
ಪುಣೆ(ಮಾ.30): 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯದಲ್ಲಿ ಥರ್ಡ್ ಅಂಪೈರ್ ಕೆ. ಅನಂತಪದ್ಮನಾಭನ್ ಮಾಡಿದ ಒಂದು ಯಡವಟ್ಟು ಕ್ರಿಕೆಟ್ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡದ ಎದುರು ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು 61 ರನ್‌ಗಳ ಭರ್ಜರಿ ಜಯ ಸಂಪಾದಿಸಿದೆ.
ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪ್ರಸಿದ್ಧ್ ಕೃಷ್ಣ ಬೌಲಿಂಗ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ರಾಜಸ್ಥಾನ ರಾಯಲ್ಸ್ ತಂಡವು ನೀಡಿದ್ದ 211 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಪರ ಆರಂಭಿಕರಾಗಿ ಕೇನ್ ವಿಲಿಯಮ್ಸನ್ ಹಾಗೂ ಅಭಿಷೇಕ್ ಶರ್ಮಾ ಕಣಕ್ಕಿಳಿದಿದ್ದರು. ಕೇನ್ ವಿಲಿಯಮ್ಸನ್ 6 ಎಸೆತಗಳನ್ನು ಎದುರಿಸಿ 2 ರನ್ ಬಾರಿಸಿ ಕ್ರೀಸ್‌ನಲ್ಲಿ ನೆಲೆಯೂರುವ ಯತ್ನ ನಡೆಸಿದ್ದರು. ಆದರೆ ಕನ್ನಡದ ವೇಗಿ ಪ್ರಸಿದ್ಧ್ ಕೃಷ್ಣ ಎಸೆದ ಅದ್ಭುತ ಬಾಲ್, ವಿಲಿಯಮ್ಸನ್ ಬ್ಯಾಟ್ ಸವುರಿ, ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಗ್ಲೌಸ್‌ಗೆ ತಾಗಿ ಪುಟಿದೆದ್ದು, ಮೊದಲ ಸ್ಲಿಪ್‌ನಲ್ಲಿ ನಿಂತಿದ್ದ ದೇವದತ್ ಪಡಿಕ್ಕಲ್ ಕೈ ಸೇರಿತು.
ಆದರೆ ಕ್ಯಾಚ್ ಬಗ್ಗೆ ಅಂಪೈರ್‌ನಲ್ಲಿ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ತೀರ್ಪಿಗಾಗಿ ಥರ್ಡ್ ಅಂಪೈರ್ ಮೊರೆ ಹೋಗಲಾಯಿತು. ಮೈದಾನದಲ್ಲಿದ್ದ ಅಂಪೈರ್ ಸಾಫ್ಟ್ ಸಿಗ್ನಲ್ ಔಟ್ ಎಂದು ತೀರ್ಪಿತ್ತಿದ್ದರು. ರಿಪ್ಲೇನಲ್ಲಿ ಚೆಂಡು ದೇವದತ್ ಪಡಿಕ್ಕಲ್ ಕೈ ಸೇರುವ ಮುನ್ನ ಒಂದು ಪುಟಿತ ನೆಲಕ್ಕೆ ತಾಗಿ ಕ್ಯಾಚ್ ಆದಂತೆ ಸ್ಪಷ್ಟವಾಗಿ ಗೋಚರಿಸಿತ್ತು. ಹೀಗಿದ್ದೂ ಥರ್ಡ್ ಅಂಪೈರ್ ಔಟ್ ಎಂದು ತೀರ್ಪಿತ್ತರು.
ಅಂಪೈರ್ ಅವರ ಈ ವಿವಾದಾತ್ಮಕ ತೀರ್ಪನ್ನು ಕ್ರಿಕೆಟ್ ಅಭಿಮಾನಿಗಳು ಕಠಿಣ ಶಬ್ದಗಳಿಂದ ಕಂಡಿಸಿದ್ದಾರೆ. ಬೃಹತ್ ಗುರಿ ಬೆನ್ನತ್ತಿದ್ದ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ಎದುರು ಪ್ರಬಲ ಪೈಪೋಟಿ ನೀಡಬೇಕಿದ್ದರೆ, ಹೈದರಾಬಾದ್ ತಂಡದ ಬ್ಯಾಟಿಂಗ್ ಜೀವಾಳ ಎನಿಸಿದ್ದ ಕೇನ್ ವಿಲಿಯಮ್ಸನ್ ಹೆಚ್ಚುಹೊತ್ತು ಕ್ರೀಸ್‌ನಲ್ಲಿರಬೇಕಿತ್ತು. ಆದರೆ ಅಂಪೈರ್ ವಿವಾದಾತ್ಮಕ ತೀರ್ಪು ನೀಡಿದ್ದರಿಂದಲೇ ಸನ್‌ರೈಸರ್ಸ್ ಹೈದರಾಬಾದ್ ಪಂದ್ಯ ಕೈಚೆಲ್ಲುವಂತಾಯಿತು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಕೇನ್ ವಿಲಿಯಮ್ಸನ್ ಔಟ್ ಆಗಿರಲಿಲ್ಲ. ನೀವು ಮೂರ್ಖ, ಮುಠ್ಠಾಳ ಅಂಪೈರ್ ನೀನೇನು ಕುರುಡನಾ ಅಥವಾ ಹಣ ಪಡೆದಿದ್ದೀಯಾ ಎಂದು ಓರ್ವ ನೆಟ್ಟಿಗ ಕಿಡಿಕಾರಿದ್ದಾನೆ. ಮತ್ತೋರ್ವ ನೆಟ್ಟಿಗ, ಇದು ಹೇಗೆ ಔಟ್?, ಅಂಪೈರ್ ಅನಂತ ಪದ್ಮಾನಾಭನ್ ಅವರಿಂದ ನಿಜಕ್ಕೂ ಭಯಾನಕ ತೀರ್ಮಾನವಿದು. ಐಪಿಎಲ್‌ನಲ್ಲಿ ಅಂಪೈರ್‌ನಿಂದ ಮತ್ತೊಂದು ದೊಡ್ಡ ಪ್ರಮಾದ ಎಂದು ಟ್ವೀಟ್ ಮಾಡಿದ್ದಾರೆ.
ಸನ್‌ರೈಸರ್ಸ್‌ಗೆ ಹೀನಾಯ ಸೋಲು: ರಾಜಸ್ಥಾನ ರಾಯಲ್ಸ್ ನೀಡಿದ್ದ 211 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ಪ್ರಸಿದ್ಧ್ ಕೃಷ್ಣ, ಟ್ರೆಂಟ್ ಬೌಲ್ಟ್ ಹಾಗೂ ಯುಜುವೇಂದ್ರ ಚಹಲ್ ಮಾರಕ ದಾಳಿಗೆ ತತ್ತರಿಸಿ ಕೇವಲ 24 ರನ್‌ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳನ್ನು ಕಳೆದುಕೊಂಡಿತು. ರಾಹುಲ್ ತ್ರಿಪಾಠಿ ಹಾಗೂ ನಿಕೋಲಸ್ ಪೂರನ್ ಶೂನ್ಯ ಸುತ್ತಿದರೆ, ಅಭಿಷೇಕ್ ಶರ್ಮಾ(9) ಹಾಗೂ ಕೇನ್ ವಿಲಿಯಮ್ಸನ್(2) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಏಯ್ಡನ್ ಮಾರ್ಕ್‌ರಮ್(57) ಹಾಗೂ ವಾಷಿಂಗ್ಟನ್ ಸುಂದರ್(40) ದಿಟ್ಟ ಹೋರಾಟ ನಡೆಸಿದರಾದರೂ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.