ಏಷ್ಯಾಕಪ್ ಹೈಬ್ರಿಡ್ ಮಾದರಿಯ ಬಗ್ಗೆ ಪಾಕ್ ಮತ್ತೆ ರಗಳೆ
ಸಂಪೂರ್ಣ ಟೂರ್ನಿ ಪಾಕಿಸ್ತಾನದಲ್ಲೇ ನಡೆಸಲು ಒತ್ತಾಯ
2023ರ ಏಷ್ಯಾಕಪ್ ಟೂರ್ನಿಯು ಪಾಕಿಸ್ತಾನ& ಶ್ರೀಲಂಕಾದಲ್ಲಿ ಆಯೋಜಿಸಲು ತೀರ್ಮಾನ
ಕರಾಚಿ(ಜೂ.22): ಬಹುನಿರೀಕ್ಷಿತ 2023ನೇ ಸಾಲಿನ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತೀರ್ಮಾನಿಸಿದೆ. ಹೀಗಿರುವಾಗಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಾಮನಿರ್ದೇಶಿತ ಅಧ್ಯಕ್ಷ ಝಕಾ ಅಶ್ರಮ್, ಹೈಬ್ರಿಡ್ ಮಾದರಿಯಲ್ಲಿ ಏಷ್ಯಾಕಪ್ ಟೂರ್ನಿ ಆಯೋಜನೆಯ ಕುರಿತಂತೆ ತಮ್ಮ ಅಸಮಾಧಾನ ಹೊರಹಾಕಿದ್ದು, ಸಂಪೂರ್ಣ ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಲ್ಲೇ ಆಯೋಜಿಸುವ ಕುರಿತಂತೆ ಪಟ್ಟು ಹಿಡಿದಿದ್ದಾರೆ.
ಹೌದು, ಝಕಾ ಅಶ್ರಫ್, ಮುಂಬರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (Pakistan Cricket Board) ಅಧ್ಯಕ್ಷ ಚುಕ್ಕಾಣಿ ಹಿಡಿಯುವ ನಿರೀಕ್ಷೆಯಲ್ಲಿದ್ದಾರೆ. ಹೀಗಿರುವಾಗಲೇ ಏಷ್ಯಾಕಪ್ ಟೂರ್ನಿ ಆಯೋಜನೆಯ ಕುರಿತಂತೆ ಹೊಸ ತಗಾದೆ ತೆಗೆದಿದ್ದಾರೆ. ಭಾರತ ಕ್ರಿಕೆಟ್ ತಂಡವು ಏಷ್ಯಾಕಪ್ ಟೂರ್ನಿಯನ್ನಾಡಲು (Asia Cup) ಪಾಕಿಸ್ತಾನ ಪ್ರವಾಸ ಮಾಡಲು ಹಿಂದೇಟು ಹಾಕಿದ್ದರಿಂದ ಹಲವು ಸುತ್ತಿನ ಮಾತುಕತೆಯ ಬಳಿಕ ಏಷ್ಯಾಕಪ್ ಟೂರ್ನಿಯನ್ನು ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ನಡೆಸಲು ಅಂತಿಮ ತೀರ್ಮಾನ ತೆಗೆದುಕೊಂಡಿದೆ. ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ತನ್ನ ಪಾಲಿನ ಪಂದ್ಯಗಳನ್ನು ಪಾಕಿಸ್ತಾನದಲ್ಲೇ ಆಡಿದರೆ, ಭಾರತ ತಂಡವು ಶ್ರೀಲಂಕಾದಲ್ಲಿ ಪಂದ್ಯಗಳನ್ನಾಡಲಿದೆ.
undefined
ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಆಫ್ಘಾನಿಸ್ತಾನ ಹಾಗೂ ನೇಪಾಳ ತಂಡಗಳು ಭಾಗವಹಿಸಿಲಿದ್ದು ಆಗಸ್ಟ್ 31 ರಿಂದ ಸೆಪ್ಟೆಂಬರ್ 17ರವರೆಗೆ ಟೂರ್ನಿ ನಡೆಯಲಿದೆ. ಒಟ್ಟು 13 ಏಕದಿನ ಪಂದ್ಯಗಳು ನಡೆಯಲಿದ್ದು, ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳು ನಡೆಯಲಿದ್ದರೆ, ಉಳಿದ 9 ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಿಕೊಳ್ಳಲಿದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಒಂದೇ ಆವೃತ್ತಿ ಎರಡು ದೇಶಗಳಲ್ಲಿ ನಡೆಯಲಿದೆ. ಟೂರ್ನಿಯ ಹಕ್ಕು ಪಾಕಿಸ್ತಾನ ಬಳಿ ಇದ್ದರೂ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಏಷ್ಯಾ ಕ್ರಿಕೆಟ್ ಸಮಿತಿ(ಎಸಿಸಿ) ನಿರ್ಧರಿಸಿದೆ.
'ಪಾಕಿಸ್ತಾನ ಕ್ರಿಕೆಟ್ ಉತ್ಕೃಷ್ಟವಾಗಿದೆ, ಭಾರತ ಬೇಕಿದ್ದರೇ ನರಕಕ್ಕೆ ಹೋಗಲಿ': ಜಾವೇದ್ ಮಿಯಾಂದಾದ್..!
ಇಷ್ಟೆಲ್ಲ ನಿರ್ಧಾರವಾದ ಬಳಿಕ ಇದೀಗ ಝಕಾ ಅಶ್ರಪ್, ಈ ಕುರಿತಂತೆ ಪ್ರತಿಕ್ರಿಯೆ ನೀಡಿದ್ದು, "ವೈಯುಕ್ತಿಕ ಅಭಿಪ್ರಾಯದಲ್ಲಿ ಹೇಳಬೇಕೆಂದರೆ, ಹೈಬ್ರಿಡ್ ಮಾದರಿಯಿಂದ ಪಾಕಿಸ್ತಾನಕ್ಕೆ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಹೈಬ್ರಿಡ್ ಮಾದರಿಯನ್ನು ನಾನು ಇಷ್ಟಪಡುವುದಿಲ್ಲ. ಏಷ್ಯಾಕಪ್ ಟೂರ್ನಿಯ ಆತಿಥ್ಯದ ಹಕ್ಕನ್ನು ಪಾಕಿಸ್ತಾನ ಪಡೆದುಕೊಂಡ ಮೇಲೆ ಪಾಕಿಸ್ತಾನದಲ್ಲೇ ಸಂಪೂರ್ಣ ಟೂರ್ನಿ ನಡೆಯಬೇಕು. ಶ್ರೀಲಂಕಾದಲ್ಲಿ ಬಹುತೇಕ ಪಂದ್ಯಗಳು ಹಾಗೂ ಪಾಕಿಸ್ತಾನದಲ್ಲಿ ಕೇವಲ 4 ಪಂದ್ಯಗಳನ್ನು ಆಯೋಜಿಸುವುದು ಪಾಕಿಸ್ತಾನದ ಹಿತಾಸಕ್ತಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಆದರೆ ಇದೀಗ ಒಂದು ತೀರ್ಮಾನ ತೆಗೆದುಕೊಂಡಾಗಿದೆ. ಹೀಗಾಗಿ ಅದರಂತೆಯೇ ನಾವು ಸಾಗಬೇಕಿದೆ. ನಾನು ಈ ತೀರ್ಮಾನವನ್ನು ತಿರಸ್ಕರಿಸುತ್ತಿಲ್ಲ ಅಥವಾ ನನ್ನ ಉದ್ದೇಶ ಟೂರ್ನಿಗೆ ಅಡ್ಡಿಯಾಗಬೇಕು ಎಂದೇನು ಇಲ್ಲ. ನನ್ನಿಂದ ಹೆಚ್ಚಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಆದರೂ ನಾವು ತೆಗೆದುಕೊಳ್ಳುವ ತೀರ್ಮಾನಗಳು ದೇಶದ ಹಿತಾಸಕ್ತಿ ಕಾಯುವಂತಿರಬೇಕು ಎಂದು ಆಗ್ರಹಿಸುತ್ತಿದ್ದೇನೆ ಎಂದು ಝಕಾ ಅಶ್ರಫ್ ಹೇಳಿದ್ದಾರೆ.
2023ರ ಏಷ್ಯಾಕಪ್ ಟೂರ್ನಿಯ ಸಂಪೂರ್ಣ ಆತಿಥ್ಯದ ಹಕ್ಕನ್ನು ಪಾಕಿಸ್ತಾನ ಪಡೆದುಕೊಂಡಿತ್ತು. ಆದರೆ ಬಿಸಿಸಿಐ ಏಷ್ಯಾಕಪ್ ಆಡಲು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಲು ನಿರಾಕರಿಸಿತ್ತು. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜಂ ಸೇಠಿ, ಹೈಬ್ರಿಡ್ ಮಾದರಿಯಲ್ಲಿ ಟೂರ್ನಿ ಆಯೋಜಿಸುವ ಕುರಿತಂತೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಂದೆ ಪ್ರಸ್ತಾಪವಿಟ್ಟಿದ್ದರು. ಅದರಂತೆ 13 ಪಂದ್ಯಗಳ ಪೈಕಿ 4-5 ಪಂದ್ಯಗಳು ಪಾಕಿಸ್ತಾನದಲ್ಲಿ ಹಾಗೂ ಉಳಿದ ಪಂದ್ಯಗಳು ಶ್ರೀಲಂಕಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.