
ಲಂಡನ್: ಭಾರತ ಟೆಸ್ಟ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ, ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಇಲ್ಲಿನ ದಿ ಓವಲ್ ಸ್ಟೇಡಿಯಂನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಇನ್ನು ಇದೆಲ್ಲದರ ನಡುವೆ ರೋಹಿತ್ ಶರ್ಮಾ ಅವರು ಕೈಗೆ ತೊಟ್ಟ ವಾಚ್ ಇದೀಗ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಆಡೆಮರ್ಸ್ ಪಿಗುಯೆಟ್ ರಾಯಲ್ ಓಕ್ ಜಂಬೊ ಎಕ್ಸ್‌ಟ್ರಾ-ಥಿನ್ ಸ್ಮೋಕ್ಡ್ ಬರ್ಗಂಡಿ ಟೈಟಾನಿಯಂ ವಾಚ್ ತೊಟ್ಟು ಕಾಣಿಸಿಕೊಂಡರು. ಈ ವಾಚ್‌ನ ಮಾರುಕಟ್ಟೆ ಬೆಲೆ ಬರೋಬ್ಬರಿ 2.46 ಕೋಟಿ ರುಪಾಯಿಗಳಾಗಿವೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ 5ನೇ ಟೆಸ್ಟ್‌ನ ಮೂರನೇ ದಿನದಾಟದ ವೇಳೆಯಲ್ಲಿ ರೋಹಿತ್ ಶರ್ಮಾ ಸ್ಟೇಡಿಯಂಗೆ ಬಂದು ಈ ಮ್ಯಾಚ್ ವೀಕ್ಷಿಸಿದರು.
ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಕೆಲವೇ ವಾರಗಳ ಮೊದಲು ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ದಿಢೀರ್ ಎನ್ನುವಂತೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇದೀಗ ಶನಿವಾರ ರೋಹಿತ್ ಶರ್ಮಾ ಬ್ಲ್ಯಾಕ್ ಡೆನೀಮ್ ಜಾಕೆಟ್ ಹಾಗೂ ಜೀನ್ಸ್ ತೊಟ್ಟು ರಿಲ್ಯಾಕ್ಸ್ಡ್ ಆಗಿ ಕಾಣಿಸಿಕೊಂಡಿದ್ದರು. ಇದಷ್ಟೇ ಅಲ್ಲದೇ ಟೀಂ ಇಂಡಿಯಾ ಅರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ಗೆ ವಿಶೇಷ ಸಂದೇಶವನ್ನು ರವಾನಿಸಿದ್ದರು. ಓವಲ್ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಭಾರತ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು.
ಈ ಕುರಿತಂತೆ ಮಾತನಾಡಿದ ಯಶಸ್ವಿ ಜೈಸ್ವಾಲ್, 'ನಾನು ರೋಹಿತ್ ಶರ್ಮಾ ಅವರನ್ನು ಕಾಣುತ್ತಿದ್ದಂತೆಯೇ ಹಾಯ್ ಮಾಡಿದೆ. ಆಗ ಅವರು ಇದೇ ರೀತಿ ಬ್ಯಾಟಿಂಗ್ ಮುಂದುವರೆಸಿ ಎಂದು ಸಲಹೆ ನೀಡಿದರು' ಎಂದು ಎಡಗೈ ಆರಂಭಿಕ ಬ್ಯಾಟರ್ ಹೇಳಿದರು.
ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್ ಗೆಲ್ಲುತ್ತಿದ್ದಂತೆಯೇ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಹಿಟ್‌ಮ್ಯಾನ್ ವಿದಾಯ ಘೋಷಿಸಿದ್ದರು. ಇನ್ನು ಇದಾದ ಬಳಿಕ ಕೆಲ ತಿಂಗಳ ಹಿಂದಷ್ಟೇ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾ ಟೆಸ್ಟ್ ಮಾದರಿಗೂ ವಿದಾಯ ಘೋಷಿಸಿದ್ದಾರೆ. ಸದ್ಯ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಭಾರತ ತಂಡದ ನಾಯಕರಾಗಿ ಮುಂದುವರೆದಿದ್ದಾರೆ. 2023ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಎದುರು ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
ಇನ್ನು ಟೆಸ್ಟ್ ಕ್ರಿಕೆಟ್ ವಿಚಾರಕ್ಕೆ ಬರುವುದಾರೇ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ, 4 ಟೆಸ್ಟ್ ಪಂದ್ಯದ ಅಂತ್ಯದ ವೇಳೆಗೆ 1-2ರ ಹಿನ್ನಡೆಯಲ್ಲಿದೆ. ಇದೀಗ ಐದನೇ ಟೆಸ್ಟ್ ಪಂದ್ಯವು ರೋಚಕ ಹಂತ ತಲುಪಿದೆ. ಕೊನೆಯ ಟೆಸ್ಟ್ ಪಂದ್ಯವನ್ನು ಗೆಲ್ಲಲು ಆತಿಥೇಯ ಇಂಗ್ಲೆಂಡ್ ತಂಡಕ್ಕೆ ಐದನೇ ದಿನ ಕೇವಲ 35 ರನ್ ಅಗತ್ಯವಿದೆ. ಇನ್ನೊಂದೆಡೆ ಭಾರತಕ್ಕೆ ಓವಲ್ ಟೆಸ್ಟ್ ಗೆಲ್ಲಲು ಇನ್ನು ಕೇವಲ 4 ವಿಕೆಟ್ ಅಗತ್ಯವಿದೆ. ಹೀಗಾಗಿ ಕೊನೆಯ ದಿನದಾಟದ ಮೇಲೆ ಕ್ರಿಕೆಟ್ ಅಭಿಮಾನ ಚಿತ್ತ ನೆಟ್ಟಿದೆ. ಭಾರತ ಈ ಟೆಸ್ಟ್ ಗೆದ್ದು 2-2 ಸರಣಿ ಸಮಬಲ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದ್ದರೇ, ಇಂಗ್ಲೆಂಡ್ 3-1 ಅಂತರದಲ್ಲಿ ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.