
ವಡೋದರಾ: 4ನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯುಪಿಎಲ್) ಫೈನಲ್ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ. ಗುರುವಾರ ಮಾಜಿ ಚಾಂಪಿಯನ್ ಆರ್‌ಸಿಬಿ ಹಾಗೂ ಕಳೆದ 3 ಆವೃತ್ತಿಗಳ ರನ್ನರ್-ಅಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಶಸ್ತಿಗಾಗಿ ಸೆಣಸಾಡಲಿವೆ.
2024ರಲ್ಲಿ ಡೆಲ್ಲಿ ವಿರುದ್ಧವೇ ಫೈನಲ್‌ನಲ್ಲಿ ಗೆದ್ದು ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದ್ದ ಆರ್‌ಸಿಬಿ ಈ ಬಾರಿಯೂ ಅತ್ಯುತ್ತಮ ಪ್ರದರ್ಶನ ತೋರಿದೆ. ತಂಡ ಲೀಗ್ ಹಂತದಲ್ಲಿ 8 ಪಂದ್ಯಗಳ ಪೈಕಿ 6ರಲ್ಲಿ ಗೆದ್ದು ನೇರವಾಗಿ ಫೈನಲ್‌ಗೇರಿದೆ. ಮತ್ತೊಂದೆಡೆ ಡೆಲ್ಲಿ ತಂಡ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ 8 ಪಂದ್ಯಗಳ ಪೈಕಿ 4ಲ್ಲಿ ಗೆದ್ದು ಎಲಿಮಿನೇಟರ್ ತಲುಪಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್‌ನ ಸೋಲಿಸಿ ಸತತ 4ನೇ ಬಾರಿ ಫೈನಲ್‌ಗೇರಿದ ಸಾಧನೆ ಮಾಡಿದೆ.
ಲೀಗ್ ಹಂತದಲ್ಲಿ ಸತತ 5 ಪಂದ್ಯ ಗೆದ್ದು, ಡಬ್ಲ್ಯುಪಿಎಲ್‌ನಲ್ಲೇ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಂಡಿರುವ ಆರ್‌ಸಿಬಿ ಒಂದಿಬ್ಬರನ್ನು ನೆಚ್ಚಿಕೊಳ್ಳದೆ ಸಂಘಟಿತ ಪ್ರದರ್ಶನ ನೀಡುತ್ತಿದೆ. ನಾಯಕಿ ಸ್ಮೃತಿ ಮಂಧನಾ, ಗ್ರೇಸ್ ಹ್ಯಾರಿಸ್, ರಿಚಾ ಘೋಷ್ ಸ್ಥಿರ ಆಟವಾಡಲು ವಿಫಲರಾದರೂ ಇತರರು ತಂಡದ ಕೈಹಿಡಿದು ಗೆಲ್ಲಿಸಿದ್ದಾರೆ. ನ್ಯಾಡಿನ್ ಡೆ ಕ್ಲರ್ಕ್, ಸಯಾಲಿ ಸತ್ಗಾರೆ, ಲಾರೆನ್ ಬೆಲ್ ತಂಡದ ಬೌಲಿಂಗ್ ಅಸ್ತ್ರ. ಶ್ರೇಯಾಂಕ ಪಾಟೀಲ್ ಕೂಡಾ ನಿರ್ಣಾಯಕ ಪಂದ್ಯಗಳಲ್ಲಿ ತಂಡಕ್ಕೆ ನೆರವಾಗಿದ್ದಾರೆ.
ಇನ್ನೊಂದೆಡೆ ಡೆಲ್ಲಿ ತಂಡದಲ್ಲೂ ಹಲವು ಅನುಭವಿ ಆಟಗಾರ್ತಿಯರಿದ್ದಾರೆ. ನಾಯಕಿ ಜೆಮಿಮಾ ರೋಡ್ರಿಗ್ಸ್ ನಾಯಕತ್ವದ ತಂಡ ಕೆಲ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದರೂ ಹೆಚ್ಚಿನ ಆಟಗಾರ್ತಿಯರು ನಿರ್ಣಾಯಕ ಹಂತದಲ್ಲಿ ಕೈಕೊಟ್ಟ ಉದಾಹರಣೆ ಹೆಚ್ಚು. ಲಿಜೆಲ್ ಲೀ ಹಾಗೂ ಲಾರಾ ವೊಲ್ವಾರ್ಟ್ ಉತ್ತಮ ಲಯದಲ್ಲಿದ್ದು, ಶಫಾಲಿ ವರ್ಮಾ, ಜೆಮಿಮಾ ಕೂಡಾ ಅಬ್ಬರಿಸಬಲ್ಲರು. 9 ಪಂದ್ಯದಲ್ಲಿ 16 ವಿಕೆಟ್ ಕಿತ್ತಿರುವ ನಂದಿನಿ ಶರ್ಮಾ, 14 ವಿಕೆಟ್ ಪಡೆದಿರುವ ಶ್ರೀ ಚರಣಿ ಜೊತೆಗೆ ಮಾರಿಜಾನ್ ಕಾಪ್(10 ವಿಕೆಟ್), ಶಿನೆಲ್ ಹೆನ್ರಿ(12 ವಿಕೆಟ್) ಬೌಲಿಂಗ್ ಆಧಾರಸ್ತಂಭ.
ಪಂದ್ಯ ಆರಂಭ: ಸಂಜೆ 7.30 ಗಂಟೆಗೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್
ಆರ್‌ಸಿಬಿ ಫ್ರಾಂಚೈಸಿ ಹ್ಯಾಟ್ರಿಕ್ ಟ್ರೋಫಿ ಗೆಲುವಿನ ನಿರೀಕ್ಷೆಯಲ್ಲಿದೆ. 2024ರಲ್ಲಿ ಮಹಿಳಾ ತಂಡ, 2025ರಲ್ಲಿ ಪುರುಷರ ತಂಡ ಚಾಂಪಿಯನ್ ಆಗಿತ್ತು. ಈ ವರ್ಷ ಮತ್ತೆ ಕಪ್ ಗೆಲ್ಲಲು ಮಹಿಳಾ ತಂಡ ಕಾತರಿಸುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.