Ranji Trophy ಜಮ್ಮು ಕಾಶ್ಮೀರ ಎದುರು ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ

Suvarna News   | Asianet News
Published : Feb 24, 2022, 09:42 AM ISTUpdated : Feb 24, 2022, 10:05 AM IST
Ranji Trophy ಜಮ್ಮು ಕಾಶ್ಮೀರ ಎದುರು ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ

ಸಾರಾಂಶ

* ರಣಜಿ ಟ್ರೋಫಿ ಟೂರ್ನಿಯಲ್ಲಿ ಟಾಸ್ ಗೆದ್ದ ಕರ್ನಾಟಕ ಬ್ಯಾಟಿಂಗ್ ಆಯ್ಕೆ * ತಂಡದ ಸ್ಟಾರ್ ಆಟಗಾರ ಮಯಾಂಕ್ ಅಗರ್‌ವಾಲ್‌ಗೆ ವಿಶ್ರಾಂತಿ * ಮೊದಲ ಪಂದ್ಯದಲ್ಲಿ ಡ್ರಾ ಸಾಧಿಸಿರುವ ಕರ್ನಾಟಕಕ್ಕೀಗ ಮಾಡು ಇಲ್ಲವೇ ಮಡಿ ಪಂದ್ಯ

ಚೆನ್ನೈ(ಫೆ.24): ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರ (Karnataka vs Jammu and Kashmir) ತಂಡಗಳ ನಡುವಿನ ರಣಜಿ ಟ್ರೋಫಿ (Ranji Trophy) ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡವು ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನವನ್ನು ತೆಗೆದುಕೊಂಡಿದೆ. ಡ್ರಾನೊಂದಿಗೆ 2022ರ ರಣಜಿ ಟ್ರೋಫಿಯನ್ನು ಆರಂಭಿಸಿದ 8 ಬಾರಿ ಚಾಂಪಿಯನ್‌ ಕರ್ನಾಟಕ, ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಜಮ್ಮು-ಕಾಶ್ಮೀರ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಿದೆ.

ಮೊದಲ ಪಂದ್ಯದಲ್ಲಿ ರೈಲ್ವೇಸ್‌ ವಿರುದ್ಧ ಡ್ರಾಗೆ ತೃಪ್ತಿಪಟ್ಟು ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದ ಮೇಲೆ 3 ಅಂಕ ಗಳಿಸಿರುವ ಕರ್ನಾಟಕ, ಜಮ್ಮು-ಕಾಶ್ಮೀರದ ವಿರುದ್ಧ ಸುಧಾರಿತ ಬೌಲಿಂಗ್‌ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. ತಂಡದ ಬ್ಯಾಟರ್‌ಗಳು ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದು, ನಾಯಕ ಮನೀಶ್‌ ಪಾಂಡೆ (Manish Pandey) ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಶ್ರೀಲಂಕಾ ವಿರುದ್ಧ ಟೆಸ್ಟ್‌ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿರುವ ಮಯಾಂಕ್ ಅಗರ್‌ವಾಲ್‌ (Mayank Agarwal) ಕರ್ನಾಟಕ ತಂಡದಿಂದ ಹೊರಬಿದ್ದಿದ್ದು, ಆರಂಭಿಕರಾಗಿ ದೇವದತ್ ಪಡಿಕ್ಕಲ್ (Devdutt Padikkal) ಹಾಗೂ ರವಿಕುಮಾರ್ ಸಮರ್ಥ್ ಅವರು ಜವಾಬ್ದಾರಿಯುತ ಪ್ರದರ್ಶನವನ್ನು ನೀಡಬೇಕಿದೆ.

ಮೇಲ್ನೋಟಕ್ಕೆ ಕರ್ನಾಟಕ ಕ್ರಿಕೆಟ್ ತಂಡವು ಸಹ ಸಾಕಷ್ಟು ಸಮತೋಲಿತವಾಗಿ ಕೂಡಿದಂತೆ ಕಂಡು ಬರುತ್ತಿದೆ. ಮಯಾಂಕ್ ಅಗರ್‌ವಾಲ್ ಅನುಪಸ್ಥಿತಿಯ ಹೊರತಾಗಿಯೂ ಬ್ಯಾಟಿಂಗ್ ವಿಭಾಗದಲ್ಲಿ ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್ ಮಾತ್ರವಲ್ಲದೇ ಮಧ್ಯಮ ಕ್ರಮಾಂಕದಲ್ಲಿ ನಾಯಕ ಮನೀಶ್ ಪಾಂಡೆ, ಕೃಷ್ಣಮೂರ್ತಿ ಸಿದ್ದಾರ್ಥ್, ಕರುಣ್ ನಾಯರ್ (Karun Nair), ಶರತ್ ಅವರಂತಹ ಅನುಭವಿ ಆಟಗಾರರ ದಂಡೇ ಇದೆ. ಇನ್ನು ಆಲ್ರೌಂಡರ್‌ ವಿಭಾಗದಲ್ಲಿ ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚಲು ಕಾಯುತ್ತಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ಇತ್ತೀಚೆಗಷ್ಟೇ ವಿಂಡೀಸ್ ಎದುರಿನ ಟಿ20 ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಪ್ರಸಿದ್ದ್ ಕೃಷ್ಣ ಸೇರಿದಂತೆ ಯುವ ವೇಗಿ ವಿದ್ಯಾಧರ್ ಪಾಟೀಲ್ ಹಾಗೂ ರೋನಿತ್ ಮೋರೆ ಮೊನಚಾದ ದಾಳಿ ನಡೆಸಲು ಸಜ್ಜಾಗಿದ್ದಾರೆ.

Ind vs SL ಸೂರ್ಯಕುಮಾರ್ ಯಾದವ್ ಗಾಯಗೊಂಡಿದ್ದು ನಮಗೆ ದೊಡ್ಡ ಹೊಡೆತ: ರೋಹಿತ್ ಶರ್ಮಾ

ಇನ್ನು ಮೊದಲ ಪಂದ್ಯದಲ್ಲಿ ಪುದುಚೇರಿ ವಿರುದ್ಧ ಗೆಲುವು ಸಾಧಿಸಿದ್ದ ಇಯಾನ್ ದೇವ್ ಸಿಂಗ್ ನೇತೃತ್ವದ ಜಮ್ಮು-ಕಾಶ್ಮೀರ 6 ಅಂಕಗಳೊಂದಿಗೆ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದ್ದು, ಈ ಪಂದ್ಯದಲ್ಲಿ ಕನಿಷ್ಠ ಡ್ರಾ ಸಾಧಿಸಿದರೂ, ನೇರವಾಗಿ ಕ್ವಾರ್ಟರ್‌ ಫೈನಲ್‌ಗೇರುವ ಸಾಧ್ಯತೆ ಹೆಚ್ಚಲಿದೆ. ಜಮ್ಮು ಕಾಶ್ಮೀರ ತಂಡವು ಸಾಕಷ್ಟು ಅನುಭವಿ ಹಾಗೂ ಯುವ ಆಟಗಾರರನ್ನೊಳಗೊಂಡ ತಂಡವಾಗಿದ್ದು, ಐಪಿಎಲ್‌ನಲ್ಲಿ ಮಿಂಚಿನ ಪ್ರದರ್ಶನ ತೋರಿದ ಅಬ್ದುಲ್ ಸಮದ್, ಉಮ್ರಾನ್ ಮಲಿಕ್ ಸೇರಿದಂತೆ ಸ್ಟಾರ್ ಆಲ್ರೌಂಡರ್ ಪರ್ವೇಜ್ ರಸೂಲ್ ಅವರಂತಹ ಆಟಗಾರರು ಇರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ.

ತಂಡಗಳು ಹೀಗಿವೆ

ಕರ್ನಾಟಕ ಕ್ರಿಕೆಟ್ ತಂಡ
ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್, ಕೃಷ್ಣಮೂರ್ತಿ ಸಿದ್ದಾರ್ಥ್, ಮನೀಶ್ ಪಾಂಡೆ(ನಾಯಕ). ಕರುಣ್ ನಾಯರ್, ಸಮರ್ಥ್ ಬಿ.ಆರ್(ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ರೋನಿತ್ ಮೋರೆ, ವಿದ್ಯಾಧರ್ ಪಾಟೀಲ್, ಪ್ರಸಿದ್ಧ್ ಕೃಷ್ಣ

ಜಮ್ಮು ಮತ್ತ ಕಾಶ್ಮೀರ ಕ್ರಿಕೆಟ್ ತಂಡ
ಖಮ್ರಾನ್ ಇಕ್ಬಾಲ್, ಜತಿನ್ ವಡ್ವಾನ್, ಶುಭಮ್ ಪುಂಡಿರ್, ಇಯಾನ್ ದೇವ್ ಸಿಂಗ್(ನಾಯಕ), ಅಬ್ದುಲ್ ಸಮದ್, ಪರ್ವೇಜ್ ರಸೂಲ್, ಫಜಿಲ್ ರಶೀದ್(ವಿಕೆಟ್ ಕೀಪರ್), ಮುಜ್ತಬಾ ಯೂಸುಫ್, ಆಬಿದ್ ಮುಷ್ತಾಕ್, ಆಕೀಬ್ ನಬಿ, ಉಮ್ರಾನ್ ಮಲಿಕ್

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!