಸೇರಿಸಿಕೊಳ್ಳುವಾಗ, ವಾಣಿಜ್ಯ ಹಿತಾಸಕ್ತಿಗಳು ಕೂಡ ತಂಡದ ಮಾಲೀಕರ ಪ್ರಮುಖ ಪರಿಗಣನೆಯಾಗಿರುತ್ತದೆ. ಕೇವಲ ಕ್ರಿಕೆಟ್ ಕಾರಣಕ್ಕೆ ಮಾತ್ರ ಸಂಜು ಚೆನ್ನೈ ತಂಡಕ್ಕೆ ಬರಲು ಕಾರಣ ಎಂದುಕೊಂಡರೆ ಅದು ತಪ್ಪು ಕಲ್ಪನೆಯಾಗಲಿದೆ' ಎಂದು ಹನುಮ ವಿಹಾರಿ ಅಭಿಪ್ರಾಯಪಟ್ಟಿದ್ದಾರೆ.
ಓಪನರ್‌ಗಳಾಗಿ ಒಂದಕ್ಕಿಂತ ಹೆಚ್ಚು ಆಟಗಾರರು ತಂಡದಲ್ಲಿರುವಾಗ, ಚೆನ್ನೈ ಮತ್ತೊಬ್ಬ ಓಪನರ್‌ಗಾಗಿ ಹುಡುಕುವ ಅಗತ್ಯವಿಲ್ಲ. ಸಂಜು ಆಗಮನದಿಂದ ಚೆನ್ನೈನ ಟಾಪ್ ಆರ್ಡರ್‌ನಲ್ಲಿ ಸ್ಪರ್ಧೆ ಇನ್ನಷ್ಟು ಹೆಚ್ಚಾಗಲಿದೆ. ಹಾಗಾಗಿ, ಸಂಜುರನ್ನು ಓಪನರ್ ಸ್ಥಾನದ ಬದಲು ಮೂರನೇ ಕ್ರಮಾಂಕದಲ್ಲಿ ಆಡಿಸಲು ಚೆನ್ನೈ ಪರಿಗಣಿಸುವ ಸಾಧ್ಯತೆಯಿದೆ ಎಂದು ಹನುಮ ವಿಹಾರಿ ಸ್ಪಷ್ಟಪಡಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಗಾಯದಿಂದ ಚೇತರಿಸಿಕೊಂಡು ಬಂದ ನಂತರ ರಾಜಸ್ಥಾನ ರಾಯಲ್ಸ್ ಪರ ಸಂಜು ಮೂರನೇ ಕ್ರಮಾಂಕದಲ್ಲಿ ಆಡಿದ್ದರು ಎಂಬುದನ್ನು ವಿಹಾರಿ ನೆನಪಿಸಿಕೊಂಡಿದ್ದಾರೆ. ಸಂಜು ಅನುಪಸ್ಥಿತಿಯಲ್ಲಿ ಯಶಸ್ವಿ ಜೈಸ್ವಾಲ್ ಜೊತೆ ಓಪನರ್ ಆಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಮಿಂಚಿದ್ದರಿಂದ, ಸಂಜು ಓಪನರ್ ಸ್ಥಾನ ಬಿಟ್ಟುಕೊಟ್ಟು ಮೂರನೇ ಕ್ರಮಾಂಕಕ್ಕೆ ಇಳಿದಿದ್ದರು.
ಇದೀಗ 19ನೇ ಆವೃತ್ತಿಯಲ್ಲಿ ಸಂಜು ಸ್ಯಾಮ್ಸನ್ ಯಾವ ಕ್ರಮಾಂಕದಲ್ಲಿ ಆಡುತ್ತಾರೆ ಎನ್ನುವ ಬಗ್ಗೆ ಕುತೂಹಲ ಜೋರಾಗಿದೆ. ಐಪಿಎಲ್ ಟೂರ್ನಿಗೂ ಮುನ್ನ ಸಂಜು ಸ್ಯಾಮ್ಸನ್, ನ್ಯೂಜಿಲೆಂಡ್ ಎದುರಿನ ಐದು ಪಂದ್ಯಗಳ ಟಿ20 ಸರಣಿಯನ್ನಾಡಲಿದ್ದಾರೆ. ಇದಾದ ಬಳಿಕ ಟಿ20 ವಿಶ್ವಕಪ್ ಟೂರ್ನಿಯಲ್ಲೂ ಆರಂಭಿಕನಾಗಿಯೇ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಪರ ಆರಂಭಿಕನಾಗಿಯೇ ಹೆಚ್ಚು ಯಶಸ್ಸು ಕಂಡರೆ, ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕನಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.