ಪ್ರಥಮ ದರ್ಜೆ ಕ್ರಿಕೆಟ್‌ಗೆ ಕೊನೆಗೂ ಪಾದಾರ್ಪಣೆ ಮಾಡಿದ ಅರ್ಜುನ್ ತೆಂಡುಲ್ಕರ್
ಅರ್ಜುನ್ ತೆಂಡುಲ್ಕರ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ
ಗೋವಾ ತಂಡದ ಪರ ಪ್ರಥಮ ದರ್ಜೆ ಪಂದ್ಯವನ್ನಾಡಿದ ಅರ್ಜುನ್ ತೆಂಡುಲ್ಕರ್
ಗೋವಾ(ಡಿ.13): ಬೌಲಿಂಗ್ ಆಲ್ರೌಂಡರ್ ಅರ್ಜುನ್ ತೆಂಡುಲ್ಕರ್, ಇಂದು ಗೋವಾ ಪರ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇಂದಿನಿಂದ 2022-23ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಗೋವಾ ತಂಡವು ಎಲೈಟ್ 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇಂದು ರಾಜಸ್ಥಾನ ವಿರುದ್ದ ಮೊದಲ ಪಂದ್ಯವನ್ನಾಡುತ್ತಿದೆ.
ಮುಂಬೈನಲ್ಲಿ ಸರಿಯಾದ ಅವಕಾಶಗಳು ಸಿಗದ ಹಿನ್ನೆಲೆಯಲ್ಲಿ ಎಡಗೈ ಮಧ್ಯಮ ವೇಗಿ ಅರ್ಜುನ್ ತೆಂಡುಲ್ಕರ್, ಅವಕಾಶ ಅರಸಿ ಗೋವಾದತ್ತ ಮುಖ ಮಾಡಿದ್ದರು. ಇದುವರೆಗೂ ಅರ್ಜುನ್ ತೆಂಡುಲ್ಕರ್, ಮುಂಬೈ ಹಾಗೂ ಗೋವಾ ಪರ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 7 ಪಂದ್ಯಗಳು ಹಾಗೂ 9 ಟಿ20 ಪಂದ್ಯಗಳನ್ನಾಡಿದ್ದರು. ಇದೀಗ ರಾಜಸ್ಥಾನ ವಿರುದ್ದ ಅರ್ಜುನ್ ತೆಂಡುಲ್ಕರ್ ಮೊದಲ ರಣಜಿ ಪಂದ್ಯವನ್ನಾಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ.
ಅರ್ಜುನ್ ತೆಂಡುಲ್ಕರ್, ಕಳೆದ ಕೆಲ ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ. ಆದರೆ ಇದುವರೆಗೂ ಐಪಿಎಲ್‌ನಲ್ಲಿ ಒಂದೇ ಒಂದು ಪಂದ್ಯವನ್ನಾಡಲು ಸಾಧ್ಯವಾಗಿಲ್ಲ. ಈ ಕುರಿತಂತೆ ಮಾತನಾಡಿದ್ದ ಮುಂಬೈ ಇಂಡಿಯನ್ಸ್ ಹೆಡ್ ಕೋಚ್ ಮಹೆಲಾ ಜಯವರ್ಧನೆ, 'ಅರ್ಜುನ್ ತೆಂಡುಲ್ಕರ್, ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬೇಕಿದ್ದರೇ, ಕೆಲವು ಭಾಗಗಳಲ್ಲಿ ಇನ್ನೂ ಸುಧಾರಣೆಯಾಗಬೇಕು' ಎಂದು ಹೇಳಿದ್ದರು.
ಇಂದಿನಿಂದ ರಣಜಿ ಟ್ರೋಫಿ ಕದನ; ಕರ್ನಾಟಕಕ್ಕೆ ಸರ್ವಿಸಸ್ ಸವಾಲು
"ಅವರು ಮುಂಬರುವ ಆವೃತ್ತಿಯಿಂದ ಗೋವಾ ತಂಡದ ಪರ ಆಡಲು ಬಯಸಿದ್ದರು, ಹೀಗಾಗಿ ಅವರು ನಮ್ಮನ್ನು ಸಂಪರ್ಕಿಸಿದರು. ಆಗ ನಾವು ಅರ್ಜುನ್ ತೆಂಡುಲ್ಕರ್ ಅವರಿಗೆ, ಮೊದಲು ನೀವು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯಿಂದ ನಿರಾಪೇಕ್ಷಣ ಪತ್ರವನ್ನು ತನ್ನಿ ಎಂದು ಸೂಚಿಸಿದೆವು. ಅದು ಇಂದು ಸಿಕ್ಕಿದೆ. ನಾವು ತಂಡಕ್ಕೆ ಸೇರಿಸಿಕೊಳ್ಳುವ ಮುನ್ನ ಅವರ ಫಿಟ್ನೆಸ್ ಹಾಗೂ ಸ್ಕಿಲ್ ಟೆಸ್ಟ್ ನಡೆಸಿದೆವು. ಅರ್ಜುನ್ ತೆಂಡುಲ್ಕರ್ ಅವರಂತೆಯೇ ಹಲವು ಆಟಗಾರರು ಗೋವಾ ಪರ ಆಡಲು ಬಯಸುತ್ತಾರೆ. ಆದರೆ ನಾವು ಅವರನ್ನು ಆಯ್ಕೆ ಮಾಡುವ ಮುನ್ನ ನಮ್ಮ ಪ್ರಕ್ರಿಯೆಯನ್ನು ನಡೆಸುತ್ತೇವೆ" ಎಂದು ಗೋವಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ವಿಪುಲ್ ಫಡ್ಕೆ ಹೇಳಿದ್ದಾರೆ.
ಇನ್ನು ಗೋವಾ ಹಾಗೂ ರಾಜಸ್ಥಾನ ನಡುವಿನ ಪಂದ್ಯದ ಬಗ್ಗೆ ಹೇಳುವುದಾದರೇ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲಿಳಿದ ಗೋವಾ ತಂಡವು ಆರಂಭದಲ್ಲೇ ಸುಮಿರನ್ ಅಮೊನ್‌ಕರ್(09) ಹಾಗೂ ಅಮೋಘ್ ಸುನಿಲ್ ದೇಸಾಯಿ(27) ವಿಕೆಟ್ ಕಳೆದುಕೊಂಡಿತು. ಆದರೆ ಮೂರನೇ ವಿಕೆಟ್‌ಗೆ ಸುಯಾನ್ಸ್ ಪ್ರಭುದೇಸಾಯಿ ಹಾಗೂ ಸ್ನೆಹಲ್ ಸುಹಾಸ್ ಕೌತನ್‌ಕರ್ 105 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಮೊದಲ 74 ಓವರ್ ಅಂತ್ಯದ ವೇಳೆಗೆ ಗೋವಾ 3 ವಿಕೆಟ್ ಕಳೆದುಕೊಂಡು 184 ರನ್ ಬಾರಿಸಿದ್ದು, ಸುಯಾನ್ಶ್ ಪ್ರಭುದೇಸಾಯಿ ಅಜೇಯ 72 ರನ್ ಬಾರಿಸಿ ಶತಕದತ್ತ ದಾಪುಗಾಲಿಡುತ್ತಿದ್ದಾರೆ.