
ಅಜೀಜಅಹ್ಮದ, ಬಳಗಾನೂರ
ಹುಬ್ಬಳ್ಳಿ: ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಎರಡನೇ ದಿನವೂ ಜಮ್ಮು-ಕಾಶ್ಮೀರ ಬ್ಯಾಟರ್‌ಗಳು ಕರ್ನಾಟಕದ ಬೌಲರ್‌ಗಳ ಬೆವರಿಳಿಸಿದರು. ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 527 ರನ್ ಗಳಿಸಿದ ತಂಡ ಉತ್ತಮ ಸ್ಥಿತಿಯಲ್ಲಿದೆ.
ಮೊದಲ ದಿನವಾದ ಮಂಗಳವಾರ ಶುಭಂ ಸಿಂಗ್ ಪುಂಡೀರ್ ಶತಕದ ನೆರವಿನಿಂದ 87 ಓವರ್‌ಗಳಿಗೆ 2 ವಿಕೆಟ್‌ಗಳ ನಷ್ಟಕ್ಕೆ 284 ರನ್ ಗಳಿಸಿದ್ದ ತಂಡವು ಬುಧವಾರವೂ ಅಬ್ಬರಿಸಿತು. ಶುಭಂ 12 ಬೌಂಡರ್, 2 ಸಿಕ್ಸರ್ ನೆರವಿನೊಂದಿಗೆ 121(247 ಎಸೆತ) ಗಳಿಸಿ ವಿದ್ಯಾಧರ್ ಪಾಟೀಲ್‌ಗೆ ವಿಕೆಟ್ ಒಪ್ಪಿಸಿದರು. 61 ರನ್ ಗಳಿಸಿದ್ದ ಅಬ್ದುಲ್ ಸಮದ್ ಪ್ರಸಿದ್ಧ ಕೃಷ್ಣ ಎಸೆತದಲ್ಲಿ ಔಟಾದರು. ಶುಭಂ ಹಾಗೂ ಸಮದ್ ನಡುವಿನ 124 ರನ್ ಜತೆಯಾಟ ತಂಡದ ಮೊತ್ತ ಹೆಚ್ಚಿಸಿತು.
ನಂತರ ಕನ್ಹಯ್ಯಾ ವಾಧವನ್ ಹಾಗೂ ನಾಯಕ ಪರಾಸ್ ಡೋಗ್ರಾ 110 ರನ್ ಜತೆಯಾಟವಾಡಿದರು. 9 ಬೌಂಡರಿಗಳೊಂದಿಗೆ 70 ರನ್ ಗಳಿಸಿದ್ದ ಕನ್ಹಯ್ಯಾ, ಶಿಖರ್ ಶೆಟ್ಟಿ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿದ್ದ ಕೆ.ಎಲ್.ರಾಹುಲ್‌ಗೆ ಕ್ಯಾಚ್ ನೀಡಿದರು. ನಂತರ ಡೋಗ್ರಾ ಜತೆಗೂಡಿದ ಸಾಹಿಲ್ ಲೋತ್ರಾ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ತಂಡದ ಮೊತ್ತ 471 ರನ್‌ಗಳಾಗಿದ್ದಾಗ ಪರಾಸ್(70) ಅವರು ಶ್ರೇಯಸ್ ಗೋಪಾಲ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಸದ್ಯ ಸಾಹಿಲ್ ಲೋತ್ರಾ(57), ಆಬಿದ್ ಮುಸ್ತಾಕ್(20) ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಜಮ್ಮು-ಕಾಶ್ಮೀರ 156 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 527 ರನ್ ಗಳಿಸಿದ ವೇಳೆ ಮಧ್ಯಾಹ್ನ 3.50ಕ್ಕೆ ಮಂದ ಬೆಳಕಿನಿಂದ ಕೆಲಕಾಲ ಪಂದ್ಯ ಮುಂದೂಡಲಾಯಿತು. ಬಳಿಕ 4.10ಕ್ಕೆ ಜಿಟಿಜಿಟಿ ಮಳೆ ಸುರಿದ ಪರಿಣಾಮ ಪಂದ್ಯ ಸ್ಥಗಿತಗೊಳಿಸಿ ಗುರುವಾರಕ್ಕೆ ಮುಂದೂಡಲಾಯಿತು.
ಪ್ರಸಿದ್ಧ ಕೃಷ್ಣ ಓವರ್‌ನಲ್ಲಿ ಪರಾಸ್ ಡೋಗ್ರಾ 3 ಬೌಂಡರಿ ಬಾರಿಸಿದರು. ಇದೇ ಓವರಿನಲ್ಲಿ ಸ್ಲೀಪ್‌ನಲ್ಲಿ ಅನೀಶ್ ಕೆ.ವಿ. ಹಾಗೂ ಡೋಗ್ರಾ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದ ಕೆರಳಿದ ಡೋಗ್ರಾ, ಅನೀಶ್‌ಗೆ ತಲೆಯಿಂದ ಡಿಚ್ಚಿ ಹೊಡೆದರು. ಈ ವೇಳೆ ಮಯಾಂಕ್ ಅಗರವಾಲ್ ಮಧ್ಯ ಪ್ರವೇಶಿಸಿದರು. ತಕ್ಷಣ ಅಂಪೈರ್ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಆಗ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಏರು ಧ್ವನಿಯಲ್ಲಿ ಕೂಗಿದರು. ನಿಯಮ ಉಲ್ಲಂಘಿಸಿದ್ದಕ್ಕೆ ಪರಾಸ್‌ಗೆ ಪಂದ್ಯದ ಸಂಭಾವನೆಯ ಶೇ.50ರಷ್ಟು ದಂಡ ವಿಧಿಸಲಾಗಿದೆ.
ಸ್ಕೋರ್: ಜಮ್ಮು-ಕಾಶ್ಮೀರ 156 ಓವರ್‌ಗಳಲ್ಲಿ 527/6(2ನೇ ದಿನದಂತ್ಯಕ್ಕೆ) (ಶುಭಮ್ 121, ಪರಾಸ್ 70, ಕನ್ಹಯ್ಯಾ 70, ಸಮದ್ 61, ಸಾಹಿಲ್ ಔಟಾಗದೆ 57, ಪ್ರಸಿದ್ಧ ಕೃಷ್ಣ 3-90, ವಿದ್ಯಾಧರ್ 1-104, ಶ್ರೇಯಸ್ 1-130, ಶಿಖರ್ ಶೆಟ್ಟಿ 1-112)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.