
ಹೈದರಾಬಾದ್(ಜ.18): ಭಾರತ ತಂಡ 2023ರ ಏಕದಿನ ವಿಶ್ವಕಪ್ ಸಿದ್ಧತೆಗಾಗಿ ಮುಂದಿನ ಕೆಲ ತಿಂಗಳಲ್ಲಿ ತವರಿನಲ್ಲಿ ಸಾಲು ಸಾಲು ಸರಣಿಗಳನ್ನು ಆಡಲಿದ್ದು, ಶ್ರೀಲಂಕಾ ವಿರುದ್ಧದ ಮೊದಲ ಸವಾಲು ಜಯಿಸಿದ ತಂಡಕ್ಕೀಗ ನ್ಯೂಜಿಲೆಂಡ್ ಚಾಲೆಂಜ್ ಎದುರಾಗಲಿದೆ. 3 ಪಂದ್ಯಗಳ ಸರಣಿಯ ಮೊದಲ ಪಂದ್ಯ ಬುಧವಾರ ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಲಂಕಾ ವಿರುದ್ಧ ಅತಿದೊಡ್ಡ ಗೆಲುವಿನ ದಾಖಲೆಯೊಂದಿಗೆ 3-0ಯಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿ ಆತ್ಮವಿಶ್ವಾಸ ವೃದ್ಧಿಸಿಕೊಂಡಿರುವ ಭಾರತಕ್ಕೆ ನ್ಯೂಜಿಲೆಂಡ್‌ನಿಂದ ಕಠಿಣ ಪೈಪೋಟಿ ಎದುರಾಗುವ ನಿರೀಕ್ಷೆಯಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಪ್ರವಾಸ ಕೈಗೊಂಡ ತಂಡಗಳ ಪೈಕಿ ಹೆಚ್ಚು ಸ್ಪರ್ಧಾತ್ಮಕ ಪಂದ್ಯಗಳಿಗೆ ಸಾಕ್ಷಿಯಾದ ತಂಡಗಳಲ್ಲಿ ನ್ಯೂಜಿಲೆಂಡ್ ಸಹ ಒಂದು. 2016, 2017ರ ಸರಣಿಗಳ ಫಲಿತಾಂಶ ಕೊನೆ ಪಂದ್ಯಗಳಲ್ಲಿ ನಿರ್ಧಾರವಾಗಿತ್ತು. ಕಿವೀಸ್, ಪಾಕಿಸ್ತಾನದಲ್ಲಿ 2-1ರ ಸರಣಿ ಜಯದೊಂದಿಗೆ ಭಾರತಕ್ಕೆ ಆಗಮಿಸಿದೆ ಎನ್ನುವುದನ್ನೂ ಮರೆಯುವ ಹಾಗಿಲ್ಲ.
ಈ ಸರಣಿಗೆ ವಿಲಿಯಮ್ಸನ್ ಹಾಗೂ ಸೌಥಿಗೆ ವಿಶ್ರಾಂತಿ ನೀಡಲಾಗಿದೆ. ಬೌಲ್ಟ್ ಸಹ ತಂಡದಲ್ಲಿಲ್ಲ. ಹೀಗಾಗಿ, ಪೂರ್ಣ ಪ್ರಮಾಣದ ಬಲವಿಲ್ಲದಿದ್ದರೂ ಕಿವೀಸ್ ಪಡೆಯನ್ನು ಭಾರತ ಲಘುವಾಗಿ ಪರಿಗಣಿಸುವಂತಿಲ್ಲ. ಭಾರತ ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಸರಣಿ ಸೋತಿದೆ ಎನ್ನುವ ಅಂಶ ಕಿವೀಸ್ ಪಡೆಯ ಗಮನದಲ್ಲಿರಲ್ಲಿದ್ದು, ಉಪಖಂಡದಲ್ಲಿ ಟೀಂ ಇಂಡಿಯಾವನ್ನು ಸೋಲಿಸಲು ಸಾಧ್ಯವಿದೆ ಎನ್ನುವ ನಂಬಿಕೆಯೊಂದಿಗೆ ಕಣಕ್ಕಿಳಿಯಲಿದೆ. ಗೆದ್ದರೂ, ಸೋತರೂ ವಿಶ್ವಕಪ್ ಮುಂದಿಟ್ಟುಕೊಂಡು ಭಾರತದಲ್ಲಿ ಸರಣಿ ಆಡುವುದು ನ್ಯೂಜಿಲೆಂಡ್‌ಗೂ ಉತ್ತಮ ಅನುಭವ ಒದಗಿಸಲಿದೆ. ಭಾರತ ವಿರುದ್ಧ ಆಡುವುದು ಎಂದರೆ ಟಾಮ್ ಲೇಥಮ್‌ಗೆ ಬಹಳ ಪ್ರೀತಿ. 17 ಇನ್ನಿಂಗ್ಸಲ್ಲಿ 65.07ರ ಸರಾಸರಿಯಲ್ಲಿ ರನ್ ಕಲೆಹಾಕಿರುವ ಲೇಥಮ್, ಕಳೆದ ಬಾರಿ ಸ್ಪಿನ್ನರ್‌ಗಳ ವಿರುದ್ಧ ಯಶಸ್ವಿಯಾಗಿ ಸ್ವೀಪ್ ಶಾಟ್‌ಗಳ ಪ್ರಯೋಗ ನಡೆಸಿ ಭಾರತವನ್ನು ಕಾಡಿದ್ದರು. ಮತ್ತೊಂದು ಅವಿಸ್ಮರಣೀಯ ಸರಣಿಗಾಗಿ ಲೇಥಮ್ ಕಾಯುತ್ತಿದ್ದಾರೆ.
ಕಿವೀಸ್ ಎದುರಿನ ಸರಣಿಗೂ ಮುನ್ನ ಟಿಂ ಇಂಡಿಯಾಗೆ ಬಿಗ್ ಶಾಕ್, ಸ್ಟಾರ್ ಆಟಗಾರ ಔಟ್..!
ಶ್ರೇಯಸ್ ಔಟ್: ಬೆನ್ನು ನೋವಿನ ಸಮಸ್ಯೆ ಎದುರಿಸುತ್ತಿರುವ ಕಾರಣ ಶ್ರೇಯಸ್ ಅಯ್ಯರ್ ಸರಣಿಯಿಂದ ಹೊರಬಿದ್ದಿದ್ದು, ಅವರ ಬದಲಿಗೆ ರಜತ್ ಪಾಟೀದಾರ್ ತಂಡ ಸೇರಿದ್ದಾರೆ. ಆದರೆ ಶ್ರೇಯಸ್ ಆಡುತ್ತಿದ್ದ 4ನೇ ಕ್ರಮಾಂಕ ಸೂರ್ಯಕುಮಾರ್‌ಗೆ ಸಿಗಲಿದೆ. ವೈಯಕ್ತಿಕ ಕಾರಣಗಳಿಂದ ಹೊರಗುಳಿದಿರುವ ರಾಹುಲ್ ಬದಲು ಇಶಾನ್ ಕಿಶನ್ ಆಡಲಿದ್ದಾರೆ. ಅಕ್ಷರ್ ಸಹ ಹೊರಗುಳಿದಿದ್ದು, ವಾಷಿಂಗ್ಟನ್‌ಗೆ ಸ್ಥಾನ ಸಿಗುವ ನಿರೀಕ್ಷೆ ಇದೆ. ಉಳಿದಂತೆ ಲಂಕಾ ವಿರುದ್ಧ ಆಡಿದ ತಂಡವೇ ಇರಲಿದೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್/ಯುಜುವೇಂದ್ರ ಚಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್.
ನ್ಯೂಜಿಲೆಂಡ್: ಫಿನ್ ಆ್ಯಲೆನ್, ಡೆವೊನ್ ಕಾನ್‌ವೇ, ಮಾರ್ಕ್ ಚಾಪ್ಮನ್/ಹೆನ್ರಿ ನಿಕೋಲ್ಸ್, ಡೇರಲ್ ಮಿಚೆಲ್, ಟಾಮ್ ಲೇಥಮ್(ನಾಯಕ), ಗ್ಲೆನ್ ಫಿಲಿಫ್ಸ್, ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಡಫಿ, ಲಾಕಿ ಫಗ್ರ್ಯೂಸನ್.
ಪಂದ್ಯ ಆರಂಭ: ಮಧ್ಯಾಹ್ನ 1.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.