Ranji Trophy: ಬೆಂಗಳೂರಿನಲ್ಲಿ ರಣಜಿ ಟ್ರೋಫಿ ನಾಕೌಟ್‌..?

Suvarna News   | Asianet News
Published : Mar 19, 2022, 11:12 AM IST
Ranji Trophy: ಬೆಂಗಳೂರಿನಲ್ಲಿ ರಣಜಿ ಟ್ರೋಫಿ ನಾಕೌಟ್‌..?

ಸಾರಾಂಶ

* 2022ನೇ ಸಾಲಿನ ರಣಜಿ ಟ್ರೋಫಿ ನಾಕೌಟ್ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ * ಈಗಾಗಲೇ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯ * ಕರ್ನಾಟಕ ಸೇರಿದಂತೆ 8 ತಂಡಗಳು ನಾಕೌಟ್‌ ಹಂತಕ್ಕೆ ಅರ್ಹತೆ

ನವದೆಹಲಿ(ಮಾ.19): 2021-22ರ ಸಾಲಿನ ರಣಜಿ ಟ್ರೋಫಿ (Ranji Trophy) ನಾಕೌಟ್‌ ಹಂತದ ಪಂದ್ಯಗಳನ್ನು ಬೆಂಗಳೂರಲ್ಲಿ ನಡೆಸಲು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ನಿರ್ಧರಿಸಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. 15ನೇ ಆವೃತ್ತಿಯ ಐಪಿಎಲ್‌ (IPL 2022) ಟೂರ್ನಿ ಮುಕ್ತಾಯಗೊಂಡ ಬಳಿಕ ರಣಜಿ ನಾಕೌಟ್‌ ಹಂತ ಆರಂಭಗೊಳ್ಳಲಿದೆ. ಮೇ 30ರಿಂದ ಜೂನ್‌ 26ರ ವರೆಗೂ 4 ಕ್ವಾರ್ಟರ್‌ ಫೈನಲ್‌, 2 ಸೆಮಿಫೈನಲ್‌ ಹಾಗೂ 1 ಫೈನಲ್‌ ಪಂದ್ಯಗಳನ್ನು ನಡೆಸಲು ಬಿಸಿಸಿಐ ನಿರ್ಧರಿಸಿದ್ದು, ಮೇ ಹಾಗೂ ಜೂನ್‌ನಲ್ಲಿ ದೇಶದ ಇತರೆಡೆ ಮಳೆ ಮುನ್ಸೂಚನೆ ಇರುವ ಕಾರಣ, ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (M Chinnaswamy Stadium) ಸಬ್‌-ಏರ್‌ ವ್ಯವಸ್ಥೆ ಇರುವ ಕಾರಣ, ಮಳೆ ನಿಂತ ಕೆಲವೇ ನಿಮಿಷಗಳಲ್ಲಿ ಆಟ ಆರಂಭಿಸಬಹುದು. ಹೀಗಾಗಿ ಆತಿಥ್ಯ ಹಕ್ಕನ್ನು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ(ಕೆಎಸ್‌ಸಿಎ)ಗೆ ನೀಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸದ್ಯದಲ್ಲೇ ಬಿಸಿಸಿಐ ಅಧಿಕೃತ ಪ್ರಕಟಣೆ ನೀಡುವ ನಿರೀಕ್ಷೆ ಇದೆ. ಈ ವರ್ಷ ರಣಜಿ ಟ್ರೋಫಿಯನ್ನು ಎರಡು ಹಂತಗಳಲ್ಲಿ ನಡೆಸಲು ಬಿಸಿಸಿಐ (BCCI) ಯೋಜನೆ ರೂಪಿಸಿದೆ. ಈಗಾಗಲೇ ಗುಂಪು ಹಂತ, ಪ್ರಿ ಕ್ವಾರ್ಟರ್‌ ಮುಕ್ತಾಯಗೊಂಡಿದ್ದು, ಕರ್ನಾಟಕ, ಮಧ್ಯಪ್ರದೇಶ, ಮುಂಬೈ, ಬೆಂಗಾಲ್‌, ಉತ್ತರಾಖಂಡ, ಪಂಜಾಬ್‌, ಉತ್ತರ ಪ್ರದೇಶ ಹಾಗೂ ಜಾರ್ಖಂಡ್‌ ತಂಡಗಳು ಅಂತಿಮ 8ರ ಸುತ್ತಿಗೆ ಪ್ರವೇಶ ಪಡೆದಿವೆ. ನಾಕೌಟ್‌ ಹಂತದ ವೇಳಾಪಟ್ಟಿಯನ್ನು ಬಿಸಿಸಿಐ, ಮುಂದಿನ ತಿಂಗಳು ಬಿಡುಗಡೆಗೊಳಿಸುವ ಸಾಧ್ಯತೆ ಇದೆ.

ಕಳೆದ ವರ್ಷ ಕೋವಿಡ್‌ನಿಂದ (COVID 19) ರದ್ದಾಗಿದ್ದ ರಣಜಿ ಟ್ರೋಫಿ, ಈ ವರ್ಷ ಒಮಿಕ್ರೋನ್‌ ಸೋಂಕಿನಿಂದಾಗಿ ಮುಂದೂಡಿಕೆಯಾಗಿತ್ತು. ಬಳಿಕ ಫೆಬ್ರವರಿ 17ರಂದು ಟೂರ್ನಿಗೆ ಚಾಲನೆ ದೊರೆತಿತ್ತು. 38 ತಂಡಗಳನ್ನು 8 ಎಲೈಟ್‌ ಗುಂಪು, 1 ಪ್ಲೇಟ್‌ ಗುಂಪಾಗಿ ವಿಂಗಡಿಸಲಾಗಿತ್ತು. ಎಲೈಟ್‌ ಗುಂಪುಗಳಲ್ಲಿ ತಲಾ 4, ಪ್ಲೇಟ್‌ ಗುಂಪಿನಲ್ಲಿ 8 ತಂಡಗಳಿದ್ದವು. ಒಟ್ಟು 9 ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಿದ್ದವು. ಒಟ್ಟು 8 ತಂಡಗಳ ಪೈಕಿ ಹೆಚ್ಚು ಅಂಕ, ನೆಟ್‌ ರನ್‌ರೇಟ್‌ ಪಡೆದ ಅಗ್ರ 7 ತಂಡಗಳು ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರೆ, 8ನೇ ತಂಡ ಪ್ಲೇಟ್‌ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡದ ವಿರುದ್ಧ ಪ್ರಿ ಕ್ವಾರ್ಟರ್‌ ಪಂದ್ಯದಲ್ಲಿ ಆಡಬೇಕಿತ್ತು. ಲೀಗ್‌ ಹಂತದ ಮುಕ್ತಾಯಕ್ಕೆ 8ನೇ ಸ್ಥಾನ ಪಡೆದಿದ್ದ ಜಾರ್ಖಂಡ್‌, ಪ್ಲೇಟ್‌ ಗುಂಪಿನ ಅಗ್ರ ತಂಡ ನಾಗಾಲ್ಯಾಂಡ್‌ ವಿರುದ್ಧ ಪ್ರಿ ಕ್ವಾರ್ಟರ್‌ನಲ್ಲಿ ಸೆಣಸಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಅಂತಿಮ 8ರ ಸುತ್ತಿಗೆ ಅರ್ಹತೆ ಪಡೆದಿದೆ.

ಕರ್ನಾಟಕಕ್ಕೆ ತವರಿನ ಲಾಭ!

ನಾಕೌಟ್‌ ಪಂದ್ಯಗಳು ಬೆಂಗಳೂರಲ್ಲಿ ನಡೆಯಲಿರುವ ಕಾರಣ, ಆತಿಥೇಯ ಕರ್ನಾಟಕ ತಂಡಕ್ಕೆ ತವರಿನ ಲಾಭ ದೊರೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ, ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ (KSCA) ಮೈದಾನ ಹಾಗೂ ಜಸ್ಟ್‌ ಕ್ರಿಕೆಟ್‌ ಮೈದಾನಗಳಲ್ಲಿ ಪಂದ್ಯಗಳು ನಡೆಯುವ ನಿರೀಕ್ಷೆ ಇದೆ. ಮನೀಶ್ ಪಾಂಡೆ (Manish Pandey) ನೇತೃತ್ವದ ಕರ್ನಾಟಕ ತಂಡವು ರಣಜಿ ಟ್ರೋಫಿ ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಪುದುಚೆರಿ ವಿರುದ್ದ ಭರ್ಜರಿ ಗೆಲುವು ದಾಖಲಿಸುವ ಮೂಲಕ ನಾಕೌಟ್ ಹಂತಕ್ಕೆ ಅರ್ಹತೆಗಿಟ್ಟಿಸಿಕೊಂಡಿತ್ತು. ಇದೀಗ ರಾಜ್ಯ ತಂಡವು ನಾಕೌಟ್ ಹಂತದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ