
ಲಂಡನ್(ಅ.01): ಮುಂಬರುವ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಶತಕ ಬಾರಿಸಲಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಗ್ರೇಮ್ ಸ್ವಾನ್ ಅಭಿಪ್ರಾಯಪಟ್ಟಿದ್ದಾರೆ. 34 ವರ್ಷದ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 4 ಶತಕ ಬಾರಿಸುವ ಮೂಲಕ ಅತಿಹೆಚ್ಚು ಅಂತಾರಾಷ್ಟ್ರೀಯ ಟಿ20 ಶತಕ ಬಾರಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ರೋಹಿತ್ ಶರ್ಮಾ ಬ್ಯಾಟಿಂದ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಖಲಾಗಿಲ್ಲ.
ನೀವು ಕ್ರಿಕೆಟ್ ಆಡುತ್ತೀರಾ ಎಂದಾದರೆ ಕೇವಲ ಫಾರ್ಮ್ ಅನ್ನು ಅಷ್ಟೇ ನೋಡುತ್ತೀರ. ಆದರೆ ನಾಯಕನಾದವರಿಗೆ ಇನ್ನೂ ಹೆಚ್ಚಿನ ಒತ್ತಡ ಇರುತ್ತದೆ. ಜನರು ವಿರಾಟ್ ಕೊಹ್ಲಿ, ಆರ್‌ಸಿಬಿ ತಂಡವನ್ನು ಮುನ್ನಡೆಸುವಾಗಲೂ ಹೀಗೆ ಮಾತನಾಡುತ್ತಿದ್ದರು. ಬ್ಯಾಟ್ಸ್‌ಮನ್ ಆಗಿ ನಾಯಕತ್ವದ ಬಗ್ಗೆ ಹೆಚ್ಚು ಯೋಚಿಸಲು ಹೋಗಬಾರದು. ಸ್ಪಷ್ಟವಾದ ಮನಸ್ಸಿನಲ್ಲಿ ಚೆಂಡನ್ನು ಎದುರಿಸಬೇಕಾಗುತ್ತದೆ ಎಂದು ಗ್ರೇಮ್ ಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.
ರೋಹಿತ್ ಶರ್ಮಾ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಖಂಡಿತವಾಗಿಯೂ ಶತಕ ಬಾರಿಸಲಿದ್ದಾರೆ. ಈ ಬಗ್ಗೆ ನನಗೆ ಯಾವುದೇ ಅನುಮಾನ ಉಳಿದಿಲ್ಲ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಬಲ್ಲ ಸರಿಯಾದ ವ್ಯಕ್ತಿಯೆಂದರೆ ಅದು ರೋಹಿತ್ ಶರ್ಮಾ. ಅವರು ದೊಡ್ಡ ಮೊತ್ತ ಗಳಿಸಲು ವಿಫಲವಾದರೂ ಸಹಾ ಟೀಂ ಇಂಡಿಯಾ ಸತತವಾಗಿ ದೊಡ್ಡ ಮೊತ್ತ ಗಳಿಸುತ್ತಲೇ ಬಂದಿದೆ ಎಂದು ಸ್ವಾನ್ ಹೇಳಿದ್ದಾರೆ.
ಟೀಂ ಇಂಡಿಯಾ ನಾಯಕರಾದ ಬಳಿಕ ರೋಹಿತ್ ಶರ್ಮಾ ಕೊಂಚ ಒತ್ತಡಕ್ಕೆ ಒಳಗಾದಂತೆ ಕಂಡು ಬರುತ್ತಿದ್ದಾರೆ. ಅವರಿಗೆ ಸಿಕ್ಕ ಉತ್ತಮ ಆರಂಭವನ್ನು ದೊಡ್ಡಮೊತ್ತವನ್ನಾಗಿ ಪರಿವರ್ತಿಸಲು ಪದೇ ಪದೇ ವಿಫಲವಾಗುತ್ತಿದ್ದಾರೆ. ಇದರ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಿದ್ದು, ದೊಡ್ಡ ಮೊತ್ತ ಕಲೆಹಾಕಲು ಆಸರೆಯಾಗುತ್ತಿದ್ದಾರೆ. ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ.
ಭಾರತಕ್ಕೆ ಮತ್ತೊಬ್ಬ ಜಹೀರ್ ಖಾನ್ ಸಿಕ್ಕಿದರು ಎಂದ ಪಾಕ್ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್..!
ಸದ್ಯ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ತವರಿನಲ್ಲಿ ದಕ್ಷಿಣ ಆಫ್ರಿಕಾ ಎದುರು ಟಿ20 ಸರಣಿಯನ್ನು ಆಡುತ್ತಿದ್ದು, ಮೊದಲ ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇನ್ನು ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗೆ ನಡೆಯಲಿದೆ. ಟೀಂ ಇಂಡಿಯಾ ಅಕ್ಟೋಬರ್ 23ರಂದು ಮೆಲ್ಬೊರ್ನ್ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.