ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್, ರಿಯಾನ್ ಪರಾಗ್‌ಗೆ ದೊಡ್ಡ ಶಾಕ್ ಕೊಟ್ಟ ಬಿಸಿಸಿಐ!

Published : Apr 30, 2026, 07:52 PM IST
Riyan Parag Vaping

ಸಾರಾಂಶ

ಐಪಿಎಲ್ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಬಳಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಅವರಿಗೆ ಬಿಸಿಸಿಐ ಪಂದ್ಯದ ಶುಲ್ಕದ ಶೇ. 25ರಷ್ಟು ದಂಡ ವಿಧಿಸಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಯ ಈ ತಪ್ಪನ್ನು ಪರಾಗ್ ಒಪ್ಪಿಕೊಂಡಿದ್ದು, ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.

ಮುಂಬೈ: ಐಪಿಎಲ್ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ (ವೇಪಿಂಗ್) ಬಳಸಿದ್ದ ರಾಜಸ್ಥಾನ ರಾಯಲ್ಸ್ ಕ್ಯಾಪ್ಟನ್ ರಿಯಾನ್ ಪರಾಗ್ ಅವರಿಗೆ ಬಿಸಿಸಿಐ ಭಾರಿ ದಂಡ ವಿಧಿಸಿದೆ. ಅವರ ಪಂದ್ಯದ ಶುಲ್ಕದ ಶೇ. 25ರಷ್ಟು ದಂಡ ಕಟ್ಟಬೇಕಾಗಿದೆ. ಆಟದ ಘನತೆಗೆ ಧಕ್ಕೆ ತರುವಂತಹ ಈ ವರ್ತನೆಗಾಗಿ ಬಿಸಿಸಿಐ ಈ ಕ್ರಮ ಕೈಗೊಂಡಿದೆ. ಇದೇ 28ರಂದು ಮುಲ್ಲನ್‌ಪುರ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಎರಡನೇ ಇನ್ನಿಂಗ್ಸ್ ವೇಳೆ ಈ ಘಟನೆ ನಡೆದಿತ್ತು. ಡ್ರೆಸ್ಸಿಂಗ್ ರೂಮ್‌ನಲ್ಲಿ ಪರಾಗ್ ವೇಪ್ ಬಳಸುತ್ತಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

25 ಲಕ್ಷ ರುಪಾಯಿ ದಂಡ ಕಟ್ಟಿದ ಪರಾಗ್

ಈ ಸೀಸನ್‌ನಲ್ಲಿ ರಿಯಾನ್ ಪರಾಗ್ 14 ಕೋಟಿ ರೂಪಾಯಿ ಒಪ್ಪಂದ ಹೊಂದಿದ್ದಾರೆ. ಅಂದರೆ, ಒಂದು ಪಂದ್ಯಕ್ಕೆ ಅವರ ಸಂಭಾವನೆ ಸುಮಾರು ಒಂದು ಕೋಟಿ ರೂಪಾಯಿ. ಇದರ ಶೇ. 25ರಷ್ಟು ಅಂದರೆ, ಸುಮಾರು 25 ಲಕ್ಷ ರೂಪಾಯಿಗಳನ್ನು ಅವರು ದಂಡವಾಗಿ ಪಾವತಿಸಬೇಕಾಗುತ್ತದೆ. ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.21ರ ಅಡಿಯಲ್ಲಿ ಇದು ಲೆವೆಲ್ 1 ಅಪರಾಧ ಎಂದು ಮ್ಯಾಚ್ ರೆಫರಿ ಅಮಿತ್ ಶರ್ಮಾ ತೀರ್ಪು ನೀಡಿದ್ದಾರೆ. ನೀತಿ ಸಂಹಿತೆಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸದ, ಆದರೆ ಆಟದ ಗೌರವಕ್ಕೆ ಧಕ್ಕೆ ತರುವ ಕೃತ್ಯಗಳಿಗೆ ಈ ನಿಯಮ ಅನ್ವಯವಾಗುತ್ತದೆ.

ಪರಾಗ್‌ಗೆ ದಂಡದ ಜತೆ ಡಿ-ಮೆರಿಟ್ ಪಾಯಿಂಟ್

ದಂಡದ ಜೊತೆಗೆ, ಪರಾಗ್ ಅವರ ಖಾತೆಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ಸೇರಿಸಲಾಗಿದೆ. ಪರಾಗ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇದೇ ಮೊದಲ ಬಾರಿಗೆ ಇಂತಹ ನಿಯಮ ಉಲ್ಲಂಘನೆ ಮಾಡಿದ್ದರಿಂದ ಶಿಕ್ಷೆಯನ್ನು ಲೆವೆಲ್ 1 ಹಂತಕ್ಕೆ ಸೀಮಿತಗೊಳಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ತಂಡ ಮತ್ತು ಅಧಿಕಾರಿಗಳ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ.

ಐಪಿಎಲ್‌ನ ಘನತೆಯನ್ನು ಕಾಪಾಡಲು ಆಟಗಾರರು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾದರಿಯಾಗಿ ವರ್ತಿಸಬೇಕು ಎಂದು ಬೋರ್ಡ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಗುರುವಾರ ಬೆಳಗ್ಗೆ ಬಿಸಿಸಿಐ ಪರಾಗ್‌ಗೆ ಅಧಿಕೃತವಾಗಿ ನೋಟಿಸ್ ನೀಡಿತ್ತು. ಮೇಲ್ಮನವಿ ಸಲ್ಲಿಸಲು ಅವಕಾಶವಿದ್ದರೂ, ದಂಡ ಪಾವತಿಸಿ ವಿವಾದವನ್ನು ಅಂತ್ಯಗೊಳಿಸಲು ಪರಾಗ್ ನಿರ್ಧರಿಸಿದ್ದಾರೆ.

ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ರಾಜಸ್ಥಾನ ರಾಯಲ್ಸ್:

ರಿಯಾನ್ ಪರಾಗ್ ಬ್ಯಾಟರ್‌ ಆಗಿ ನಿರಂತರವಾಗಿ ವೈಫಲ್ಯ ಅನುಭವಿಸುತ್ತಿದ್ದರೂ, ನಾಯಕನಾಗಿ ಯಶಸ್ವಿಯಾಗುತ್ತಾ ಬಂದಿದ್ದಾರೆ. ಇದೀಗ ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ ರಾಯಲ್ಸ್ ತಂಡವು ಆಡಿದ 9 ಪಂದ್ಯಗಳಲ್ಲಿ ಆರು ಗೆಲುವು ಹಾಗೂ ಮೂರು ಸೋಲುಗಳೊಂದಿಗೆ 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕೂಡಾ ತಲಾ 12 ಅಂಕಗಳನ್ನು ಹೊಂದಿವೆಯಾದರೂ, ನೆಟ್‌ ರನ್‌ರೇಟ್ ಹೆಚ್ಚಿರುವುದರಿಂದ ಆರ್‌ಸಿಬಿ ಎರಡನೇ ಹಾಗೂ ಸನ್‌ರೈಸರ್ಸ್ ಮೂರನೇ ಸ್ಥಾನದಲ್ಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಇದೊಂದು ಸಿನಿಮಾ ನೋಡಿದ ಹಾಗೆ': 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿ ಮಾತುಗಳನ್ನಾಡಿದ ಚೇತೇಶ್ವರ್ ಪೂಜಾರ
IPL 2026: ಆರನೇ ಸೋಲು ಕಂಡ ಮುಂಬೈ ಇಂಡಿಯನ್ಸ್; ಆದ್ರೇ ಈಗಲೂ ಇದೆ ಪಾಂಡ್ಯ ಪಡೆಗೆ ಪ್ಲೇ ಆಫ್‌ಗೇರುವ ಚಾನ್ಸ್!