ತೀವ್ರ ಅಪಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್
ಟೀಂ ಇಂಡಿಯಾ ಕ್ರಿಕೆಟಿಗ ಪಂತ್, ಉತ್ತರಖಂಡ್‌ನ ರೂರ್ಕಿಯಲ್ಲಿ ರಸ್ತೆ ಅಪಘಾತ
ಪ್ಲಾಸ್ಟಿಕ್ ಸರ್ಜರಿ ಮಾಡಿಸಲು ಡೆಹ್ರಾಡೂನ್‌ನಿಂದ ಪಂತ್ ಡೆಲ್ಲಿಗೆ ಏರ್‌ಲಿಫ್ಟ್ ಸಾಧ್ಯತೆ
ನವದೆಹಲಿ(ಡಿ.31): ಅಪಘಾತದಿಂದ ತೀವ್ರವಾಗಿ ಗಾಯಗೊಂಡಿರುವ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಆಸ್ಪ್ರೇಲಿಯಾ ವಿರುದ್ಧದ ತವರಿನ ಟೆಸ್ಟ್ ಸರಣಿಗೆ ಅಲಭ್ಯರಾಗಲಿದ್ದಾರೆ ಎನ್ನಲಾಗಿದೆ. ರಿಷಭ್ ಪಂತ್‌ಗೆ ಕನಿಷ್ಠ ಎರಡು, ಗರಿಷ್ಠ ಆರು ತಿಂಗಳ ವಿಶ್ರಾಂತಿ ಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ 16ನೇ ಆವೃತ್ತಿಯ ಐಪಿಎಲ್‌ನಿಂದಲೂ ಅವರು ಹೊರಗುಳಿಯಲಿದ್ದಾರೆ.
ಅಪಘಾತಕ್ಕೂ ಮೊದಲೇ ರಿಷಭ್ ಪಂತ್ ಗಾಯದ ಸಮಸ್ಯೆಯಿಂದಾಗಿ ಶ್ರೀಲಂಕಾ ವಿರುದ್ಧದ ಸರಣಿಯಿಂದ ಹೊರಬಿದ್ದಿದ್ದರು. ಅವರು ಪುನಶ್ಚೇತನ ಶಿಬಿರಕ್ಕಾಗಿ ಬೆಂಗಳೂರಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್‌ಸಿಎ)ಗೆ ಬರಬೇಕಿತ್ತು. ಪಂತ್ ಇನ್ನೂ ಕೆಲ ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಲಿದ್ದು, ಅವರು ಎನ್‌ಸಿಎಗೆ ಆಗಮಿಸಲೇ ಕೆಲ ತಿಂಗಳುಗಳು ಬೇಕಾಗಬಹುದು ಎನ್ನಲಾಗಿದೆ.
ಚಿಕಿತ್ಸೆಗೆ ಸೂಕ್ತ ನೆರವು: ಬಿಸಿಸಿಐ
ಪಂತ್ ಆರೋಗ್ಯದ ಬಗ್ಗೆ ಶುಕ್ರವಾರ ಬಿಸಿಸಿಐ ಪ್ರಕಟಣೆ ಹೊರಡಿಸಿದ್ದು, ಕ್ರಿಕೆಟ್ ಮಂಡಳಿಯ ವೈದ್ಯಕೀಯ ತಂಡ ಪಂತ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರ ಜೊತೆ ನಿರಂತರ ಸಂಪರ್ಕದಲ್ಲಿದೆ ಎಂದು ತಿಳಿಸಿದೆ. ರಿಷಭ್ ಚೇತರಿಕೆಗೆ ಅಗತ್ಯವಿರುವ ಎಲ್ಲಾ ಚಿಕಿತ್ಸೆ ಹಾಗೂ ನೆರವು ಒದಗಿಸುತ್ತೇವೆ ಎಂದು ಕಾರ‍್ಯದರ್ಶಿ ಜಯ್ ಶಾ ತಿಳಿಸಿದ್ದಾರೆ.
ದೆಹಲಿಗೆ ಏರ್‌ಲಿಫ್ಟ್..?
ರಿಷಭ್ ಪಂತ್ ಲಿಗಮೆಂಟ್ ಗಾಯದ ಚಿಕಿತ್ಸೆಯು ತನ್ನ ವೈದ್ಯಕೀಯ ತಂಡದ ಉಪಸ್ಥಿತಿಯಲ್ಲಿಯೇ ನಡೆಯಲಿದೆ ಎಂದು ಬಿಸಿಸಿಐ ಈಗಾಗಲೇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಸದ್ಯದಲ್ಲಿಯೇ ರಿಷಭ್ ಪಂತ್ ಅವರನ್ನು ಡೆಹರಾಡೂನ್‌ನಿಂದ ಡೆಲ್ಲಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಲು ಏರ್‌ಲಿಫ್ಟ್ ಮೂಲಕ ಸ್ಥಳಾಂತರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಗತ್ಯಬಿದ್ದರೆ, ವಿದೇಶದಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಬಿಸಿಸಿಐ, ಪಂತ್‌ರ ತಾಯಿಗೆ ತಿಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ
ಪಂತ್‌ಗೆ ಗಂಭೀರ ಗಾಯ; ಆದರೂ ಬಚಾವ್
ಭಾರತ ಕ್ರಿಕೆಟ್ ತಂಡದ ಪ್ರಮುಖ ಆಟಗಾರ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಶುಕ್ರವಾರ ಮುಂಜಾನೆ ದೆಹಲಿ-ಡೆಹರಾಡೂನ್ ಹೆದ್ದಾರಿಯಲ್ಲಿ ಭೀಕರ ಕಾರು ಅಪಘಾತಕ್ಕೆ ತುತ್ತಾಗಿದ್ದು, ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಲ್ಲಿ 25 ವರ್ಷದ ಪಂತ್ ಅವರ ತಲೆ, ಕೈ, ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿವೆ. ಎಂಆರ್‌ಐ ಸ್ಕಾ್ಯನ್ ಮೂಲಕ ಅವರ ಮಿದುಳು, ಬೆನ್ನು ಹುರಿ(ಸ್ಪೈನಲ್ ಕಾರ್ಡ್)ಗೆ ಪೆಟ್ಟು ಬಿದ್ದಿಲ್ಲ ಎಂದು ದೃಢಪಟ್ಟಿದೆ. ಪ್ರಾಣಾಪಾಯದಿಂದ ಪಾರಾಗಿರುವ ಪಂತ್ ಸದ್ಯ ಡೆಹರಾಡೂನ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಿಷಬ್ ಪಂತ್ ಅಪಘಾತ, ಪ್ರಾರ್ಥನೆ ಸಂದೇಶದೊಂದಿಗೆ ಸಸ್ಪೆನ್ಸ್ ಮುಂದುವರಿಸಿದ ನಟಿ ಊರ್ವಶಿ!
ಏನಾಯ್ತು?
ಗುರುವಾರ ರಾತ್ರಿ ರಿಷಭ್ ತಮ್ಮ ಮರ್ಸಿಡೀಸ್ ಕಾರನ್ನು ತಾವೇ ಚಾಲನೆ ಮಾಡುತ್ತಾ ದೆಹಲಿಯಿಂದ ಉತ್ತರಾಖಂಡದ ರೂರ್ಕೀ ಎಂಬಲ್ಲಿರುವ ತಮ್ಮ ನಿವಾಸಕ್ಕೆ ಹೊರಟಿದ್ದರು. ಹೊಸ ವರ್ಷವನ್ನು ತಾಯಿಯ ಜೊತೆ ಆಚರಿಸಲು, ಅವರಿಗೆ ಅಚ್ಚರಿ ನೀಡಲು ತೆರಳುತ್ತಿದ್ದರು. ಈ ವೇಳೆ ಬೆಳಗ್ಗಿನ ಜಾವ 5.30ರ ಸುಮಾರಿಗೆ ಮೊಹಮದ್‌ಪುರ ಎಂಬಲ್ಲಿ ಅಪಘಾತ ಸಂಭವಿಸಿದೆ. ಕ್ಷಣಾರ್ಧದಲ್ಲೇ ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿದೆ. ಆದರೆ ಬೆಂಕಿ ಹೊತ್ತಿಕೊಳ್ಳುವ ಮುನ್ನ ಕೂದಲೆಳೆ ಅಂತರದಲ್ಲಿ ಪಂತ್ ಕಾರಿನ ಗಾಜು ಒಡೆದು ಹೊರಬಂದಿದ್ದು, ಬಲುದೊಡ್ಡ ಅಪಾಯದಿಂದ ಪಾರಾಗಿದ್ದಾರೆ. ಅವರ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿದ್ದರೂ ಯಾವುದೇ ಮೂಳೆ ಮುರಿದಿಲ್ಲ. ಬೆಂಕಿಯಿಂದ ಸುಟ್ಟಗಾಯಗಳೂ ಆಗಿಲ್ಲ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ನೆರವಿಗೆ ಧಾವಿಸಿದ ಬಸ್ ಚಾಲಕ
ಕಾರಿನಿಂದ ಹೊರಬಂದು ರಸ್ತೆಯಲ್ಲಿ ಬಿದ್ದಿದ್ದ ರಿಷಭ್‌ರ ಸಹಾಯಕ್ಕೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ ಚಾಲಕ ಧಾವಿಸಿದ್ದಾರೆ. ರಸ್ತೆಯ ಪಕ್ಕದಲ್ಲೇ ರಿಷಭ್‌ರನ್ನು ಮಲಗಿಸಿ ತಮ್ಮ ಹೊದಿಕೆಯನ್ನು ಅವರ ಮೈ ಮೇಲೆ ಹಾಕಿ, ಬಳಿಕ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದಾರೆ. ಮೊದಲು ರೂರ್ಕೀಯ ಸಕ್ಷಮ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಡೆಹರಾಡೂನ್‌ನ ಆಸ್ಪತ್ರೆಗೆ ಸೇರಿಸಲಾಗಿದೆ.
ಅತಿವೇಗದ ಚಾಲನೆ, ನಿದ್ದೆ; ಸೀಟ್‌ಬೆಲ್ಟ್ ಕೂಡಾ ಇಲ್ಲ!
ಮೆರ್ಸಿಡಿಸ್ ಕಂಪನಿಯ ದುಬಾರಿ ಕಾರಿನಲ್ಲಿ ತೆರಳುತ್ತಿದ್ದ ರಿಷಭ್ ಕಾರನ್ನು ಸ್ವತಃ ತಾವೇ ಚಲಾಯಿಸುತ್ತಿದ್ದರು. ಕಾರಿನಲ್ಲಿ ಒಬ್ಬರೇ ಇದ್ದಿದ್ದು, ಚಾಲನೆ ವೇಳೆ ನಿದ್ದೆಯ ಮಂಪರಿನಲ್ಲಿ ತೂಕಡಿಸಿದ್ದಾರೆ. ಹೀಗಾಗಿ ಕಾರು ರಸ್ತೆಯ ಡಿವೈಡರ್‌ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ ಎಂದು ಹರಿದ್ವಾರ ನಗರ ಎಸ್‌ಪಿ ಎಸ್‌ಕೆ ಸಿಂಗ್ ತಿಳಿಸಿದ್ದಾರೆ. ಪಂತ್ ಕಾರನ್ನು ಅತಿವೇಗದಲ್ಲಿ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಅಪಘಾತದ ದೃಶ್ಯ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಡಿವೈಡರ್‌ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಕೆಲ ಮೀಟರ್ ದೂರಕ್ಕೆ ಬಿದ್ದಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಹೊತ್ತಿಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ. ರಿಷಭ್ ಕಾರು ಚಾಲನೆ ವೇಳೆ ಸೀಟ್‌ಬೆಲ್ಟ್ ಕೂಡಾ ಧರಿಸಿರಲಿಲ್ಲ ಎಂದು ಗೊತ್ತಾಗಿದೆ.
ಮೋದಿ ಸೇರಿ ಗಣ್ಯರ ಹಾರೈಕೆ
ಪಂತ್ ಶೀಘ್ರ ಚೇತರಿಕೆಗೆ ಪ್ರಧಾನಿ ನರೇಂದ್ರ ಮೋದಿ ಹಾರೈಸಿದ್ದು, ಬೇಗ ಗುಣಮುಖರಾಗಿ ಬರಲು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಮಾಜಿ, ಹಾಲಿ ಕ್ರಿಕೆಟಿಗರಾದ ರಿಕಿ ಪಾಂಟಿಂಗ್, ವಿವಿಎಸ್ ಲಕ್ಷ್ಮಣ್, ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಮಿಥಾಲಿ ರಾಜ್, ಒಲಿಂಪಿಕ್ಸ್ ಚಾಂಪಿಯನ್ ನೀರಜ್ ಚೋಪ್ರಾ ಸೇರಿದಂತೆ ಕ್ರೀಡಾ ತಾರೆಗಳು, ರಾಜಕೀಯ, ಸಾಮಾಜಿಕ ಕ್ಷೇತ್ರದ ಗಣ್ಯರು ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.