ರೈಲ್ವೇಸ್ ವಿರುದ್ದದ ರಣಜಿ ಟ್ರೋಫಿ ಮಹತ್ವದ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಪಡೆದಿರುವ ಕರ್ನಾಟಕ, ಗೆಲುವಿನತ್ತ ಚಿತ್ತ ಹರಿಸಿದೆ. ಆರಂಭಿಕ ಯಶಸ್ಸು ಸಿಕ್ಕಿರುವ ಕರ್ನಾಟಕ, ಎದುರಾಳಿಗೆ ಶಾಕ್ ನೀಡಲು ರೆಡಿಯಾಗಿದೆ.
ದೆಹಲಿ(ಜ.30): 2019-20ರ ರಣಜಿ ಟ್ರೋಫಿಯಲ್ಲಿ ನಾಕೌಟ್ ಹಂತಕ್ಕೆ ಪ್ರವೇಶಿಸುವ ವಿಶ್ವಾಸದಲ್ಲಿರುವ ಕರ್ನಾಟಕ, ರೈಲ್ವೇಸ್ ವಿರುದ್ಧ ಇಲ್ಲಿ ನಡೆಯುತ್ತಿರುವ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ತಿಣುಕಾಡಿ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ವಿಕೆಟ್ ಕೀಪರ್ ಶರತ್ ಶ್ರೀನಿವಾಸ್‌ರ ಹೋರಾಟದ ಅರ್ಧಶತಕ ತಂಡಕ್ಕೆ ಆಸರೆಯಾಗಿದೆ.
ಇದನ್ನೂ ಓದಿ: RCB ತಂಡದಿಂದ ಹೊರಬಿದ್ದ ಬಳಿಕ ಅಬ್ಬರಿಸುತ್ತಿದ್ದಾರೆ ಸರ್ಫರಾಜ್..!
undefined
ಮೊದಲ ಇನ್ನಿಂಗ್ಸ್‌ನಲ್ಲಿ ರೈಲ್ವೇಸ್ ತಂಡವನ್ನು 182 ರನ್‌ಗಳಿಗೆ ಆಲೌಟ್ ಮಾಡಿದ ಕರ್ನಾಟಕ, ಬ್ಯಾಟಿಂಗ್ ವೈಫಲ್ಯ ಕಂಡಿತು. ದೇವದತ್ ಪಡಿಕ್ಕಲ್ ಹೊರತುಪಡಿಸಿ ಅಗ್ರ ಕ್ರಮಾಂಕದ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಬೇಗನೆ ವಿಕೆಟ್ ಕಳೆದುಕೊಂಡರು. ಸಮಥ್‌ರ್ (0), ರೋಹನ್ ಕದಂ (02), ನಾಯಕ ಕರುಣ್ ನಾಯರ್ (17), ಕೆ.ವಿ.ಸಿದ್ಧಾಥ್‌ರ್ (04) ಹೆಚ್ಚಿನ ಕೊಡುಗೆ ನೀಡಲಿಲ್ಲ. 55 ರನ್ ಗಳಿಸಿ ದೇವದತ್ ಔಟಾದಾಗ ತಂಡದ ಮೊತ್ತ 85 ರನ್‌ಗೆ 5 ವಿಕೆಟ್.
ಶ್ರೇಯಸ್ ಗೋಪಾಲ್ (12) ಸಹ ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. 7ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ಶರತ್ ಹಾಗೂ ಆಲ್ರೌಂಡರ್ ಕೆ.ಗೌತಮ್ 64 ರನ್ ಜೊತೆಯಾಟವಾಡಿದರು. ಗೌತಮ್ 31 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್‌ನೊಂದಿಗೆ 41 ರನ್ ಸಿಡಿಸಿ ಔಟಾದಾಗ ತಂಡ ಮುನ್ನಡೆ ಗಳಿಸಲು ಇನ್ನೂ 7 ರನ್‌ಗಳು ಬೇಕಿದ್ದವು. 177 ರನ್ ಆಗುವಷ್ಟರಲ್ಲಿ 9 ವಿಕೆಟ್ ಪತನಗೊಂಡ ಕಾರಣ, ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಹಿನ್ನಡೆ ಅನುಭವಿಸುವ ಭೀತಿಗೆ ಸಿಲುಕಿತು. ಪ್ರತೀತ್ ಜೈನ್ ಜತೆ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿದ ಶರತ್, ತಂಡಕ್ಕೆ ಮುನ್ನಡೆ ಒದಗಿಸಿದರು. ದಿನದಂತ್ಯಕ್ಕೆ ಕರ್ನಾಟಕ 9 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿ, 17 ರನ್ ಮುನ್ನಡೆ ಪಡೆದಿದೆ.
2ನೇ ದಿನದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿದ್ದ ರೈಲ್ವೇಸ್, ಬುಧವಾರ ಆ ಮೊತ್ತಕ್ಕೆ 22 ರನ್ ಸೇರಿಸಿತು. ಅರಿಂದಾಮ್ ಘೋಷ್ 59 ರನ್ ಗಳಿಸಿ ಔಟಾದರು. ಕರ್ನಾಟಕದ ಪರ ಪ್ರತೀಕ್ ಜೈನ್ 5, ಅಭಿಮನ್ಯು ಮಿಥುನ್ 4 ವಿಕೆಟ್ ಕಿತ್ತರು.
ಸ್ಕೋರ್: ರೈಲ್ವೇಸ್ 182 (ಅರಿಂದಾಮ್ 59, ಪ್ರತೀಕ್ 5-38, ಮಿಥುನ್ 4-51), ಕರ್ನಾಟಕ 199/9(ಶರತ್ 56*, ದೇವದತ್ 55, ಮಿಶ್ರಾ 5-70)