ಹೆಚ್ಚಿನ ರಿವರ್ಸ್ ಸ್ವಿಂಗ್ ಇಲ್ಲದ ಕಾರಣ ಈ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿ ಹೆಚ್ಚಾಗಿ ಕಾಡಲಿಲ್ಲ. ಅವರ ಸ್ಥಾನವನ್ನು ಆಕಾಶ್ ದೀಪ್ ಅತ್ಯುತ್ತಮವಾಗಿ ನಿಭಾಯಿಸಿದರೂ, ಸರಣಿಯುದ್ದಕ್ಕೂ ಎಸಗಿದ ತಪ್ಪುಗಳಿಂದ ಪಾಠ ಕಲಿತಂದಿದ್ದ ರೂಟ್ ಭಾರತೀಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು.
ರಾಂಚಿ(ಫೆ.24): ಚೊಚ್ಚಲ ಪಂದ್ಯವಾಡುತ್ತಿರುವ ವೇಗಿ ಆಕಾಶ್ ದೀಪ್‌ರ ಮಿಂಚಿನ ದಾಳಿ ನಡುವೆಯೂ ನಿರ್ಣಾಯಕ ಘಟ್ಟದಲ್ಲಿ ಅಮೋಘ ಶತಕ ಸಿಡಿಸಿದ ಜೋ ರೂಟ್, ಭಾರತ ವಿರುದ್ಧದ 4ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಪಾಲಿನ ಆಪತ್ಬಾಂಧವರಾಗಿ ಮೂಡಿಬಂದಿದ್ದಾರೆ. ಆರಂಭಿಕರ ಅಬ್ಬರದ ನಡುವೆಯೂ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಂಡಕ್ಕೆ ಆಸರೆಯಾದ ರೂಟ್, ಇಂಗ್ಲೆಂಡ್ ಮೊದಲ ದಿನ 7 ವಿಕೆಟ್‌ಗೆ 302 ರನ್ ಕಲೆಹಾಕಲು ನೆರವಾಗಿದ್ದಾರೆ.
ಹೆಚ್ಚಿನ ರಿವರ್ಸ್ ಸ್ವಿಂಗ್ ಇಲ್ಲದ ಕಾರಣ ಈ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿತಿ ಹೆಚ್ಚಾಗಿ ಕಾಡಲಿಲ್ಲ. ಅವರ ಸ್ಥಾನವನ್ನು ಆಕಾಶ್ ದೀಪ್ ಅತ್ಯುತ್ತಮವಾಗಿ ನಿಭಾಯಿಸಿದರೂ, ಸರಣಿಯುದ್ದಕ್ಕೂ ಎಸಗಿದ ತಪ್ಪುಗಳಿಂದ ಪಾಠ ಕಲಿತಂದಿದ್ದ ರೂಟ್ ಭಾರತೀಯ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದರು. ‘ಬಾಜ್‌ಬಾಲ್’ ಆಟಕ್ಕೆ ಜೋತು ಬೀಳದೆ ತನ್ನ ಎಂದಿನ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟ ರೂಟ್, ಸರಣಿಯ ಮೊದಲ 50+ ರನ್ ಸಿಡಿಸಿದರು. ಮೊದಲ 3 ಟೆಸ್ಟ್‌ನ 6 ಇನ್ನಿಂಗ್ಸ್‌ಗಳಲ್ಲಿ ಕೇವಲ 77 ರನ್ ಕಲೆಹಾಕಿದ್ದ ಅವರು, ಈ ಬಾರಿ ಅನಗತ್ಯ ಹೊಡೆತಗಳಿಗೆ ಕೈ ಹಾಕಲಿಲ್ಲ. 115 ಎಸೆತಗಳ ವರೆಗೂ ರಿವರ್ಸ್ ಸ್ವೀಪ್ ಶಾಟ್ ಮೊರೆ ಹೋಗದೆ ರಕ್ಷಣಾತ್ಮಕ ಆಟದತ್ತ ಗಮನ ಹರಿಸಿದ್ದು ರೂಟ್‌ಗೆ ವರದಾನವಾಯಿತು.
undefined
ಆರಂಭಿಕ ಆಘಾತ: 4ನೇ ಓವರಲ್ಲೇ ಆಕಾಶ್‌ರ ಎಸೆತದಲ್ಲಿ ಜ್ಯಾಕ್ ಕ್ರಾವ್ಲಿ ಕ್ಲೀನ್ ಬೌಲ್ಡ್ ಆದರೂ ಅದು ನೋಬಾಲ್ ಆಗಿತ್ತು. ಆದರೆ ಆರಂಭಿಕರನ್ನು ಪೆವಿಲಿಯನ್‌ಗೆ ಅಟ್ಟಲು ಆಕಾಶ್‌ಗೆ ಹೆಚ್ಚು ಸಮಯ ಬೇಕಾಗಲಿಲ್ಲ. 10ನೇ ಓವರಲ್ಲಿ ಬೆನ್ ಡಕೆಟ್(11), ಓಲಿ ಪೋಪ್(00) ವಿಕೆಟ್ ಕಿತ್ತ ಆಕಾಶ್, ಅಪಾಯಕಾರಿ ಜ್ಯಾಕ್ ಕ್ರಾವ್ಲಿ(42 ಎಸೆತದಲ್ಲಿ 42)ಗೆ ತಮ್ಮ ಮುಂದಿನ ಓವರಲ್ಲಿ ಪೆವಿಲಿಯನ್ ಹಾದಿ ತೋರಿಸಿದರು.
ಬಳಿಕ ಜಾನಿ ಬೇರ್‌ಸ್ಟೋವ್ ಅಲ್ಪ ಮಟ್ಟಿಗೆ ಹೋರಾಟ ನಡೆಸಿದರೂ ಅವರ ಇನ್ನಿಂಗ್ಸ್ 38 ರನ್‌ಗೆ ಕೊನೆಗೊಂಡಿತು. ನಾಯಕ ಬೆನ್ ಸ್ಟೋಕ್ಸ್ ಕೊಡುಗೆ 3 ರನ್ ಮಾತ್ರ. ಸ್ಟೋಕ್ಸ್ ಔಟಾದಾಗ ತಂಡದ ಮೊತ್ತ 5 ವಿಕೆಟ್‌ಗೆ 112 ರನ್.
ರೂಟ್-ಫೋಕ್ಸ್ ಹೋರಾಟ: ನಿರ್ಣಾಯಕ ಘಟ್ಟದಲ್ಲಿ ಜೊತೆಯಾದ ರೂಟ್-ಫೋಕ್ಸ್ ಭಾರತೀಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಈ ಜೋಡಿ 6ನೇ ವಿಕೆಟ್‌ಗೆ 113 ರನ್ ಸೇರಿಸಿತು. ಒಂದಿಡೀ ಅವಧಿಯನ್ನು ವಿಕೆಟ್ ನಷ್ಟವಿಲ್ಲದೆ ಆಡಿದ ಇಂಗ್ಲೆಂಡ್‌ಗೆ ಸಿರಾಜ್ ಆಘಾತ ನೀಡಿದರು. 47 ರನ್ ಗಳಿಸಿದ್ದಾಗ ಫೋಕ್ಸ್ ವಿಕೆಟ್ ಕಿತ್ತು ಭಾರತೀಯರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿಸಿದರು.
ಟೆಸ್ಟ್‌ನಲ್ಲಿ 31ನೇ ಶತಕ ಪೂರ್ಣಗೊಳಿಸಿದ ರೂಟ್ 226 ಎಸೆತಗಳಲ್ಲಿ 106 ರನ್ ಸಿಡಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅವರು ಓಲಿ ರಾಬಿನ್ಸನ್(31) ಜೊತೆಗೂಡಿ ಮುರಿಯದ 8ನೇ ವಿಕೆಟ್‌ಗೆ 57 ರನ್ ಸೇರಿಸಿದ್ದಾರೆ. ಆಕಾಶ್ 3, ಸಿರಾಜ್ 3, ಜಡೇಜಾ, ಅಶ್ವಿನ್ ತಲಾ 1 ವಿಕೆಟ್ ಕಬಳಿಸಿದರು.
ಸ್ಕೋರ್: ಇಂಗ್ಲೆಂಡ್ 302/7(ಮೊದಲ ದಿನದಂತ್ಯಕ್ಕೆ)
(ರೂಟ್ 106*, ಫೋಕ್ಸ್ 47, ಕ್ರಾವ್ಲಿ 42, ಆಕಾಶ್ ದೀಪ್ 3-70, ಸಿರಾಜ್ 2-60)
ಭಾರತ ವಿರುದ್ಧ 10ನೇ ಶತಕ: ರೂಟ್ ದಾಖಲೆ
ಭಾರತ ವಿರುದ್ಧ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆಯನ್ನು ರೂಟ್ ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅವರು 10ನೇ ಶತಕ ಬಾರಿಸಿದ್ದು, 9 ಶತಕ ಸಿಡಿಸಿರುವ ಸ್ಟೀವ್ ಸ್ಮಿತ್‌ರನ್ನು ಹಿಂದಿಕ್ಕಿದ್ದಾರೆ. ಗ್ಯಾರಿ ರೋಬರ್ಸ್, ರಿಚರ್ಡ್ಸ್, ರಿಕಿ ಪಾಂಟಿಂಗ್ ತಲಾ 8 ಶತಕ ಬಾರಿಸಿದ್ದಾರೆ.
01ನೇ ಬಾರಿ: ಮೊದಲ ದಿನದ 2ನೇ ಅವಧಿಯಲ್ಲಿ ಇಂಗ್ಲೆಂಡ್‌ನ ಯಾವುದೇ ವಿಕೆಟ್ ಬೀಳಲಿಲ್ಲ. ಸರಣಿಯಲ್ಲಿ ಇದೇ ಮೊದಲ ಬಾರಿ ಇಂಗ್ಲೆಂಡ್ ಅವಧಿಯೊಂದನ್ನು ವಿಕೆಟ್ ನಷ್ಟವಿಲ್ಲದೆ ಪೂರ್ಣಗೊಳಿಸಿತು.