ರಾಜ್ಯ ಸರ್ಕಾರದಿಂದ ತಂಡಕ್ಕೆ ಮುಜುಗರ, ಬೆಂಗಳೂರಿಗೆ ಗುಡ್‌ಬೈ ಹೇಳುತ್ತಾ ಆರ್‌ಸಿಬಿ ಫ್ರಾಂಚೈಸಿ?

Published : Jun 09, 2025, 06:01 PM ISTUpdated : Jun 09, 2025, 06:02 PM IST
IPL Crickeet RCB

ಸಾರಾಂಶ

ಐಪಿಎಲ್‌ ಟ್ರೋಫಿ ಗೆದ್ದ ಸಂಭ್ರಮದಲ್ಲಿ ನಡೆದ ಅವಘಡದಿಂದ ಆರ್‌ಸಿಬಿ ಮುಜುಗರಕ್ಕೆ ಒಳಗಾಗಿದೆ. ರಾಜ್ಯ ಸರ್ಕಾರದ ಕ್ರಮದಿಂದ ಬೇಸತ್ತ ಆರ್‌ಸಿಬಿ ತನ್ನ ನೆಲೆಯನ್ನು ಬೇರೆಡೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.

ಬೆಂಗಳೂರು (ಜೂ.9): ಯಾವುದೇ ತಂಡ ಪ್ರತಿಷ್ಠಿತ ಕಪ್‌ ಗೆದ್ದಾಗ ಅದಕ್ಕೆ ಇರುವ ಮಹತ್ವವೇ ಬೇರೆ. ಅದೇ ರೀತಿ ಆರ್‌ಸಿಬಿ  (RCB) ಐಪಿಎಲ್‌ (IPL) ಆರಂಭವಾದ 18 ವರ್ಷಗಳ ಬಳಿಕ ಟ್ರೋಫಿ ಜಯಿಸಿ ತನ್ನ ಬರಗಾಲವನ್ನು ನೀಗಿಸಿಕೊಂಡಿತ್ತು. ಅಹಮದಾಬಾದ್‌ನಲ್ಲಿ ಕಪ್‌ ಗೆದ್ದಾಗಲೂ ಕೂಡ ಆರ್‌ಸಿಬಿ ಈ ಟ್ರೋಫಿ ಬೆಂಗಳೂರಿನ ಅಭಿಮಾನಿಗಳಿಗೆ ಸೇರಿದ್ದು ಎಂದು ಹೇಳಿತ್ತು. ಆದರೆ, ಬೆಂಗಳೂರಿಗೆ ಬಂದಾಗ ಆಗಿದ್ದೇ ಬೇರೆ. ಸನ್ಮಾನ ಮಾಡುತ್ತೇವೆ ಎಂದು ಹೇಳಿ ಇಡೀ ರಾಜ್ಯ ಸರ್ಕಾರ ಸಮಾರಂಭವನ್ನೇ ಅಸ್ತವ್ಯಸ್ಥ ಮಾಡಿತ್ತು. ಕೊನೆಗೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ (M Chinnaswamy Stadium)  11 ಮಂದಿ ಆರ್‌ಸಿಬಿ ಫ್ಯಾನ್‌ಗಳು ಅನ್ಯಾಯವಾಗಿ (Stampede Tragedy) ಸಾವು ಕಂಡಿದ್ದರು.

ಯಾವಾಗ ಈ ಸಾವುಗಳು ತಮ್ಮ ಕುತ್ತಿಗೆಗೆ ಬರುತ್ತದೆ ಎಂದು ಗೊತ್ತಾಯಿತೋ ರಾಜ್ಯ ಸರ್ಕಾರ ಈ ಸಾವಿನ ಹೊಣೆಯನ್ನು ಪೊಲೀಸ್‌ ಇಲಾಖೆ, ಕೆಎಸ್‌ಸಿಎ ಹಾಗೂ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ನ ತಲೆಗೆ ಕಟ್ಟಿಬಿಟ್ಟಿತು. ಅದಲ್ಲದೆ, ಆರ್‌ಸಿಬಿಯ ಪ್ರಮುಖ ಅಧಿಕಾರಿಗಳ ಬಂಧನಕ್ಕೂ ಸಿಎಂ ಸಿದ್ಧರಾಮಯ್ಯ ಸೂಚನೆ ಕೊಟ್ಟಿದ್ದರು. ಅದರಂತೆ ಆರ್‌ಸಿಬಿಯ ನಿಖಿಲ್‌ ಸೋಸಲೆ ಬಂಧನಕ್ಕೆ ಒಳಗಾಗಿದ್ದರೆ, ಇನ್ನೂ ಕೆಲವರು ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.

ಇನ್ನೊಂದೆಡೆ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಸನ್ಮಾನ ಕಾರ್ಯಕ್ರಮದಲ್ಲಿ ನಮ್ಮ ಪಾತ್ರವಿಲ್ಲ. ಅನುಮತಿ ಕೇಳಿದ್ದು ನಿಜ. ಆದರೆ, ಕಾರ್ಯಕ್ರಮ ಅಸ್ತವ್ಯಸ್ಥವಾಗಲು ರಾಜ್ಯ ಸರ್ಕಾರವೇ ಕಾರಣ ಎಂದು ದೂರಿದೆ. ತಮ್ಮ ಮೇಲೆ ಹಾಕಲಾಗಿರುವ ಕೇಸ್‌ಅನ್ನು ರದ್ದು ಪಡಿಸುವಂತೆ ಹೈಕೋರ್ಟ್‌ನ ಮುಂದೆ ಮನವಿ ಮಾಡಿದೆ.

ಕಪ್‌ ಗೆದ್ದರೂ ತಂಡವನ್ನು ರಾಜ್ಯದಲ್ಲಿ ನಡೆಸಿಕೊಂಡಿರುವ ರೀತಿಯಿಂದ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಭಾರೀ ಮುಜುಗರ ಹಾಗೂ ಅವಮಾನಕ್ಕೆ ಒಳಗಾಗಿದೆ. ಕಪ್‌ ಗೆಲುವಿನೊಂದಿಗೆ ತನಗೆ ಅಪಾರವಾಗಿ ಬೆಂಬಲ ನೀಡಿದ ಅಭಿಮಾನಿಗಳನ್ನು ಕಳೆದುಕೊಳ್ಳಬೇಕಾಯಿತಲ್ಲ ಎನ್ನುವ ದುಃಖವೂ ಇದೆ. ಇದರಿಂದಾಗಿ ಆರ್‌ಸಿಬಿ ಫ್ರಾಂಚೈಸಿ ಮುಂದಿನ ಐಪಿಎಲ್‌ ಋತುವಿನ ವೇಳೆಗೆ ತನ್ನ ಬೇಸ್‌ ಅನ್ನು ಬೇರೆ ರಾಜ್ಯಕ್ಕೆ ಶಿಫ್ಟ್‌ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಪ್ರೇಕ್ಷಕರ ಸಾಮರ್ಥ್ಯವೂ ಕಡಿಮೆ. ಅದಲ್ಲದೆ, ಸರ್ಕಾರದಿಂದ ಈ ರೀತಿಯ ಒತ್ತಡವನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ ಎನ್ನುವ ತೀರ್ಮಾನಕ್ಕೆ ಫ್ರಾಂಚೈಸಿ ಬಂದಿದೆ. ಹಾಗಾಗಿ ಮುಂದಿನ ಆವೃತ್ತಿಯ ವೇಳೆಗೆ ಬೆಂಗಳೂರನ್ನು ತೊರೆದು ಬೇರೆ ನಗರವನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನುವ ಸಾಧ್ಯತೆಗಳು ಹೆಚ್ಚಿವೆ.

ಯಾವ ನಗರಕ್ಕೆ ಶಿಫ್ಟ್‌ ಆಗಬಹುದು?

ಸದ್ಯಕ್ಕೆ ಇದರ ಬಗ್ಗೆ ಆರ್‌ಸಿಬಿಯ ಯಾವುದೇ ಅಧಿಕಾರಿಗಳು ಬಾಯಿ ಬಿಡುತ್ತಿಲ್ಲ. ಆಂಧ್ರಪ್ರದೇಶದ ವಿಶಾಖಪಟ್ಟಣ, ಕೇರಳದ ಕೊಚ್ಚಿ ಅಥವಾ ಮಹಾರಾಷ್ಟ್ರದ ಪುಣೆಗೆ ತನ್ನ ಬೇಸ್‌ಅನ್ನು ಶಿಫ್ಟ್‌ ಮಾಡುವ ಸಾಧ್ಯತೆಗಳು ದಟ್ಟವಾಗಿದೆ. ತಂಡದ ಬೇಸ್‌ ಬೇರೆ ಕಡೆಗೆ ಶಿಫ್ಟ್‌ ಆದರೂ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಎಂದೇ ತನ್ನ ಹೆಸರನ್ನು ಉಳಿಸಿಕೊಳ್ಳಬಹುದು. ಅದಕ್ಕೆ ಬಿಸಿಸಿಐ ಅವಕಾಶವನ್ನೂ ನೀಡುತ್ತದೆ.

ಪಂಜಾಬ್‌ ಕಿಂಗ್ಸ್‌ ಈ ಸಾಹಸ ಮಾಡಿತ್ತು

ಐಪಿಎಲ್‌ ಫ್ರಾಂಚೈಸಿ ತನ್ನ ಬೇಸ್‌ಅನ್ನು ಶಿಫ್ಟ್‌ ಮಾಡುವುದು ಹೊಸದೇನಲ್ಲ. ಪಂಜಾಬ್‌ ಕಿಂಗ್ಸ್‌ ತಂಡ ಈಗಾಗಲೇ ಈ ಸಾಹಸವನ್ನು ಮಾಡಿತ್ತು. ಮೊಹಾಲಿಯಲ್ಲಿನ ತನ್ನ ಬೇಸ್‌ಅನ್ನು ಹಿಮಾಚಲ ಪ್ರದೇಶಧ ಧರ್ಮಶಾಲಾಗೆ ಶಿಫ್ಟ್ ಮಾಡಿತ್ತು. ಧರ್ಮಶಾಲಾಗೆ ತಂಡದ ಬೇಸ್‌ಅನ್ನು ಶಿಫ್ಟ್‌ ಮಾಡಿದ್ದರೂ, ಹೆಸರನ್ನು ಮಾತ್ರ ಅದೇ ಉಳಿಸಿಕೊಂಡಿತ್ತು. ಇನ್ನು ರಾಜಸ್ಥಾನ ರಾಯಲ್ಸ್‌ ಕೂಡ ತನ್ನ ಬೇಸ್‌ ಜೈಪುರವನ್ನು ತೊರೆದು ಐಪಿಎಲ್‌ ಆಡಿದ ಉದಾಹರಣೆಯಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ