
ಜೈಪುರ(ಫೆ.06): ವಿಶ್ವದ 3ನೇ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಜೈಪುರದಲ್ಲಿ (Jaipur) ನಿರ್ಮಾಣವಾಗಲಿದೆ. ಕ್ರೀಡಾಂಗಣಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ (Ashok Gehlot) ಹಾಗೂ ಬಿಸಿಸಿಐ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಶನಿವಾರ ವರ್ಚುವಲ್ ಆಗಿ ಶಿಲಾನ್ಯಾಸ ನೆರವೇರಿಸಿದರು. ಇದೇ ವೇಳೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್, ಆದ್ಯತೆಯ ಮೇರೆಗೆ ಜೈಪುರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವಂತೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಶಾ (Jay Shah) ಬಳಿ ಮನವಿ ಮಾಡಿಕೊಂಡಿದ್ದಾರೆ.
ರಾಜಸ್ಥಾನವೂ ತನ್ನದೇ ಆದ ಕ್ರಿಕೆಟ್ ಪರಂಪರೆಯನ್ನು ಹೊಂದಿದೆ. ಸ್ವಾತಂತ್ರ್ಯ ಪೂರ್ವದಲ್ಲೇ ಅಂದರೆ,1931ರಲ್ಲೇ ರಾಜಪುತಾನ ಕ್ರಿಕೆಟ್ ಸಂಸ್ಥೆ ಸ್ಥಾಪನೆಯಾಗಿತ್ತು. ಈಗ ರಾಜ್ಯದ 31 ಜಿಲ್ಲೆಗಳಲ್ಲಿ ಕ್ರಿಕೆಟ್ ಸಂಸ್ಥೆಗಳಿವೆ. ನಮ್ಮ ರಾಜ್ಯದ ಕ್ರಿಕೆಟ್ ಪ್ರೇಮಿಗಳನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳನ್ನು ಜೈಪುರದಲ್ಲಿ ಆಯೋಜಿಸಿ ಎಂದು ಅಶೋಕ್ ಗೆಹಲೋತ್ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಮುಂಬರುವ ದಿನಗಳಲ್ಲಿ ರಾಜಸ್ಥಾನದಲ್ಲಿ ನಾಲ್ಕು ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಮೈದಾನವನ್ನು ನಿರ್ಮಿಸಲಿದ್ದೇವೆ ಎಂದು ಅಶೋಕ್ ಗೆಹಲೋತ್ ತಿಳಿಸಿದ್ದಾರೆ. ಈಗಾಗಲೇ ರಾಜಸ್ಥಾನದ ಜೈಪುರದಲ್ಲಿ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂ ಹಾಗೂ ಜೋಧ್‌ಪುರದ ಬರ್ಖತುಲ್ ಖಾನ್ ಸ್ಟೇಡಿಯಂ ಹೀಗೆ ಎರಡು ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗಳಿವೆ. ಮುಂಬರುವ ದಿನಗಳಲ್ಲಿ ಉದಯ್‌ಪುರ ಹಾಗೂ ಜೈಪುರದಲ್ಲಿ ತಲಾ ಒಂದೊಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವನ್ನು ನಿರ್ಮಿಸಲಿದ್ದೇವೆ ಎಂದು ರಾಜಸ್ಥಾನ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
‘ಇದು ಭಾರತದ 2ನೇ ಹಾಗೂ ವಿಶ್ವದ ಮೂರನೇ ಅತೀ ದೊಡ್ಡ ಕ್ರೀಡಾಂಗಣವಾಗಲಿದೆ. ಸುಮಾರು 75,000 ಪ್ರೇಕ್ಷಕರಿಗೆ ಏಕಕಾಲದಲ್ಲಿ ಪಂದ್ಯ ವೀಕ್ಷಿಸುವ ಸೌಲಭ್ಯವಿರಲಿದ್ದು, 3 ವರ್ಷದಲ್ಲಿ ಕಾಮಗಾರಿ ಪೂರ್ತಿಗೊಳ್ಳಲಿದೆ ಎಂದು ರಾಜಸ್ತಾನ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ವೈಭವ್ ಗೆಹಲೋತ್ ಮಾಹಿತಿ ನೀಡಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ (Narendra Modi Stadium) ವಿಶ್ವದ ಅತೀ ದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದ್ದು, ಆಸ್ಪ್ರೇಲಿಯಾದ ಮೆಲ್ಬರ್ನ್ ಕ್ರೀಡಾಂಗಣ 2ನೇ ಸ್ಥಾನದಲ್ಲಿದೆ.
ಅಂಡರ್ 19 ವಿಶ್ವಕಪ್: 3ನೇ ಸ್ಥಾನ ಪಡೆದ ಆಸ್ಪ್ರೇಲಿಯಾ
ಆ್ಯಂಟಿಗಾ: 3 ಬಾರಿಯ ಚಾಂಪಿಯನ್ ಆಸ್ಪ್ರೇಲಿಯಾ 14ನೇ ಆವೃತ್ತಿಯ ಅಂಡರ್-19 ವಿಶ್ವಕಪ್‌ನಲ್ಲಿ (ICC U-19 World Cup) 3ನೇ ಸ್ಥಾನ ಪಡೆದುಕೊಂಡಿದೆ. ಶುಕ್ರವಾರ ಅಷ್ಘಾನಿಸ್ತಾನ ವಿರುದ್ಧ 3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಆಸೀಸ್, 2 ವಿಕೆಟ್ ರೋಚಕ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿ ಆಫ್ಘನ್, 49.2 ಓವರ್‌ಗಳಲ್ಲಿ 201 ರನ್‌ಗೆ ಆಲೌಟಾಯಿತು.
ICC U-19 World Cup: ಭಾರತಕ್ಕೆ 5ನೇ ಸಲ ಕಿರಿಯರ ವಿಶ್ವಕಪ್ ಕಿರೀಟ..!
ಇಜಾಜ್ ಅಹಮದ್(81) ಏಕಾಂಗಿ ಹೋರಾಟ ನಡೆಸಿದರು. ನಿವೇಥನ್ ರಾಧಾಕೃಷ್ಣನ್, ವಿಲಿಯಂ ತಲಾ 3 ವಿಕೆಟ್ ಕಿತ್ತರು. ಗುರಿ ಬೆನ್ನತ್ತಿದ ಆಸೀಸ್, 49.1 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಬ್ಯಾಟಿಂಗ್‌ನಲ್ಲೂ ಮಿಂಚಿದ ನಿವೇಥನ್ 66 ರನ್ ಸಿಡಿಸಿದರು.
ಮೈದಾನದಲ್ಲೇ ಸಿಗರೇಟು ಸೇದಿದ ಆಫ್ಘನ್‌ನ ಶೆಹಜಾದ್
ಢಾಕಾ: ಆಫ್ಘಾನಿಸ್ತಾನ ಬ್ಯಾಟರ್ ಮೊಹಮದ್ ಶೆಹಜಾದ್ ಮೈದಾನದಲ್ಲೇ ಸಿಗರೇಟು ಸೇದುವ ಮೂಲಕ ಸುದ್ದಿಯಾಗಿದ್ದು, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಛೀಮಾರಿ ಹಾಕಿದೆ. ಬಾಂಗ್ಲಾ ಪ್ರೀಮಿಯರ್ ಲೀಗ್ ವೇಳೆ ಈ ಘಟನೆ ನಡೆಇದ್ದು, ಸಿಗರೇಟು ಸೇದುತ್ತಿರುವ ಕೆಲ ಫೋಟೋಗಳು ಸಾಮಾಜಿಕ ತಾಣದಲ್ಲಿ ವ್ಯಾಪಕ ವೈರಲ್ ಆಗಿವೆ. ಅಶಿಸ್ತಿನಿಂದ ನಡೆದಿದ್ದಕ್ಕೆ ಶೆಹಜಾದ್‌ಗೆ ಒಂದು ಡಿಮೆರಿಟ್ ಅಂಕ ನೀಡಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.