3ನೇ ಟೆಸ್ಟ್‌: ಇಂಗ್ಲೆಂಡ್‌ಗೆ ಪೋಪ್, ಬಟ್ಲರ್ ಅರ್ಧಶತಕದ ಆಸರೆ

By Suvarna NewsFirst Published Jul 25, 2020, 9:08 AM IST
Highlights

ಇಂಗ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಕನವರಿಕೆಯಲ್ಲಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಓಲಿ ಪೋಪ್ ಹಾಗೂ ಜೋಸ್ ಬಟ್ಲರ್ ಅಜೇಯ ಶತತಕದ ಜತೆಯಾಟವಾಡುವ ಮೂಲಕ ಆಘಾತ ನೀಡಿದ್ದಾರೆ. ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಪ್ರದರ್ಶನ ಹೇಗಿತ್ತು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

ಮ್ಯಾಂಚೆಸ್ಟರ್(ಜು.25)‌: ವೆಸ್ಟ್‌ ಇಂಡೀಸ್‌ ವಿರುದ್ಧ ಶುಕ್ರವಾರ ಇಲ್ಲಿ ಆರಂಭಗೊಂಡ 3ನೇ ಹಾಗೂ ನಿರ್ಣಾಯಕ ಟೆಸ್ಟ್‌ನ ಮೊದಲ ಇನ್ನಿಂಗ್ಸಲ್ಲಿ ಇಂಗ್ಲೆಂಡ್‌ಗೆ ಆರಂಭಿಕ ಬ್ಯಾಟ್ಸ್‌ಮನ್‌ ರೋರಿ ಬರ್ನ್ಸ್ ಹಾಗೂ ಓಲಿ ಪೋಪ್ ಹಾಗೂ ಜೋಸ್ ಅಜೇಯ ಅರ್ಧಶತಕ ಬಾರಿಸಿ ಆಸರೆಯಾದರು. ಮೊದಲ ದಿನಾದಾಟದಂತ್ಯಕ್ಕೆ ಇಂಗ್ಲೆಂಡ್ ತಂಡ 4 ವಿಕೆಟ್ ಕಳೆದುಕೊಂಡು 258 ರನ್ ಬಾರಿಸಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ಆರಂಭದಲ್ಲೇ ಆಘಾತ ಅನುಭವಿಸಿತು. ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದ ಡೋಮಿನಿಕ್ ಸಿಬ್ಲಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಕೀಮರ್ ರೋಚ್ ವಿಂಡೀಸ್ ಪಾಳಯಕ್ಕೆ ಮೊದಲ ಯಶಸ್ಸು ದಕ್ಕಿಸಿಕೊಟ್ಟರು. ಬಳಿಕ ನಾತಕ ಜೋ ರೋಟ್ ಜತೆ ಬರ್ನ್ಸ್ ಎಚ್ಚರಿಕೆಯ ಅಟಕ್ಕೆ ಮೊರೆ ಹೋದರು. 17 ರನ್ ಬಾರಿಸಿದ್ದ ನಾಯಕ ರೂಟ್ ರೋಸ್ಟನ್ ಚೇಸ್ ಚುರುಕಿನ ಕ್ಷೇತ್ರ ರಕ್ಷಣೆಯಿಂದ ರನೌಟ್ ಆಗಿ ಪೆವಿಲಿಯನ್ ಸೇರಿದರು. ಇನ್ನು ಆಲ್ರೌಂಡರ್ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಕೇವಲ 20 ರನ್‌ಗಳಿಗೆ ಸೀಮಿತವಾಯಿತು.

ಇಂಗ್ಲೆಂಡ್‌ಗೆ ಆಸರೆಯಾದ ಮೂವರ ಅರ್ಧಶತಕ: ಇಂಗ್ಲೆಂಡ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ರೋರಿ ಬರ್ನ್ಸ್ ಯಶಸ್ವಿಯಾದರು. ನೆಲಕಚ್ಚಿ ಆಡಿದ ಬರ್ನ್ಸ್ 147 ಎಸೆತಗಳನ್ನು ಎದುರಿಸಿ 4 ಬೌಂಡರಿ ಸಹಿತ 57 ರನ್ ಗಳಿಸಿ ರೋಸ್ಟನ್‌ ಚೇಸ್‌ಗೆ ವಿಕೆಟ್ ಒಪ್ಪಿಸಿದರು. ಈ ವೇಳೆ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡು ಕೇವಲ 122 ರನ್ ಬಾರಿಸಿತ್ತು. 

ನಿರ್ಣಾಯಕ ಟೆಸ್ಟ್‌ನಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ಕೆ

ಪೋಪ್ ಜತೆ ಬಟ್ಲರ್ ಜುಗಲ್‌ಬಂದಿ: ಈ ವೇಳೆ ಇಂಗ್ಲೆಂಡ್ ಪಡೆಯನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಕೆರಿಬಿಯನ್ನರ್ ಕನಸಿಗೆ ಓಲಿ ಪೋಪ್ ಹಾಗೂ ಜೋಸ್ ಬಟ್ಲರ್ ತಣೀರೆರಚಿದ್ದಾರೆ. ಐದನೇ ವಿಕೆಟ್‌ಗೆ ಈ ಜೋಡಿ ಅಜೇಯ 136 ರನ್‌ಗಳ ಜತೆಯಾಟ ನಿಭಾಯಿಸಿದೆ. ಪೋಪ್ 142 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ 91 ರನ್ ಬಾರಿಸಿದರೆ, ಬಟ್ಲರ್ 120 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 56 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಜೋಸ್ ಬಟ್ಲರ್ ಕೊನೆಗೂ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂಗ್ಲೆಂಡ್ ವಿಕೆಟ್ ಕೀಪರ್ ಕಳೆದ 15 ಇನಿಂಗ್ಸ್‌ ಬಳಿಕ ಮೊದಲ ಬಾರಿಗೆ ಅರ್ಧಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಂಡೀಸ್‌ ಪರ ವೇಗಿ ಕೀಮರ್‌ ರೋಚ್‌ 2, ರೋಸ್ಟನ್‌ ಚೇಸ್‌ 1 ವಿಕೆಟ್‌ ಪಡೆದಿದ್ದಾರೆ.

ಸ್ಕೋರ್‌: ಇಂಗ್ಲೆಂಡ್‌: 258/4
ಓಲಿ ಪೋಪ್: 91
ಕೀಮರ್ ರೋಚ್: 56/2 
(ಮೊದಲ ದಿನದಾಟದಂತ್ಯಕ್ಕೆ)

click me!