ಗವಾಸ್ಕರ್, ಸೆಹ್ವಾಗ್ ಕೈಬಿಟ್ಟು ಭಾರತದ ಸಾರ್ವಕಾಲಿಕ ಟಾಪ್-3 ಟೆಸ್ಟ್‌ ಬ್ಯಾಟರ್ ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್! ಲಿಸ್ಟ್‌ನಲ್ಲಿವೆ ಅಚ್ಚರಿ ಹೆಸರು

Published : Aug 17, 2026, 11:25 AM IST
R Ashwin

ಸಾರಾಂಶ

ಟೀಂ ಇಂಡಿಯಾದ ಸ್ಪಿನ್ನರ್ ಆರ್. ಅಶ್ವಿನ್, ಭಾರತದ ಸಾರ್ವಕಾಲಿಕ ಶ್ರೇಷ್ಠ ಮೂವರು ಟೆಸ್ಟ್ ಬ್ಯಾಟರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಅಚ್ಚರಿಯೆಂದರೆ, ಅವರ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್ ಮತ್ತು ವಿರೇಂದ್ರ ಸೆಹ್ವಾಗ್‌ಗೆ ಸ್ಥಾನ ಸಿಕ್ಕಿಲ್ಲ. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಅಶ್ವಿನ್ ಆಯ್ಕೆಯ ಶ್ರೇಷ್ಠ ಆಟಗಾರರಾಗಿದ್ದಾರೆ.

ಚೆನ್ನೈ: ಸುನಿಲ್ ಗವಾಸ್ಕರ್‌ನಿಂದ ಹಿಡಿದು ವಿರೇಂದ್ರ ಸೆಹ್ವಾಗ್‌ವರೆಗೆ, ತಮ್ಮ ವಿಶಿಷ್ಟ ಬ್ಯಾಟಿಂಗ್ ಶೈಲಿಯಿಂದ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಅದ್ಭುತ ಕೊಡುಗೆ ನೀಡಿದ ಬ್ಯಾಟರ್‌ಗಳ ದೊಡ್ಡ ಪಟ್ಟಿಯೇ ಇದೆ. ಇವರಲ್ಲಿ ಸಾರ್ವಕಾಲಿಕ ಶ್ರೇಷ್ಠ ಮೂವರನ್ನು ಆಯ್ಕೆ ಮಾಡುವುದು ನಿಜಕ್ಕೂ ಕಷ್ಟದ ಕೆಲಸ. ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಈ ಸವಾಲನ್ನು ಸ್ವೀಕರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ, ಅಶ್ವಿನ್ ಮೊದಲು ಟಾಪ್ 5 ಆಟಗಾರರನ್ನು ಆಯ್ಕೆ ಮಾಡಿ, ನಂತರ ಅದನ್ನು ಮೂರಕ್ಕೆ ಇಳಿಸಿದ್ದಾರೆ.

ಟಾಪ್-3 ಪಟ್ಟಿಯಲ್ಲಿ ಗವಾಸ್ಕರ್‌ಗಿಲ್ಲ ಸ್ಥಾನ

ಆದರೆ, ಅಚ್ಚರಿಯ ವಿಷಯವೆಂದರೆ ಅಶ್ವಿನ್ ಅವರ ಟಾಪ್-3 ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್‌ಗೆ ಜಾಗ ಸಿಕ್ಕಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನಂಬರ್ 1 ಬ್ಯಾಟರ್ ಎಂದು ಅನೇಕ ಅಭಿಮಾನಿಗಳು ಪರಿಗಣಿಸುವ ಸುನಿಲ್ ಗವಾಸ್ಕರ್ ಅವರನ್ನು ಕೈಬಿಟ್ಟಿರುವುದು ಸೋಶಿಯಲ್ ಮೀಡಿಯಾದಲ್ಲಿ ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ತನ್ನ ಈ ಆಯ್ಕೆಯನ್ನು ಕೆಲವರು ಒಪ್ಪಿಕೊಳ್ಳುವುದು ಕಷ್ಟ ಎಂದು ಅಶ್ವಿನ್ ಕೂಡ ಹೇಳಿಕೊಂಡಿದ್ದಾರೆ. ಅಂದಹಾಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 10,000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಗವಾಸ್ಕರ್ ಅವರದ್ದು.

ಗವಾಸ್ಕರ್ ತಮ್ಮ ವೃತ್ತಿಜೀವನದಲ್ಲಿ 125 ಟೆಸ್ಟ್ ಪಂದ್ಯಗಳನ್ನಾಡಿದ್ದು, 51.12ರ ಸರಾಸರಿಯಲ್ಲಿ 10,122 ರನ್ ಗಳಿಸಿದ್ದಾರೆ. ಇದರಲ್ಲಿ 34 ಶತಕ ಮತ್ತು 45 ಅರ್ಧಶತಕಗಳು ಸೇರಿವೆ. ಅಂದಿನ ಬಲಿಷ್ಠ ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯ ವಿರುದ್ಧವೇ 13 ಶತಕಗಳನ್ನು ಬಾರಿಸಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಸುಮಾರು ಎರಡು ದಶಕಗಳ ಕಾಲ ಟೆಸ್ಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ವಿಶ್ವದಾಖಲೆ ಅವರ ಹೆಸರಲ್ಲಿತ್ತು. 236 ರನ್ ಅವರ ಗರಿಷ್ಠ ಸ್ಕೋರ್ ಆಗಿದೆ. ಇಷ್ಟೆಲ್ಲಾ ಸಾಧನೆಗಳಿದ್ದರೂ ಅಶ್ವಿನ್ ಟಾಪ್-3 ಪಟ್ಟಿಯಲ್ಲಿ ಗವಾಸ್ಕರ್‌ಗೆ ಸ್ಥಾನ ಸಿಕ್ಕಿಲ್ಲ.

ವಿರೇಂದ್ರ ಸೆಹ್ವಾಗ್‌ಗೂ ಇಲ್ಲ ಸ್ಥಾನ:

ಸ್ಪೋಟಕ ಆರಂಭಿಕ ಬ್ಯಾಟರ್ ಆಗಿ ಎದುರಾಳಿ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಓಪನ್ನರ್ ಎಂದರೆ ಅದು ನಿಸ್ಸಂಶಯವಾಗಿ ವಿರೇಂದ್ರ ಸೆಹ್ವಾಗ್. ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಎರಡು ತ್ರಿಶತಕ ಸಿಡಿಸಿದ ಭಾರತದ ಏಕೈಕ ಬ್ಯಾಟರ್ ಎನ್ನುವ ಹೆಗ್ಗಳಿಕೆ ವಿರೇಂದ್ರ ಸೆಹ್ವಾಗ್ ಅವರದ್ದು. ಎದುರಾಳಿ ಯಾರೇ ಇದ್ದರೂ ಮೈಚಳಿ ಬಿಟ್ಟು ಬ್ಯಾಟ್ ಬೀಸುತ್ತಿದ್ದ ವಿರೇಂದ್ರ ಸೆಹ್ವಾಗ್ ಅವರನ್ನು ಭಾರತದ ಟಾಪ್-3 ಪಟ್ಟಿಯಿಂದ ರವಿಚಂದ್ರನ್ ಅಶ್ವಿನ್ ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

ಅಶ್ವಿನ್ ಆಯ್ಕೆ ಮಾಡಿದ ಭಾರತದ ಸಾರ್ವಕಾಲಿಕ ಶ್ರೇಷ್ಠ ಟಾಪ್-3 ಆಟಗಾರರಿವರು:

ಟೆಸ್ಟ್ ಮಾದರಿಯಲ್ಲಿ ಹಲವಾರು ದಾಖಲೆಗಳನ್ನು ತನ್ನ ಹೆಸರಿಗೆ ಬರೆದಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಅಶ್ವಿನ್ ಪಟ್ಟಿಯಲ್ಲಿರುವ ಮೊದಲ ಆಟಗಾರ. ಸಚಿನ್ ತಮ್ಮ 200ಕ್ಕೂ ಹೆಚ್ಚು ಟೆಸ್ಟ್‌ಗಳ ವೃತ್ತಿಜೀವನದಲ್ಲಿ 53.78ರ ಸರಾಸರಿಯಲ್ಲಿ 15,921 ರನ್ ಕಲೆಹಾಕಿದ್ದಾರೆ. ಇದರಲ್ಲಿ 51 ಶತಕಗಳು ಮತ್ತು 68 ಅರ್ಧಶತಕಗಳು ಸೇರಿವೆ.

ರಾಹುಲ್ ದ್ರಾವಿಡ್ ಕೂಡ ಅಶ್ವಿನ್ ಅವರ ಟಾಪ್-3 ಪಟ್ಟಿಯಲ್ಲಿದ್ದಾರೆ. ದ್ರಾವಿಡ್ 164 ಟೆಸ್ಟ್‌ಗಳಿಂದ 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು (31,258) ಎದುರಿಸಿದ ಮತ್ತು ಕ್ರೀಸ್‌ನಲ್ಲಿ ಅತಿ ಹೆಚ್ಚು ಸಮಯ (44,152 ನಿಮಿಷ) ಕಳೆದ ವಿಶ್ವದಾಖಲೆ ಅವರ ಹೆಸರಿನಲ್ಲಿದೆ. ಸವಾಲಿನ ಪರಿಸ್ಥಿತಿಗಳಲ್ಲಿ ವಿದೇಶಿ ಪಿಚ್‌ಗಳಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಅವರು 36 ಶತಕಗಳನ್ನು ಸಿಡಿಸಿದ್ದಾರೆ.

ಇನ್ನು ಭಾರತದ ರನ್ ಮಷೀನ್ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿರುವ ಮೂರನೇ ಆಟಗಾರ. ವಿರಾಟ್ ಕೊಹ್ಲಿ ಒಟ್ಟು 123 ಟೆಸ್ಟ್‌ಗಳಿಂದ 46.85ರ ಸರಾಸರಿಯಲ್ಲಿ 9,230 ರನ್ ಗಳಿಸಿದ್ದಾರೆ. ಕಳೆದ ವರ್ಷವಷ್ಟೇ ಅಚ್ಚರಿಯ ರೀತಿಯಲ್ಲಿ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಇನ್ನು ನಾಯಕನಾಗಿ ಭಾರತದ ಪರವಾಗಿ ಅತಿಹೆಚ್ಚು ಟೆಸ್ಟ್ ಪಂದ್ಯಗಳನ್ನು ಜಯಿಸಿದ ಹೆಗ್ಗಳಿಕೆ ವಿರಾಟ್‌ಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ, ಪಾಕಿಸ್ತಾನ ದಾಖಲೆ ಮುರಿದು ವಿಶ್ವ ಕ್ರಿಕೆಟ್‌ಗೆ ನಡುಕ ಹುಟ್ಟಿಸಿದ ಬಾಂಗ್ಲಾದೇಶ!
ಬೆಂಚ್‌ನಲ್ಲಿ ಕೂತು ಬೇರೆಯವರ ಆಟ ನೋಡೋದು ಸುಲಭ ಅಲ್ಲ -ಒಂದೂವರೆ ವರ್ಷದ ತಪ್ಪಸ್ಸಿಗೆ ಪಡಿಕ್ಕಲ್ ಭಾವುಕ