
ಕೋಲ್ಕತಾ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯವು ನವೆಂಬರ್ 14ರಿಂದ ಆರಂಭವಾಗಿದ್ದು, ಪ್ರವಾಸಿ ಹರಿಣಗಳ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ 159 ರನ್ ಗಳಿಗೆ ಸರ್ವಪತನ ಕಂಡಿದೆ. ಇನ್ನು ಮೊದಲ ದಿನವೇ ಬವುಮಾ ಪಡೆಯನ್ನು ಆಲೌಟ್ ಮಾಡಿದ ಭಾರತ ತಂಡವು ಇದೀಗ ಎರಡನೇ ದಿನದಾಟದ ವೇಳೆಯಲ್ಲಿ ಅಲ್ಪ ಮುನ್ನಡೆ ಸಾಧಿಸಿದೆ. ಇನ್ನು ಇದೇ ವೇಳೆ ಎರಡನೇ ದಿನದಾಟದಲ್ಲಿ ಸರ್ ರವೀಂದ್ರ ಜಡೇಜಾ, ಟೆಸ್ಟ್ ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.
ಹೌದು, ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್ ಹಾಗೂ 300+ ವಿಕೆಟ್ ಕಬಳಿಸಿದ ಜಗತ್ತಿನ ನಾಲ್ಕನೇ ಹಾಗೂ ಭಾರತದ ಎರಡನೇ ಕ್ರಿಕೆಟಿಗ ಎನ್ನುವ ಅಪರೂಪದ ದಾಖಲೆಗೆ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ. ರವೀಂದ್ರ ಜಡೇಜಾಗೂ ಮೊದಲು ಇಯಾನ್ ಬಾಥಮ್, ಕಪಿಲ್ ದೇವ್ ಹಾಗೂ ಡೇನಿಯಲ್ ವೆಟ್ಟೋರಿ ಈ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ ಮಾಜಿ ಆಲ್ರೌಂಡರ್ ಇಯಾನ್ ಬಾಥಮ್ ಇದ್ದಾರೆ. ಬಾಥಮ್ ಇಂಗ್ಲೆಂಡ್ ಪರ 5200 ರನ್ ಹಾಗೂ 383 ವಿಕೆಟ್ ಕಬಳಿಸಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗ, ಮಾಜಿ ನಾಯಕ ಕಪಿಲ್ ದೇವ್ ಇದ್ದಾರೆ. ಕಪಿಲ್ ದೇವ್ 5248 ರನ್ ಹಾಗೂ 434 ವಿಕೆಟ್ ಕಬಳಿಸಿದ್ದಾರೆ. ಇನ್ನು ನ್ಯೂಜಿಲೆಂಡ್‌ನ ಮಾಜಿ ನಾಯಕ ಡೇನಿಯಲ್ ವೆಟ್ಟೋರಿ 4531 ರನ್ ಹಾಗೂ 362 ವಿಕೆಟ್ ಕಬಳಿಸಿದ್ದಾರೆ.
ಇನ್ನು ರವೀಂದ್ರ ಜಡೇಜಾ, ದಕ್ಷಿಣ ಆಫ್ರಿಕಾ ಎದುರು 10 ರನ್ ಗಳಿಸುತ್ತಿದ್ದಂತೆಯೇ, ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕು ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಜಡೇಜಾ ಆಡಿದ 87ನೇ ಟೆಸ್ಟ್ ಪಂದ್ಯದಲ್ಲಿ ಈ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಮೂಲಕ ಅತಿವೇಗವಾಗಿ 4000 ರನ್ ಹಾಗೂ 300+ ವಿಕೆಟ್ ಕಬಳಿಸಿದ ದಿಗ್ಗಜರ ಪೈಕಿ ಜಡೇಜಾ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಮೊದಲು ಇಯಾನ್ ಬಾಥಮ್ ಕೇವಲ 72 ಟೆಸ್ಟ್ ಪಂದ್ಯಗಳನ್ನಾಡಿ ಈ ಸಾಧನೆ ಮಾಡಿದ್ದರು. ರವೀಂದ್ರ ಜಡೇಜಾ 88 ಟೆಸ್ಟ್ ಪಂದ್ಯಗಳನ್ನಾಡಿ 4000+ ರನ್ ಹಾಗೂ 338 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.
ಇನ್ನು ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಕೆ ಎಲ್ ರಾಹುಲ್ ಕೂಡಾ ಟೆಸ್ಟ್ ಕ್ರಿಕೆಟ್‌ನಲ್ಲಿ 4000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ 18ನೇ ಬ್ಯಾಟರ್ ಎನ್ನುವ ಹಿರಿಮೆಗೆ ರಾಹುಲ್ ಪಾತ್ರರಾಗಿದ್ದಾರೆ. ಇನ್ನು ಜಡೇಜಾ 19ನೇ ಭಾರತೀಯ ಬ್ಯಾಟರ್ ಎನಿಸಿಕೊಂಡರು.
ಇನ್ನು ಕೋಲ್ಕತಾ ಟೆಸ್ಟ್ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಜಸ್ಪ್ರೀತ್ ಬುಮ್ರಾ ಮಾರಕ ದಾಳಿಗೆ ತತ್ತರಿಸಿ ಕೇವಲ 159 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತ 60 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿದ್ದು, 28 ರನ್‌ಗಳ ಅಲ್ಪ ಮುನ್ನಡೆ ಪಡೆದಿದೆ.
ಸದ್ಯ ಆಲ್ರೌಂಡರ್ ಅಕ್ಷರ್ ಪಟೇಲ್ 15 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾ ಪರ ಮಾರ್ಕೊ ಯಾನ್ಸನ್ ಹಾಗೂ ಸಿಮೊನ್ ಹಾರ್ಮರ್ ತಲಾ 3 ವಿಕೆಟ್ ಕಬಳಿಸಿದ್ದಾರೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.