ಜಡ್ಡು-ಅಶ್ವಿನ್ ಮಿಂಚಿನ ಬೌಲಿಂಗ್; ಭಾರತದ ಹಿಡಿತದಲ್ಲಿ ಮುಂಬೈ ಟೆಸ್ಟ್‌

By Naveen KodaseFirst Published Nov 2, 2024, 6:25 PM IST
Highlights

ಮುಂಬೈ ಟೆಸ್ಟ್ ಪಂದ್ಯದಲ್ಲಿ ಅತಿಥೇಯ ಟೀಂ ಇಂಡಿಯಾ, ಕಿವೀಸ್ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಮುಂಬೈ: ಶುಭ್‌ಮನ್ ಗಿಲ್ ಹಾಗೂ ರಿಷಭ್ ಪಂತ್ ಸಮಯೋಚಿತ ಅರ್ಧಶತಕ ಹಾಗೂ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಮಾರಕ ದಾಳಿಯ ನೆರವಿನಿಂದ ಮುಂಬೈ ಟೆಸ್ಟ್‌ ಪಂದ್ಯದಲ್ಲಿ ಕಿವೀಸ್‌ ಮೇಲೆ ಭಾರತ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಎರಡನೇ ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ 171 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಕೇವಲ 143 ರನ್‌ಗಳ ಮುನ್ನಡೆ ಸಾಧಿಸಿದೆ. ಜಡೇಜಾ 4 ವಿಕೆಟ್ ಪಡೆದರೆ, ಅಶ್ವಿನ್ 3 ವಿಕೆಟ್ ತಮ್ಮ ಬುಟ್ಟಿಗೆ ಹಾಕಿಕೊಂಡರು.  

ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ 4 ವಿಕೆಟ್‌ ಕಳೆದುಕೊಂಡು 86 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ 263 ರನ್ ಗಳಿಸಿ ಸರ್ವಪತನ ಕಂಡಿತು. ಈ ಮೂಲಕ 28 ರನ್‌ಗಳ ಅಮೂಲ್ಯ ಮುನ್ನಡೆ ಪಡೆಯಿತು. ಟೀಂ ಇಂಡಿಯಾ ಪರ ಶುಭ್‌ಮನ್ ಗಿಲ್ 90 ರನ್ ಬಾರಿಸಿದರೆ, ರಿಷಭ್ ಪಂತ್ ಸ್ಪೋಟಕ 60 ರನ್ ಸಿಡಿಸಿದರು. ಇನ್ನು ಕೊನೆಯಲ್ಲಿ ವಾಷಿಂಗ್ಟನ್ ಸುಂದರ್ ಅಜೇಯ 38 ರನ್ ಬಾರಿಸುವ ಮೂಲಕ ಭಾರತ ಇನ್ನಿಂಗ್ಸ್ ಮುನ್ನಡೆ ಸಾಧಿಸಲು ನೆರವಾದರು.

Latest Videos

ಐಪಿಎಲ್ ಮೆಗಾ ಹರಾಜಿಗೂ ಮುನ್ನ ಅತಿ ಹೆಚ್ಚು ಮೊತ್ತಕ್ಕೆ ರೀಟೈನ್ ಆದ ಟಾಪ್ 10 ಆಟಗಾರರಿವರು!

ಇನ್ನು ಎರಡನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಮೊದಲ ಓವರ್‌ನಲ್ಲೇ ಆಕಾಶ್ ದೀಪ್ ಶಾಕ್ ನೀಡಿದರು. ನಾಯಕ ಟಾಮ್ ಲೇಥಮ್ ಕೇವಲ ಒಂದು ರನ್ ಗಳಿಸಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದಾದ ಬಳಿಕ ಕಿವೀಸ್ ತಂಡವು ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಒಂದು ಹಂತದಲ್ಲಿ 4ನೇ ವಿಕೆಟ್‌ಗೆ ಡೇರಲ್ ಮಿಚೆಲ್ ಹಾಗೂ ವಿಲ್ ಯಂಗ್ 50 ರನ್‌ಗಳ ಜತೆಯಾಟವಾಡುವ ಮೂಲಕ ಟೀಂ ಇಂಡಿಯಾಗೆ ಎಚ್ಚರಿಕೆ ರವಾನಿಸಿತು. ಆದರೆ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ರವೀಂದ್ರ ಜಡೇಜಾ ಯಶಸ್ವಿಯಾದರು. ಇದಾದ ಬಳಿಕ ಕಿವೀಸ್ ಪರ ದೊಡ್ಡ ಜತೆಯಾಟ ಮೂಡಿ ಬರಲಿಲ್ಲ.

ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ದಿಟ್ಟ ಬ್ಯಾಟಿಂಗ್ ನಡೆಸಿದ ವಿಲ್ ಯಂಗ್ 100 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 51 ರನ್ ಬಾರಿಸಿ ಅಶ್ವಿನ್‌ಗೆ ಕ್ಯಾಚಿತ್ತರು. ಕೊನೆಯಲ್ಲಿ ಗ್ಲೆನ್ ಫಿಲಿಫ್ಸ್‌ ಕೇವಲ 14 ಎಸೆತಗಳನ್ನು ಎದುರಿಸಿ 1 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಚುರುಕಿನ 26 ರನ್ ಗಳಿಸಿ ಅಶ್ವಿನ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.

ಮುಂಬೈ ಟೆಸ್ಟ್‌: ಗಿಲ್, ಪಂತ್, ಸುಂದರ್ ಸಮಯೋಚಿತ ಆಟ, ಭಾರತಕ್ಕೆ ಅಲ್ಪ ಮುನ್ನಡೆ

ಸದ್ಯ ಏಜಾಜ್ ಪಟೇಲ್ 7 ರನ್ ಗಳಿಸಿ ಮೂರನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ನಾಳೆ ಆದಷ್ಟು ಬೇಗ ಏಜಾಜ್ ಪಟೇಲ್ ವಿಕೆಟ್ ಕಬಳಿಸಿ, ಸಾಧಾರಣ ಗುರಿಯನ್ನು ರೋಹಿತ್ ಶರ್ಮಾ ಪಡೆ ಯಶಸ್ವಿಯಾಗಿ ಬೆನ್ನತ್ತಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.
 

click me!