
ಬೆಂಗಳೂರು(ಜೂ.07): 2022ನೇ ಸಾಲಿನ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರವಾಸಿ ಉತ್ತರ ಪ್ರದೇಶ ಎದುರು ಆತಿಥೇಯ ಕರ್ನಾಟಕ ತಂಡವು ಭರ್ಜರಿ ಪ್ರದರ್ಶನ ತೋರಿದೆ. ರಾಜ್ಯ ತಂಡದ ಮಾರಕ ದಾಳಿಗೆ ತತ್ತರಿಸಿದ ಉತ್ತರ ಪ್ರದೇಶ ತಂಡವು ಮೊದಲ ಇನಿಂಗ್ಸ್‌ನಲ್ಲಿ ಕೇವಲ 155 ರನ್‌ಗಳಿಗೆ ಸರ್ವಪತನ ಕಂಡಿದ್ದು, ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡವು 98 ರನ್‌ಗಳ ಭರ್ಜರಿ ಮುನ್ನಡೆ ಸಾಧಿಸಿದೆ.
ಇಲ್ಲಿನ ಆಲೂರಿನ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದಿದ್ದ ಆತಿಥೇಯ ಕರ್ನಾಟಕ ತಂಡವು ಮೊದಲ ದಿನದಾಟದಂತ್ಯದ ವೇಳೆಗೆ 7 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿತ್ತು. ಇನ್ನು ಎರಡನೇ ದಿನದಾಟವನ್ನು ಕರ್ನಾಟಕ ತಂಡವು ಅತ್ಯಂತ ಎಚ್ಚರಿಕೆಯಿಂದಲೇ ಆರಂಭಿಸಿತು. ಎರಡನೇ ದಿನದಾಟದ ಆರಂಭದಲ್ಲೇ ವಿಜಯ್‌ಕುಮಾರ್ ವೈಶಾಕ್ ಅವರನ್ನು ಅಂಕಿತ್ ರಜಪೂತ್ ಪೆವಿಲಿಯನ್ನಿಗಟ್ಟುವಲ್ಲಿ ಯಶಸ್ವಿಯಾದರು. ಆದರೆ 26 ರನ್ ಗಳಿಸಿದ್ದ ಆಲ್ರೌಂಡರ್ ಶ್ರೇಯಸ್ ಗೋಪಾಲ್, ಕೆಳಕ್ರಮಾಂಕದ ಬ್ಯಾಟರ್‌ಗಳ ಜತೆಗೂಡಿ ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಸಮಯೋಚಿತ ಬ್ಯಾಟಿಂಗ್ ನಡೆಸಿದ ಶ್ರೇಯಸ್ ಅಯ್ಯರ್ 80 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 56 ರನ್ ಬಾರಿಸಿ ಅಜೇಯರಾಗುಳಿದರು. ಕರ್ನಾಟಕ ತಂಡವು ಮೊದಲ ಇನಿಂಗ್ಸ್‌ನಲ್ಲಿ 253 ರನ್ ಬಾರಿಸಿ ಸರ್ವಪತನ ಕಂಡಿತು.
ಇನ್ನು ಕರ್ನಾಟಕ ತಂಡವನ್ನು ಆಲೌಟ್ ಮಾಡಿ ಮೊದಲ ಇನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ ತಂಡಕ್ಕೆ ಕರ್ನಾಟಕದ ವೇಗಿಗಳು ಶಾಕ್ ನೀಡಿದರು. ಉತ್ತರ ಪ್ರದೇಶದ ಆರಂಭಿಕ ಬ್ಯಾಟರ್‌ಗಳು 10 ರನ್‌ಗಳಿಸುವಷ್ಟರಲ್ಲಿ ಇಬ್ಬರು ಪೆವಿಲಿಯನ್ ಸೇರಿದರು. ಇನ್ನು ನಾಯಕ ಕರಣ್ ಶರ್ಮಾ ಬ್ಯಾಟಿಂಗ್ ಕೇವಲ 2 ರನ್‌ಗಳಿಗೆ ಸೀಮಿತವಾಯಿತು. 4ನೇ ವಿಕೆಟ್‌ಗೆ ಪ್ರಿಯಂ ಗರ್ಗ್ ಹಾಗೂ ರಿಂಕು ಸಿಂಗ್ ಜೋಡಿ 42 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಅದರೆ ಈ ಜೋಡಿ ಬೇರ್ಪಡಿಸುವಲ್ಲಿ ರೋನಿತ್ ಮೋರೆ ಯಶಸ್ವಿಯಾದರು.
ಉತ್ತರ ಪ್ರದೇಶ ನಾಟಕೀಯ ಕುಸಿತ: ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಉತ್ತರ ಪ್ರದೇಶ ತಂಡಕ್ಕೆ ಪ್ರಿಯಂ ಗರ್ಗ್ ಹಾಗೂ ರಿಂಕು ಸಿಂಗ್ ಕೆಲಕಾಲ ಆಸರೆಯಾಗುವ ಯತ್ನ ನಡೆಸಿದರು. ಗರ್ಗ್ 39 ರನ್ ಬಾರಿಸಿ ರೋನಿತ್ ಮೋರೆಗೆ ವಿಕೆಟ್ ಒಪ್ಪಿಸಿದರೆ, ರಿಂಕು ಸಿಂಗ್ 33 ರನ್ ಗಳಿಸಿ ಕೃಷ್ಣಪ್ಪ ಗೌತಮ್‌ಗೆ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ದೃವ್ ಜ್ವರೆಲ್(9) ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರೆ, ಪ್ರಿನ್ಸ್ ಯಾದವ್ ಹಾಗೂ ಸೌರಭ್ ಕುಮಾರ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ಇನ್ನು ಕೊನೆಯಲ್ಲಿ ಶಿವಂ ಮಾವಿ(32), ಯಶ್ ದಯಾಳ್(13) ಹಾಗೂ ಅಂಕಿತ್ ರಜಪೂತ್(18) ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.