ಐಪಿಎಲ್ 2026: ನಿನ್ನೆ ನಡೆದ ಆರ್‌ಸಿಬಿ vs ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

Kannadaprabha News   | Kannada Prabha
Published : Mar 29, 2026, 08:20 AM IST
RCB-vs-SRH Match

ಸಾರಾಂಶ

2026ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ, ಆರ್‌ಸಿಬಿ ತಂಡ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್‌ರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಆರ್‌ಸಿಬಿ, 202 ರನ್‌ಗಳ ಗುರಿಯನ್ನು ಕೇವಲ 15.4 ಓವರ್‌ಗಳಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತು.

  • ಸ್ಪಂದನ್‌ ಕಣಿಯಾರ್, ಕನ್ನಡಪ್ರಭ 

ಬೆಂಗಳೂರು: ‘ಚಾಂಪಿಯನ್‌’ ಆರ್‌ಸಿಬಿ 2026ರ ಐಪಿಎಲ್‌ ಅನ್ನು ಚಾಂಪಿಯನ್‌ ತಂಡದಂತೆಯೇ ಆರಂಭಿಸಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಶನಿವಾರ ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 19ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ 6 ವಿಕೆಟ್‌ಗಳ ಅಮೋಘ ಗೆಲುವು ಸಾಧಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಮೊದಲು ಬ್ಯಾಟ್‌ ಮಾಡಿದ ಸನ್‌ರೈಸರ್ಸ್‌ 20 ಓವರಲ್ಲಿ 9 ವಿಕೆಟ್‌ಗೆ 201 ರನ್‌ ಗಳಿಸಿದರೆ, ಅಬ್ಬರಿಸಿ ಬೊಬ್ಬಿರಿದ ಆರ್‌ಸಿಬಿ ಕೇವಲ 15.4 ಓವರಲ್ಲಿ 4 ವಿಕೆಟ್‌ ನಷ್ಟಕ್ಕೆ 203 ರನ್‌ ಚಚ್ಚಿ ಮೊದಲ ಪಂದ್ಯದಲ್ಲೇ ಉತ್ತಮ ನೆಟ್‌ ರನ್‌ರೇಟ್‌ ಕಲೆಹಾಕಿತು.

ತನ್ನ ತವರು ಮೈದಾನದಲ್ಲಿ ಆರ್‌ಸಿಬಿಗೆ ಭರ್ಜರಿ ಸ್ವಾಗತ ದೊರೆಯಿತು. ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ ನಾಯಕ ರಜತ್‌ ಪಾಟೀದಾರ್‌, ಬೆಂಗಳೂರು ಅಭಿಮಾನಿಗಳಿಗೆ ಧನ್ಯವಾದ ಹೇಳಿ, ನಿಮಗೆ ನಿರಾಸೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

ಡಫಿ ಮಾರಕ ದಾಳಿ:

ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಬ್ಯಾಟರ್‌ಗಳ ಸ್ವರ್ಗವಾದರೂ, 10 ತಿಂಗಳ ಬಳಿಕ ಇಲ್ಲಿ ಪಂದ್ಯ ನಡೆಯುತ್ತಿದ್ದ ಕಾರಣ, ಪಿಚ್‌ ಹೇಗೆ ವರ್ತಿಸಲಿದೆ ಎನ್ನುವ ಕುತೂಹಲವಿತ್ತು. ಸನ್‌ರೈಸರ್ಸ್‌ನ ಪವರ್‌-ಪ್ಲೇ ನೋಡಿದಾಗ ಪಿಚ್‌ ಬೌಲರ್‌ಗಳಿಗೆ ಸಹಕಾರ ನೀಡುತ್ತಿದೆ ಎಂದು ಭಾಸವಾಯಿತು. ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ವೇಗಿ ಜೇಕಬ್‌ ಡಫಿ, ಸತತ 4 ಓವರ್ ಬೌಲ್‌ ಮಾಡಿ ಕೇವಲ 22 ರನ್‌ಗೆ 3 ವಿಕೆಟ್‌ ಕಿತ್ತರು. ಪವರ್‌-ಪ್ಲೇ ಬಳಿಕ ಇಶಾನ್‌ ಕಿಶನ್‌ ಅಬ್ಬರಿಸಲು ಶುರು ಮಾಡಿದ ಮೇಲೆ ಗೊತ್ತಾಗಿದ್ದು, ಪಿಚ್ ಈಗಲೂ ಬ್ಯಾಟರ್‌ ಸ್ನೇಹಿಯಾಗೇ ಇದೆ, ಡಫಿ ಅವರ ಅಮೋಘ ಬೌಲಿಂಗ್‌ ಎದುರು ಸನ್‌ರೈಸರ್ಸ್‌ ತಿಣುಕಾಡಿತು ಎಂದು.

27 ಎಸೆತದಲ್ಲಿ ಅರ್ಧಶತಕ ಪೂರೈಸಿದ ಕಿಶನ್‌ 38 ಎಸೆತದಲ್ಲಿ 8 ಬೌಂಡರಿ, 5 ಸಿಕ್ಸರ್‌ನೊಂದಿಗೆ 80 ರನ್‌ ಸಿಡಿಸಿದರು. ಕೊನೆಯಲ್ಲಿ ಅನಿಕೇತ್‌ ವರ್ಮಾ 18 ಎಸೆತದಲ್ಲಿ 43 ರನ್‌ ಚಚ್ಚಿ, ತಂಡದ ಮೊತ್ತವನ್ನು 200 ರನ್‌ ದಾಟಿಸಿದರು.

ಪವರ್‌-ಪ್ಲೇನಲ್ಲಿ ಮಾರಕ ದಾಳಿ ಹಾಗೂ ಅತ್ಯಮೋಘ ಕ್ಷೇತ್ರರಕ್ಷಣೆಯಿಂದ ಆರ್‌ಸಿಬಿ, ಸನ್‌ರೈಸರ್ಸ್‌ ಬೃಹತ್‌ ಮೊತ್ತ ದಾಖಲಿಸುವುದನ್ನು ತಡೆಯಿತು.

ಆರ್‌ಸಿಬಿ ಆರ್ಭಟ:

202 ರನ್‌ ಗುರಿ ದೊಡ್ಡದಾಗಿ ಕಂಡರೂ, ಚಿನ್ನಸ್ವಾಮಿ ಪಿಚ್‌ನಲ್ಲಿ ಇದು ಸಾಧಾರಣ ಗುರಿ. ಆದರೂ ಆರಂಭದಲ್ಲೇ ಫಿಲ್‌ ಸಾಲ್ಟ್‌ ಔಟಾದ ಕಾರಣ ಆರ್‌ಸಿಬಿಗೆ ಹಿನ್ನಡೆಯಾಗಬಹುದು ಎನಿಸಿತು. ಆದರೆ ಇಂಪ್ಯಾಕ್ಟ್‌ ಆಟಗಾರ ದೇವದತ್‌ ಪಡಿಕ್ಕಲ್‌ ಅದಕ್ಕೆ ಅವಕಾಶ ನೀಡಲಿಲ್ಲ. ಕೇವಲ 21 ಎಸೆತದಲ್ಲಿ ಅರ್ಧಶತಕ ಸಿಡಿಸಿದ ಪಡಿಕ್ಕಲ್‌, 26 ಬಾಲಲ್ಲಿ 7 ಬೌಂಡರಿ, 4 ಸಿಕ್ಸರ್‌ನೊಂದಿಗೆ 61 ರನ್‌ ಸಿಡಿಸಿ ಔಟಾದರು. 2ನೇ ವಿಕೆಟ್‌ಗೆ ಕೊಹ್ಲಿ ಹಾಗೂ ಪಡಿಕ್ಕಲ್‌ ನಡುವೆ 101 ರನ್‌ ಜೊತೆಯಾಟ ಮೂಡಿಬಂತು.

ಪಡಿಕ್ಕಲ್‌ ಔಟಾದ ಬಳಿಕ ಕೆಲ ಅಮೋಘ ಹೊಡೆತಗಳ ಮೂಲಕ ಕೊಹ್ಲಿ ರಂಜಿಸಿದರೆ, ನಾಯಕ ರಜತ್‌ ಪಾಟೀದರ್‌ರ ಸಿಡಿಲಬ್ಬರಕ್ಕೆ ಸನ್‌ರೈಸರ್ಸ್‌ ಬಳಿ ಉತ್ತರಗಳೇ ಇರಲಿಲ್ಲ. 12 ಎಸೆತದಲ್ಲಿ 31 ರನ್‌ ಪೇರಿಸಿದ ರಜತ್‌, ತಂಡವನ್ನು ಗೆಲುವಿನ ಹೊಸ್ತಿಲಿಗೆ ತಂದರು.

ಕೊಹ್ಲಿ ಆಟ ನೋಡಿದರೆ, ಬಹಳ ದಿನಗಳ ಬಳಿಕ ಅವರು ಮೈದಾನಕ್ಕಿಳಿದಂತೆ ಕಾಣಲೇ ಇಲ್ಲ. 38 ಎಸೆತದಲ್ಲಿ 5 ಬೌಂಡರಿ, 5 ಸಿಕ್ಸರ್‌ನೊಂದಿಗೆ 69 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಸನ್‌ರೈಸರ್ಸ್‌ 18 ಇತರೆ ರನ್‌ ನೀಡಿತು. ಹಲವು ಕ್ಯಾಚ್‌ಗಳನ್ನೂ ಕೈಚೆಲ್ಲಿ ಆರ್‌ಸಿಬಿಗೆ ಅನುಕೂಲ ಮಾಡಿಕೊಟ್ಟಿತು.

ಸ್ಕೋರ್‌: ಸನ್‌ರೈಸರ್ಸ್‌ 20 ಓವರಲ್ಲಿ 201/9 (ಕಿಶನ್‌ 80, ಅನಿಕೇತ್‌ 43*, ಡಫಿ 3-22, ಶೆಫರ್ಡ್‌ 3-54), ಆರ್‌ಸಿಬಿ 15.4 ಓವರಲ್ಲಿ 203/4 (ಕೊಹ್ಲಿ 69*, ಪಡಿಕ್ಕಲ್‌ 61, ಪಾಟೀದಾರ್‌ 31, ಪೇನ್‌ 2-35 )

ಟರ್ನಿಂಗ್‌ ಪಾಯಿಂಟ್‌

ಸನ್‌ರೈಸರ್ಸ್‌ ಇನ್ನಿಂಗ್ಸ್‌ ವೇಳೆ ಕ್ಲಾಸೆನ್‌ ಹಾಗೂ ಕಿಶನ್‌ರನ್ನು ನಿರ್ಣಾಯಕ ಹಂತದಲ್ಲಿ ಔಟ್‌ ಮಾಡಿದ್ದು ಆರ್‌ಸಿಬಿಗೆ ನೆರವಾಯಿತಾದರೂ, ಬ್ಯಾಟಿಂಗ್‌ ವೇಳೆ ಸಾಲ್ಟ್‌ ವಿಕೆಟ್‌ ಪತನಗೊಂಡ ಬಳಿಕ ಪಡಿಕ್ಕಲ್‌ರ ಸ್ಫೋಟಕ ಆಟ ಆರ್‌ಸಿಬಿ ಮೇಲೆ ಒತ್ತಡ ಬೀಳದಂತೆ ನೋಡಿಕೊಂಡಿತು. ನಾಯಕ ಪಾಟೀದಾರ್‌ರ ಇನ್ನಿಂಗ್ಸ್‌ ಕೂಡ ಗೆಲುವನ್ನು ಸುಲಭಗೊಳಿಸಿತು.

ಕಾಲ್ತುಳಿತದಲ್ಲಿ ಮೃತಪಟ್ಟವರ ನೆನಪಿನಲ್ಲಿ ಮೌನಾಚರಣೆ

ಪಂದ್ಯ ಆರಂಭಕ್ಕೂ ಮುನ್ನ ಕಳೆದ ವರ್ಷ ಕಾಲ್ತುಳಿತದಲ್ಲಿ ಮೃತಪಟ್ಟ 11 ಮಂದಿ ಅಭಿಮಾನಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ರೀಡಾಂಗಣದಲ್ಲಿದ್ದ ಎಲ್ಲರೂ 1 ನಿಮಿಷ ಮೌನಾಚರಣೆ ಮಾಡಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL 2026: ಚಿನ್ನಸ್ವಾಮಿಯಲ್ಲಿ RCB ವಿಜಯದುಂದುಭಿ: ಕೊಹ್ಲಿ-ಪಡಿಕ್ಕಲ್ ಅಬ್ಬರಕ್ಕೆ ಸನ್‌ರೈಸರ್ಸ್ ಧೂಳೀಪಟ!
RCB vs SRH: ಆರ್‌ಸಿಬಿ ಪಾಲಿನ 'ಸ್ಪೈಡರ್ ಮ್ಯಾನ್': ಸಾಲ್ಟ್ ಹಿಡಿದ ಅದ್ಭುತ ಕ್ಯಾಚ್‌ಗಳಿಗೆ ಅಭಿಮಾನಿಗಳು ಶಾಕ್!