
ಲಖನೌ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನಾಲ್ಕನೇ ಸೋಲು ಅನುಭವಿಸಿದೆ. ಇಲ್ಲಿನ ಏಕಾನ ಸ್ಟೇಡಿಯಂನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಪಂದ್ಯದಲ್ಲಿ ಹಂಗಾಮಿ ಕ್ಯಾಪ್ಟನ್ ಜಿತೇಶ್ ಶರ್ಮಾ ನೇತೃತ್ವದ ಆರ್‌ಸಿಬಿ ತಂಡವು 42 ರನ್ ಅಂತರದ ಹೀನಾಯ ಸೋಲು ಅನುಭವಿಸಿದೆ. ಇದರ ಜತೆಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಮೊದಲ ಕ್ವಾಲಿಫೈಯರ್ ಆಡುವ ಹಾದಿಯನ್ನು ಕೊಂಚ ದುರ್ಗಮ ಮಾಡಿಕೊಂಡಿದೆ.
ಇದೀಗ ಆರ್‌ಸಿಬಿ ತಂಡದ ಸೋಲಿಗೆ ಕಾರಣ ಯಾರು ಎನ್ನುವ ವಿಮರ್ಶೆ ಕೂಡಾ ಜೋರಾಗಿದೆ. ಯಾಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಾನಾಡಿದ ತವಾರಿನಾಚೆಯ 6 ಪಂದ್ಯಗಳನ್ನು ಗೆದ್ದು ಬೀಗಿತ್ತು. ಇದೀಗ ಇದೇ ಮೊದಲ ಸಲ ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡವು ತವರಿನಾಚೆ ಸೋಲಿನ ಕಹಿಯುಂಡಿದೆ. ಇನ್ನು ಒಂದು ದಶಕದ ಬಳಿಕ ಆರ್‌ಸಿಬಿ ತಂಡ ಕೂಡಿಕೊಂಡ ಆಟಗಾರನ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ಬ್ಯಾಟಿಂಗ್ ಆಟಗಾರ ವೈಫಲ್ಯ ಅನುಭವಿಸುವ ಮೂಲಕ ನಿರಾಸೆ ಮೂಡಿಸಿದರು.
ಆರ್‌ಸಿಬಿ ಸೋಲಿಗೆ ಮಯಾಂಕ್ ಅಗರ್‌ವಾಲ್ ಕಾರಣ?
ಗಾಯದ ಸಮಸ್ಯೆಯಿಂದಾಗಿ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್, ಐಪಿಎಲ್ ಟೂರ್ನಿಯ ಅರ್ಧದಲ್ಲೇ ಹೊರಬಿದ್ದಿದ್ದರು. ಹೀಗಾಗಿ ಅವರ ಸ್ಥಾನಕ್ಕೆ ಬದಲಿ ಆಟಗಾರನಾಗಿ ಮಯಾಂಕ್ ಅಗರ್‌ವಾಲ್ ಅವರನ್ನು ಆರ್‌ಸಿಬಿ ಫ್ರಾಂಚೈಸಿ ಕರೆತಂದಿತ್ತು. ಇದಷ್ಟೇ ಅಲ್ಲದೇ ಸನ್‌ರೈಸರ್ಸ್ ಹೈದರಾಬಾದ್ ಎದುರಿನ ಮಹತ್ವದ ಪಂದ್ಯಕ್ಕೆ ಆರ್‌ಸಿಬಿ ತಂಡದ ಆಡುವ ಹನ್ನೊಂದರ ಬಳಗದಲ್ಲೂ ಸ್ಥಾನ ನೀಡಿತ್ತು. ಆದರೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಮಯಾಂಕ್ ಅಗರ್‌ವಾಲ್ ವಿಫಲವಾಗಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ನೀಡಿದ್ದ ಬೃಹತ್ ಗುರಿ ಬೆನ್ನತ್ತಿದ ಆರ್‌ಸಿಬಿ ತಂಡವು ಸ್ಪೋಟಕ ಆರಂಭವನ್ನೇ ಪಡೆಯಿತು. ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸುವಾಗ ಆರ್‌ಸಿಬಿ ತಂಡವು ಮೊದಲ ವಿಕೆಟ್‌ಗೆ 80 ರನ್‌ಗಳ ಭರ್ಜರಿ ಜತೆಯಾಟವಾಡಿ ಭದ್ರಬುನಾದಿ ಹಾಕಿ ಕೊಟ್ಟಿತ್ತು. ಈ ವೇಳೆ ಕ್ರೀಸ್‌ಗಿಳಿದ ಮಯಾಂಕ್ ಅಗರ್‌ವಾಲ್ ಒಳ್ಳೆಯ ಇನ್ನಿಂಗ್ಸ್ ಆಡಲು ವೇದಿಕೆ ಸಜ್ಜಾಗಿತ್ತು. ಆದರೆ ಮಯಾಂಕ್ ಅಗರ್‌ವಾಲ್ 10 ಎಸೆತಗಳನ್ನು ಎದುರಿಸಿ ಕೇವಲ 11 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಫ್ಯಾನ್ಸ್‌ಗೆ ನಿರಾಸೆ ಮೂಡಿಸಿದರು. 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ಮಯಾಂಕ್ ಅಗರ್‌ವಾಲ್ ಅನ್‌ಸೋಲ್ಡ್ ಆಗಿದ್ದರು. ಯಾವೊಂದು ಫ್ರಾಂಚೈಸಿಯು ಮಯಾಂಕ್ ಅಗರ್‌ವಾಲ್ ಅವರನ್ನು ಖರೀದಿಸಲು ಮನಸ್ಸು ಮಾಡಿರಲಿಲ್ಲ. ಹೀಗಿದ್ದೂ ಬದಲಿ ಆಟಗಾರನಾಗಿ ದಶಕದ ಬಳಿಕ ಆರ್‌ಸಿಬಿ ತಂಡ ಕೊಡಿಕೊಂಡ ಅಗರ್‌ವಾಲ್ ದೊಡ್ಡ ಇನ್ನಿಂಗ್ಸ್ ಆಡಲು ವಿಫಲವಾಗಿದ್ದು, ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣ ಎನಿಸಿಕೊಂಡಿತು.
ಆರ್‌ಸಿಬಿಗೆ ಹೀನಾಯ ಸೋಲು:
ಇನ್ನು ಆರ್‌ಸಿಬಿ-ಸನ್‌ರೈಸರ್ಸ್ ಎದುರಿನ ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡವು ನಿಗದಿತ 20 ಓವರ್‌ಗಳಲ್ಲಿ 231 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಬೃಹತ್ ಮೊತ್ತ ಬೆನ್ನತ್ತಿದ ಆರ್‌ಸಿಬಿ ತಂಡವು ಸ್ಪೋಟಕ ಆರಂಭವನ್ನು ಪಡೆಯಿತು. ಆದರೆ ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ 19.5 ಓವರ್‌ಗಳಲ್ಲಿ 189ಕ್ಕೆ ಆಲೌಟಾಯಿತು. ಪವರ್-ಪ್ಲೇನಲ್ಲೇ ತಂಡ 72 ರನ್ ಗಳಿಸಿತು. ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಅಬ್ಬರಿಸಿದರು. ಕೊಹ್ಲಿ25 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ 43 ರನ್ ಸಿಡಿಸಿ ಔಟಾದರೆ, ಕನ್ನಡಿಗ ಮಯಾಂಕ್ ಅಗರ್‌ವಾಲ್ 11 ರನ್ ಗಳಿಸಿ ನಿರ್ಗಮಿಸಿದರು. ಸ್ಫೋಟಕ ಆಟವಾಡುತ್ತಿದ್ದ ಫಿಲ್ ಸಾಲ್ಟ್ 32 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 62 ರನ್ ಬಾರಿಸಿ 12ನೇ ಓವರ್‌ನಲ್ಲಿ ಔಟಾದರು. ರಜತ್ ಪಾಟೀದಾರ್, ಹಂಗಾಮಿ ನಾಯಕ ಜಿತೇಶ್ ಶರ್ಮಾ ಕ್ರೀಸ್‌ನಲ್ಲಿರುವ ವರೆಗೂ ತಂಡ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ 15.4 ಓವರ್ ಬಳಿಕ ಕೇವಲ 5 ಎಸೆತಗಳ ಅಂತರದಲ್ಲಿ ರಜತ್ (18), ಜಿತೇಶ್ (24) ಹಾಗೂ ರೊಮಾರಿಯೊ ಶೆಫರ್ಡ್(0) ಔಟಾಗಿದ್ದರಿಂದ ಹಿನ್ನಡೆ ಅನುಭವಿಸಿತು. ಬಳಿಕ ಟಿಮ್ ಡೇವಿಡ್ (1), ಕೃನಾಲ್ ಪಾಂಡ್ಯ (8)ಗೆ ತಂಡವನ್ನು ಗೆಲ್ಲಿಸಲಾಗಲಿಲ್ಲ. ತಂಡ ಕೊನೆ 16 ರನ್‌ಗೆ 7 ವಿಕೆಟ್ ಕಳೆದುಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.