'ಬಾಂಗ್ಲಾದೇಶದಲ್ಲಿ ಮೊದಲ ಬಾರಿಗೆ ನೋಡಿದ ಬಳಿಕ ಸೌರವ್‌ಗೆ ಹೇಳಿದ್ದೆ' ಧೋನಿ ನಿವೃತ್ತಿಗೆ ಸಚಿನ್‌ ತೆಂಡುಲ್ಕರ್‌ ಭಾವುಕ ಪೋಸ್ಟ್‌

Published : Nov 18, 2026, 11:05 PM ISTUpdated : Nov 18, 2026, 11:06 PM IST
Sachin Tendulkar on MS Dhoni

ಸಾರಾಂಶ

ಎಂಎಸ್ ಧೋನಿ ತಮ್ಮ 19 ವರ್ಷಗಳ ಐಪಿಎಲ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಚಿನ್ ತೆಂಡುಲ್ಕರ್ ಧೋನಿ ಅವರ ಬ್ಯಾಟಿಂಗ್ ಪ್ರತಿಭೆಯನ್ನು ಕೊಂಡಾಡಿ ಹೃದಯಸ್ಪರ್ಶಿ ಸಂದೇಶ ಹಂಚಿಕೊಂಡಿದ್ದಾರೆ.

ಮುಂಬೈ (ನ.18): ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಜೀವಾಳ ಎಂಎಸ್ ಧೋನಿ ಅವರು ನವೆಂಬರ್ 17ರಂದು ತಮ್ಮ 19 ವರ್ಷಗಳ ಐತಿಹಾಸಿಕ ಐಪಿಎಲ್ (IPL) ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ. ಧೋನಿ ಅವರ ಈ ನಿರ್ಧಾರದ ಬೆನ್ನಲ್ಲೇ ಕ್ರಿಕೆಟ್ ಜಗತ್ತಿನಾದ್ಯಂತ ಭಾವುಕ ಪ್ರತಿಕ್ರಿಯೆಗಳ ಮಹಾಪೂರವೇ ಹರಿದುಬರುತ್ತಿದ್ದು, ನವೆಂಬರ್ 18ರಂದು ಕ್ರಿಕೆಟ್ ದೇವರು ಖ್ಯಾತಿಯ ಸಚಿನ್ ತೆಂಡುಲ್ಕರ್ 'ಎಕ್ಸ್'ನಲ್ಲಿ (X) ಹೃದಯಸ್ಪರ್ಶಿ ಸಂದೇಶ ಹಂಚಿಕೊಳ್ಳುವ ಮೂಲಕ ಮಾಹಿಗೆ ಗೌರವ ಸಲ್ಲಿಸಿದ್ದಾರೆ.

ಧೋನಿ ಅವರ ಆರಂಭಿಕ ದಿನಗಳನ್ನು ಸ್ಮರಿಸಿರುವ ಸಚಿನ್ ತೆಂಡುಲ್ಕರ್, ಬಾಂಗ್ಲಾದೇಶದಲ್ಲಿ ಮೊದಲ ಬಾರಿಗೆ ಧೋನಿ ಅವರ ಸ್ಫೋಟಕ ಬ್ಯಾಟಿಂಗ್ ನೋಡಿದಾಗಲೇ ಅವರ ಅಸಾಧಾರಣ ಪ್ರತಿಭೆಯನ್ನು ತಾವು ಹೇಗೆ ಗುರುತಿಸಿದ್ದೆ ಎಂಬುದನ್ನು ವಿವರಿಸಿದ್ದಾರೆ.

ಬಾಂಗ್ಲಾದೇಶದ ಆ ಇನ್ನಿಂಗ್ಸ್ ಮತ್ತು ಸೌರವ್ ಗಂಗೂಲಿಗೆ ಹೇಳಿದ್ದ ಮಾತನ್ನು ನೆನೆದ ಸಚಿನ್

ಸಚಿನ್ ತೆಂಡುಲ್ಕರ್ ತಮ್ಮ ಪೋಸ್ಟ್‌ನಲ್ಲ, 'ಬಾಂಗ್ಲಾದೇಶದಲ್ಲಿ ಎಂಎಸ್ ಬ್ಯಾಟಿಂಗ್ ಮಾಡುವುದನ್ನು ನೋಡಿ, 'ಇವರ ಪವರ್-ಹಿಟ್ಟಿಂಗ್‌ನಲ್ಲಿ ಏನೋ ಬಹಳ ವಿಶೇಷತೆ ಇದೆ' ಎಂದು ಸೌರವ್ ಅವರಿಗೆ ಹೇಳಿದ್ದು ನನಗೆ ಇಂದಿಗೂ ನೆನಪಿದೆ. ಅವರಲ್ಲಿ ಒಂದು ಅಪರೂಪದ ಪ್ರತಿಭೆ ಇದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು, ಮತ್ತು ಅವರು ಎಂತಹ ಅದ್ಭುತ ಪಯಣವನ್ನು ಕ್ರಮಿಸಿದ್ದಾರೆ. ನಿಮ್ಮೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದು ಮತ್ತು ಭಾರತೀಯ ಕ್ರಿಕೆಟ್‌ನ ಕೆಲವು ಅತ್ಯಂತ ಸ್ಮರಣೀಯ ಕ್ಷಣಗಳ ಭಾಗವಾಗಿದ್ದು ನಿಜಕ್ಕೂ ಅತ್ಯಂತ ಸಂತೋಷದ ಸಂಗತಿ. ನೀವು ಏನಾದರೂ ವಿಶೇಷ ಸಾಧನೆ ಮಾಡುತ್ತೀರಿ ಎಂಬ ನಂಬಿಕೆ ನನಗೆ ಯಾವಾಗಲೂ ಇತ್ತು, ಮತ್ತು ನೀವು ಅದಕ್ಕಿಂತ ಹೆಚ್ಚಿನದನ್ನೇ ಸಾಧಿಸಿದ್ದೀರಿ. ನೀವು ಭಾರತೀಯ ಕ್ರಿಕೆಟ್‌ಗೆ ನಿಮ್ಮ ಅತ್ಯುತ್ತಮ ಕೊಡುಗೆಯನ್ನು ನೀಡಿದ್ದೀರಿ, ನಿಮ್ಮೊಂದಿಗೆ ಈ ಪಯಣವನ್ನು ಹಂಚಿಕೊಂಡಿದ್ದು ಅದ್ಭುತವಾಗಿತ್ತು. ವೆಲ್ ಪ್ಲೇಡ್, ಎಂಎಸ್!' ಎಂದು ಬರೆದುಕೊಂಡಿದ್ದಾರೆ.

19 ವರ್ಷಗಳ ಸುವರ್ಣ ಪಯಣ: 5 IPL ಟ್ರೋಫಿ ಮತ್ತು 5,439 ರನ್!

45 ವರ್ಷದ ಎಂಎಸ್ ಧೋನಿ 2008ರಲ್ಲಿ ನಡೆದ ಐಪಿಎಲ್‌ನ ಚೊಚ್ಚಲ ಆವೃತ್ತಿಯಿಂದ ತಮ್ಮ ಪಯಣ ಆರಂಭಿಸಿದ್ದರು. ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ 17 ಆವೃತ್ತಿಗಳಲ್ಲಿ ಆಡಿದ್ದಾರೆ ಹಾಗೂ ಫ್ರಾಂಚೈಸಿ ಅಮಾನತುಗೊಂಡಿದ್ದ ಅವಧಿಯಲ್ಲಿ (2016 ಮತ್ತು 2017) ರೈಸಿಂಗ್ ಪುಣೆ ಸೂಪರ್‌ಜೈಂಟ್ (Rising Pune Supergiant) ಪರ 2 ಆವೃತ್ತಿಗಳಲ್ಲಿ ಕಣಕ್ಕಿಳಿದಿದ್ದರು. 2018ರಲ್ಲಿ ಸಿಎಸ್‌ಕೆಗೆ ಮರಳಿದ ತಕ್ಷಣವೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ಐಪಿಎಲ್ ಪ್ರಶಸ್ತಿಗಳನ್ನು (2010, 2011, 2018, 2021 ಮತ್ತು 2023) ಹಾಗೂ 2 ಚಾಂಪಿಯನ್ಸ್ ಲೀಗ್ ಟಿ20 ಪ್ರಶಸ್ತಿಗಳನ್ನು (2010 ಮತ್ತು 2014) ಗೆದ್ದುಕೊಂಡಿದೆ. 2024ರ ಆವೃತ್ತಿಗೂ ಮುನ್ನ ಅವರು ಋತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವ ಹಸ್ತಾಂತರಿಸಿದ್ದರು.

ಧೋನಿ ತಮ್ಮ ಕೊನೆಯ ಐಪಿಎಲ್ ಪಂದ್ಯವನ್ನು 2025ರ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆಡಿದ್ದರು. ಮೀನಖಂಡದ (Calf) ಗಾಯದ ಕಾರಣದಿಂದಾಗಿ 2026ರ ಆವೃತ್ತಿಯಲ್ಲಿ ಅವರಿಗೆ ಆಡಲು ಸಾಧ್ಯವಾಗಿರಲಿಲ್ಲ. ಒಟ್ಟು 278 ಐಪಿಎಲ್ ಪಂದ್ಯಗಳಲ್ಲಿ 38.30ರ ಸರಾಸರಿ ಮತ್ತು 137.45ರ ಸ್ಟ್ರೈಕ್ ರೇಟ್‌ನಲ್ಲಿ 5,439 ರನ್ ಗಳಿಸಿರುವ ಧೋನಿ, 24 ಅರ್ಧಶತಕಗಳು ಹಾಗೂ 264 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಈಗ 'ಮೆಂಟರ್' ಆಗಿ ಜಹೀರ್ ಖಾನ್ ಜೊತೆಗೂಡಿ CSK ಭವಿಷ್ಯ ಬದಲಿಸಲಿದ್ದಾರೆ ಥಲಾ

ಸಿಎಸ್‌ಕೆ ಅಭಿಮಾನಿಗಳ ಪಾಲಿನ ಪ್ರೀತಿಯ 'ಥಲಾ' (Thala) ಇನ್ನು ಮುಂದೆ ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಾ ಕಾಣಿಸಿಕೊಳ್ಳದಿದ್ದರೂ, ಐಪಿಎಲ್ 2027ರ ಆವೃತ್ತಿಗೂ ಮುನ್ನ 'ಟೀಮ್ ಮೆಂಟರ್' (Team Mentor) ಆಗಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆಯೇ ಮುಂದುವರಿಯಲಿದ್ದಾರೆ. ಸತತ ಮೂರು ಆವೃತ್ತಿಗಳಲ್ಲಿ ಪ್ಲೇಆಫ್ ತಲುಪಲು ವಿಫಲವಾದ ನಂತರ ಫ್ರಾಂಚೈಸಿಯು 2027ರ ಆವೃತ್ತಿಗಾಗಿ ತಂಡವನ್ನು ಮರುಸಂಘಟಿಸುತ್ತಿದ್ದು, ಧೋನಿ ಅವರ ಈ ಹೊಸ ಜವಾಬ್ದಾರಿ ಅತ್ಯಂತ ನಿರ್ಣಾಯಕ ಸಮಯದಲ್ಲಿ ಬಂದಿದೆ. ತಂಡವು ಈಗಾಗಲೇ ಭಾರತದ ಮಾಜಿ ವೇಗಿ ಜಹೀರ್ ಖಾನ್ (Zaheer Khan) ಅವರನ್ನು ನೂತನ ಹೆಡ್ ಕೋಚ್ ಆಗಿ ನೇಮಕ ಮಾಡಿದೆ. ಹೀಗಾಗಿ ಧೋನಿ ಅವರ ಅಪಾರ ಅನುಭವ ಮತ್ತು ಜಹೀರ್ ಖಾನ್ ಅವರ ತಂತ್ರಗಾರಿಕೆ ಸಿಎಸ್‌ಕೆ ತಂಡವನ್ನು ಮತ್ತೊಮ್ಮೆ ಅಗ್ರಸ್ಥಾನಕ್ಕೆ ಕೊಂಡೊಯ್ಯುವಲ್ಲಿ ನಿರ್ಣಾಯಕವಾಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನ್ಯೂಜಿಲೆಂಡ್ ಟೆಸ್ಟ್ ಗೂ ಮುನ್ನ ಟೀಂ ಇಂಡಿಯಾಗೆ ಶಾಕ್- ಕಟ್ ಆಯ್ತು ಶೇ. 35ರಷ್ಟು ಸಂಬಳ
ಭಾರೀ ಮೊತ್ತಕ್ಕೆ ಶಾರುಖ್‌ ಖಾನ್‌ನ KKR ಟೀಮ್‌ನಲ್ಲಿನ ಅರ್ಧ ಪಾಲನ್ನು ಮಾರಾಟ ಮಾಡಲಿರುವ ನಟಿ ಜೂಹಿ ಚಾವ್ಲಾ ಗಂಡ