ಮುಂಬೈ ಟೆಸ್ಟ್‌: ಗಿಲ್, ಪಂತ್, ಸುಂದರ್ ಸಮಯೋಚಿತ ಆಟ, ಭಾರತಕ್ಕೆ ಅಲ್ಪ ಮುನ್ನಡೆ

By Naveen Kodase  |  First Published Nov 2, 2024, 1:40 PM IST

ಮುಂಬೈ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 263 ರನ್‌ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ 28 ರನ್‌ಗಳ ಮುನ್ನಡೆ ಸಾಧಿಸಿದೆ


ಮುಂಬೈ: ಶುಭ್‌ಮನ್ ಗಿಲ್(90), ರಿಷಭ್ ಪಂತ್(60) ಆಕರ್ಷಕ ಅರ್ಧಶತಕ ಹಾಗೂ ವಾಷಿಂಗ್ಟನ್ ಸುಂದರ್(38*) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ, ಮುಂಬೈ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 263 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 28 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದೆ.

ಇಲ್ಲಿನ ವಾಂಖೇಡೆ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 235 ರನ್‌ಗಳಿಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್‌ ಆರಂಭಿಸಿದ್ದ ಟೀಂ ಇಂಡಿಯಾ, ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 86 ರನ್ ಬಾರಿಸಿತ್ತು.

Latest Videos

undefined

ಇಶಾಂತ್ ಶರ್ಮಾ, ಜಹೀರ್ ಖಾನ್ ದಾಖಲೆ ನುಚ್ಚುನೂರು ಮಾಡಿದ ರವೀಂದ್ರ ಜಡೇಜಾ!

ಇನ್ನು  5ನೇ ವಿಕೆಟ್‌ಗೆ ಜತೆಯಾದ ರಿಷಭ್ ಪಂತ್ ಹಾಗೂ ಶುಭ್‌ಮನ್ ಗಿಲ್ ಜೋಡಿ ಅಮೂಲ್ಯ 96 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ರಿಷಭ್ ಪಂತ್ 59 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ60 ರನ್ ಗಳಿಸಿ ಇಶ್‌ ಸೋಧಿಗೆ ವಿಕೆಟ್ ಒಪ್ಪಿಸಿದರು.

ಮತ್ತೆ ನಾಟಕೀಯ ಕುಸಿತ ಕಂಡ ಭಾರತ: ರಿಷಭ್ ಪಂತ್ ಔಟ್ ಆಗುವ ಮುನ್ನ ಟೀಂ ಇಂಡಿಯಾ ಸರಾಗವಾಗಿ ರನ್ ಗಳಿಸುತ್ತಾ ದೊಡ್ಡ ಮೊತ್ತದತ್ತ ದಾಪುಗಾಲು ಇಡುತ್ತಿತ್ತು. ಪಂತ್ ವಿಕೆಟ್ ಪತನದ ಬಳಿಕ ಮತ್ತೊಮ್ಮೆ ಟೀಂ ಇಂಡಿಯಾ ನಾಟಕೀಯ ಕುಸಿತ ಕಂಡಿತು. ಪಂತ್ ವಿಕೆಟ್ ಪತನದ ಬಳಿಕ ಭಾರತ ತನ್ನ ಖಾತೆಗೆ 83 ರನ್ ಸೇರಿಸುವಷ್ಟರಲ್ಲಿ ಉಳಿದ 5 ವಿಕೆಟ್ ಕಳೆದುಕೊಂಡಿತು.

ಮುಂಬೈ ಟೆಸ್ಟ್‌ನಲ್ಲಿ ಜಡೇಜಾ ಮಾರಕ ದಾಳಿ; ಸಾಧಾರಣ ಮೊತ್ತಕ್ಕೆ ಕಿವೀಸ್ ಆಲೌಟ್!

ರವೀಂದ್ರ ಜಡೇಜಾ(14), ಸರ್ಫರಾಜ್ ಖಾನ್(0) ಹಾಗೂ ರವಿಚಂದ್ರನ್ ಅಶ್ವಿನ್(6) ಜವಾಬ್ದಾರಿಯುತ ಬ್ಯಾಟಿಂಗ್ ಮಾಡಲು ವಿಫಲರಾದರು. ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಶುಭ್‌ಮನ್ ಗಿಲ್ 146 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 90 ರನ್ ಗಳಿಸಿ ಏಜಾಜ್ ಪಟೇಲ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಕೊನೆಯಲ್ಲಿ ಆಕರ್ಷಕ ಬ್ಯಾಟಿಂಗ್ ನಡೆಸಿದ ವಾಷಿಂಗ್ಟನ್ ಸುಂದರ್ 36 ಎಸೆತಗಳನ್ನು ಎದುರಿಸಿ ಅಜೇಯ 38 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಅಮೂಲ್ಯ ಮುನ್ನಡೆ ಸಾಧಿಸಲು ನೆರವಾದರು. 

ಏಜಾಜ್ ಪಟೇಲ್‌ಗೆ 5 ವಿಕೆಟ್: ಕಳೆದ ಬಾರಿ ನ್ಯೂಜಿಲೆಂಡ್ ತಂಡವು ಭಾರತ ಪ್ರವಾಸ ಕೈಗೊಂಡಾಗ ಇದೇ ಮೈದಾನದಲ್ಲಿ ಇನ್ನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಕಬಳಿಸುವ ಮೂಲಕ ಜಿಮ್‌ ಲೇಖರ್ ಹಾಗೂ ಅನಿಲ್ ಕುಂಬ್ಳೆ ದಾಖಲೆ ಸರಿಗಟ್ಟಿದ್ದ ಏಜಾಜ್ ಪಟೇಲ್, ಇದೀಗ ಮತ್ತೊಮ್ಮೆ ಇದೇ ಮೈದಾನದಲ್ಲಿ 5+ ವಿಕೆಟ್ ಕಬಳಿಸುವ ಮೂಲಕ ಕಿವೀಸ್ ಪರ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. 
 

click me!