
ಜಮ್ಮು(ಫೆ.20): 2019-20ರ ಸಾಲಿನ ರಣಜಿ ಟ್ರೋಫಿಯ ನಾಕೌಟ್ ಹಂತ ಗುರುವಾರದಿಂದ ಆರಂಭಗೊಳ್ಳಲಿದ್ದು, ಕರ್ನಾಟಕ ತಂಡ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ಸೆಣಸಲಿದೆ. ಕಳೆದ ಸಾಲಿನಲ್ಲಿ ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ್ದ ಕರ್ನಾಟಕ, ಈ ಬಾರಿ ಚಾಂಪಿಯನ್ ಆಗಲು ಕಾತರಿಸುತ್ತಿದ್ದು ಟೂರ್ನಿಯಲ್ಲಿ ಈ ವರೆಗೂ ಅಜೇಯವಾಗಿ ಉಳಿದಿದೆ.
ಬರೋಡ ಬಗ್ಗುಬಡಿದು ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ ಲಗ್ಗೆ
ಗುಂಪು ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, ಇನ್ನುಳಿದ 4 ಪಂದ್ಯಗಳನ್ನು ಡ್ರಾ ಮಾಡಿಕೊಂಡ ಕರ್ನಾಟಕ ಎಲೈಟ್ ‘ಎ’ ಹಾಗೂ ‘ಬಿ’ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆಯಿತು. ಕೊನೆ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು ನಾಕೌಟ್ ಪ್ರವೇಶಿಸಿದ ಕರ್ನಾಟಕ, ಈ ಪಂದ್ಯದಲ್ಲೂ ಸುಲಭ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ. ತಾರಾ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ ತಂಡ ಕೂಡಿಕೊಂಡಿರುವುದು ಬ್ಯಾಟಿಂಗ್ ಬಲ ಹೆಚ್ಚಿಸಲಿದೆ. ಜತೆಗೆ ನಾಯಕ ಕರುಣ್ ನಾಯರ್‌ಗೆ ಆಟದ ವೇಳೆ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಪಾಂಡೆ ನೆರವಾಗಲಿದ್ದಾರೆ.
ರಣಜಿ ಟ್ರೋಫಿ: ಕರ್ನಾಟಕ ತಂಡ ಕೂಡಿಕೊಂಡ ಮನೀಶ್ ಪಾಂಡೆ
ದೇವದತ್ ಪಡಿಕ್ಕಲ್, ಆರ್.ಸಮರ್ಥ್, ಕರುಣ್, ಪಾಂಡೆ ಬ್ಯಾಟಿಂಗ್ ಆಧಾರ ಎನಿಸಿದರೆ, ಕೆ.ಗೌತಮ್ ಆಲ್ರೌಂಡ್ ಪ್ರದರ್ಶನ ತಂಡಕ್ಕೆ ಅನಿವಾರ್ಯವೆನಿಸಿದೆ. ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಮಿಥುನ್ ವೇಗದ ಬೌಲಿಂಗ್ ಹೊಣೆ ಹೊರಲಿದ್ದು, ಸ್ಪಿನ್ನರ್ ಶ್ರೇಯಸ್ ಗೋಪಾಲ್ ಲಯಕ್ಕೆ ಮರಳಲು ಕಾತರಿಸುತ್ತಿದ್ದಾರೆ.
ಜಮ್ಮು-ಕಾಶ್ಮೀರ ತಂಡ ಹಲವು ಸವಾಲುಗಳನ್ನು ಮೆಟ್ಟಿನಿಂತು ನಾಕೌಟ್ ಪ್ರವೇಶಿಸಿದೆ. ‘ಸಿ’ ಗುಂಪಿನಲ್ಲಿ ಅಜೇಯ ಸ್ಥಾನ ಪಡೆದಿದ್ದ ಜಮ್ಮು-ಕಾಶ್ಮೀರ, ಕರ್ನಾಟಕಕ್ಕೆ ಆಘಾತ ನೀಡಲು ಕಾಯುತ್ತಿದೆ. ನಾಯಕ ಪರ್ವೇಜ್ ರಸೂಲ್ ಈ ಋುತುವಿನಲ್ಲಿ 403 ರನ್ ಗಳಿಸಿದ್ದು, 25 ವಿಕೆಟ್‌ಗಳನ್ನು ಸಹ ಕಬಳಿಸಿದ್ದಾರೆ. 547 ರನ್ ಕಲೆಹಾಕಿರುವ ಯುವ ಬ್ಯಾಟ್ಸ್‌ಮನ್ ಅಬ್ದುಲ್ ಸಮದ್ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.
ಪಂದ್ಯಕ್ಕೆ ಮಳೆ ಅಡ್ಡಿ: ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದೆ. ಪಂದ್ಯ ನಿಗದಿತ ಸಮಯದಂತೆ 9.30ಕ್ಕೆ ಆರಂಭವಾಗಬೇಕಿತ್ತು. ಆದರೆ ತುಂತುರು ಮಳೆ ಬೀಳುತ್ತಿರುವುದರಿಂದ ಪಂದ್ಯ ಸ್ವಲ್ಪ ತಡವಾಗಿ ಆರಂಭವಾಗಲಿದೆ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ.
ಜಯದ ವಿಶ್ವಾಸದಲ್ಲಿ ಸೌರಾಷ್ಟ್ರ, ಬಂಗಾಳ
ವಲ್ಸಾದ್‌ನಲ್ಲಿ ನಡೆಯಲಿರುವ ಮೊದಲ ಕ್ವಾರ್ಟರ್ ಫೈನಲ್‌ನಲ್ಲಿ ಗುಜರಾತ್ ಹಾಗೂ ಗೋವಾ ತಂಡಗಳು ಸೆಣಸಲಿವೆ. ಕಟಕ್‌ನಲ್ಲಿ ನಡೆಯಲಿರುವ 2ನೇ ಕ್ವಾರ್ಟರ್‌ನಲ್ಲಿ ಬಂಗಾಳ ಹಾಗೂ ಒಡಿಶಾ, ಒಂಗೊಲ್‌ನಲ್ಲಿ ನಡೆಯಲಿರುವ 4ನೇ ಕ್ವಾರ್ಟರ್ ಫೈನಲ್‌ನಲ್ಲಿ ಆಂಧ್ರ ಹಾಗೂ ಸೌರಾಷ್ಟ್ರ ತಂಡಗಳು ಮುಖಾಮುಖಿಯಾಗಲಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.