
ಬೆಂಗಳೂರು: ಭಾರತದ ಕ್ರಿಕೆಟ್ ದಂತಕತೆ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್, ಇದೀಗ ವಿನೂ ಮಂಕಡ್ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಕರ್ನಾಟಕ ತಂಡವನ್ನು ನಾಕೌಟ್ ಹಂತಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಡರ್-19 ರಾಷ್ಟ್ರೀಯ ಕ್ರಿಕೆಟ್ ಟೂರ್ನಿಯಲ್ಲಿ ಗುಜರಾತ್ ನೀಡಿದ್ದ ಬರೋಬ್ಬರಿ 358 ರನ್ಗಳ ಕಠಿಣ ಗುರಿ ಬೆನ್ನತ್ತುವಲ್ಲಿ ಕರ್ನಾಟಕ ತಂಡವು ಯಶಸ್ವಿಯಾಗಿದ್ದು, ನಾಯಕ ಅನ್ವಯ್ ದ್ರಾವಿಡ್ ಆಕರ್ಷಕ ಶತಕ ಸಿಡಿಸಿ ತಂಡವನ್ನು ನಾಕೌಟ್ ಹಂತಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
17 ವರ್ಷದ ಅನ್ವಯ್ ದ್ರಾವಿಡ್, 16 ಆಟಗಾರರನ್ನೊಳಗೊಂಡ ಕರ್ನಾಟಕ ತಂಡವನ್ನು ವಿನೂ ಮಂಕಡ್ ಟೂರ್ನಿಯಲ್ಲಿ ನಾಯಕರಾಗಿ ಮುನ್ನಡೆಸುತ್ತಿದ್ದಾರೆ. ವಿಶಾಖಪಟ್ಟಣಂನಲ್ಲಿ ಅಕ್ಟೋಬರ್ 08ರಿಂದ ಆರಂಭವಾಗಿರುವ ಈ ಟೂರ್ನಿಯಲ್ಲಿ, ಅನ್ವಯ್ ದ್ರಾವಿಡ್ ಯಶಸ್ವಿಯಾಗಿ ಕರ್ನಾಟಕ ತಂಡವನ್ನು ಲೀಡ್ ಮಾಡುತ್ತಿದ್ದಾರೆ. ಕಳೆದ ನವೆಂಬರ್ನಲ್ಲಿ ಶ್ರೀಲಂಕಾದಲ್ಲಿ ನಡೆದ ತ್ರಿಪಕ್ಷೀಯ ಸರಣಿಯಲ್ಲಿ ಆಫ್ಘಾನಿಸ್ತಾನ ಎದುರು ಅನ್ವಯ್ ದ್ರಾವಿಡ್ ಭಾರತ ಅಂಡರ್-19 ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಇದಾಗಿ 10 ತಿಂಗಳ ಬಳಿಕ ಅನ್ವಯ್ ದ್ರಾವಿಡ್ ಕರ್ನಾಟಕ ಅಂಡರ್-19 ತಂಡದ ನಾಯಕರಾಗಿ ನೇಮಕವಾಗಿದ್ದಾರೆ.
ಈ ಮೊದಲು ಕಳೆದ ಪಂದ್ಯದಲ್ಲಿ ಡೆಲ್ಲಿ ಎದುರು ಅನ್ವಯ್ ದ್ರಾವಿಡ್ ಕೇವಲ 41 ಎಸೆತಗಳಲ್ಲಿ ಅಜೇಯ 85 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಗುಜರಾತ್ ಎದುರು ಅನ್ವಯ್ ದ್ರಾವಿಡ್ ಆಕರ್ಷಕ ಶತಕ ಸಿಡಿಸುವ ಮೂಲಕ ತಂದೆಯಂತೆಯೇ ರಾಜ್ಯ ತಂಡಕ್ಕೆ ಆಸರೆಯಾದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಗುಜರಾತ್ ತಂಡವು 19 ರನ್ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆದರೆ ಶೌರ್ಯ ಪಂಚೊಲಿ ಹಾಗೂ ವೇದ್ ಪಟೇಲ್ ಎರಡನೇ ವಿಕೆಟ್ಗೆ 66 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಒಂದು ಹಂತದಲ್ಲಿ 100 ರನ್ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಗುಜರಾತ್ ತಂಡಕ್ಕೆ ಐದನೇ ವಿಕೆಟ್ಗೆ ಯಶ್ ಪಂಜವಾನಿ ಹಾಗೂ ಸಮೀರ್ 217 ರನ್ಗಳ ಆಕರ್ಷಕ ಜತೆಯಾಟವಾಡುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಸಮೀರ್ ಭಂಡಾರಿ 119, ಯಶ್ ಪುಂಜ್ವಾನಿ 106 ರನ್ ಸಿಡಿಸಿದರು. ಅಂತಿಮವಾಗಿ ಗುಜರಾತ್ ತಂಡವು 50 ಓವರ್ಗಳಲ್ಲಿ 357 ರನ್ಗಳ ದೊಡ್ಡ ಮೊತ್ತ ಕಲೆಹಾಕಿತು.
ಇನ್ನು ಕಠಿಣ ಗುರಿ ಬೆನ್ನತ್ತಿದ ಕರ್ನಾಟಕ ತಂಡವು 33 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ ಮೂರನೇ ವಿಕೆಟ್ಗೆ ಧೃವ್ ಕೃಷ್ಣನ್ ಹಾಗೂ ಅನ್ವಯ್ ದ್ರಾವಿಡ್ 204 ರನ್ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ಗುಜರಾತ್ ಬೌಲರ್ಗಳನ್ನು ದಿಟ್ಟವಾಗಿ ಎದುರಿಸಿದ ಅನ್ವಯ್ ದ್ರಾವಿಡ್, ಕೇವಲ 100 ಎಸೆತಗಳನ್ನು ಎದುರಿಸಿ 23 ಬೌಂಡರಿ ಸಹಿತ ಅಮೋಘ 151 ರನ್ ಸಿಡಿಸುವ ಮೂಲಕ ಕರ್ನಾಟಕ ತಂಡವು ಗೆಲುವಿನ ನಗೆ ಬೀರುವಂತೆ ಮಾಡುವಲ್ಲಿ ಯಶಸ್ವಿಯಾದರು. ಕರ್ನಾಟಕ ತಂಡದ ಪರ ಅನ್ವಯ್ 100 ಎಸೆತಕ್ಕೆ 151, ಧ್ರುವ್ 100 ಎಸೆತಕ್ಕೆ 131 ರನ್ ಸಿಡಿಸಿದರು.
ಇನ್ನು ಇದಕ್ಕೂ ಮೊದಲು ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಕೂಡಾ ಡೆಲ್ಲಿ ಪರ ಚಂಢಿಗಢ ವಿರುದ್ದ ಸ್ಪೋಟಕ ಶತಕ ಸಿಡಿಸಿ ಮಿಂಚಿದ್ದರು. ಒಟ್ಟಿನಲ್ಲಿ ಸೆಹ್ವಾಗ್ ಪುತ್ರ ಆರ್ಯವೀರ್ ಹಾಗೂ ದ್ರಾವಿಡ್ ಪುತ್ರ ಅನ್ವಯ್ ಕಿರಿಯರ ತಂಡದಲ್ಲಿ ಮಿಂಚುತ್ತಿದ್ದು, ಸದ್ಯದಲ್ಲೇ ಟೀಂ ಇಂಡಿಯಾಗೆ ಎಂಟ್ರಿಕೊಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.