ಖವಾಜಾ 'ಬಾಲ್ ಟ್ಯಾಂಪರಿಂಗ್' ಇನ್‌ಸೈಡ್ ಡೀಟೈಲ್ಸ್ ಬಿಚ್ಚಿಟ್ಟ ಬೆನ್ನಲ್ಲೇ ಬಹಿರಂಗವಾಗಿ ಕಿತ್ತಾಡಿಕೊಂಡ ಪ್ಯಾಟ್‌ ಕಮಿನ್ಸ್ ದಂಪತಿ..! ಆಮೇಲೆ ಆಗಿದ್ದೇ ಬೇರೆ

Published : Nov 12, 2026, 12:16 PM IST
Pat Cummins and wife Becky

ಸಾರಾಂಶ

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಪತ್ನಿ ಬೆಕಿ ನಡುವಿನ ವಾಗ್ವಾದದ ಫೋಟೋಗಳು ವೈರಲ್ ಆಗಿವೆ. ಇದೇ ವೇಳೆ ಉಸ್ಮಾನ್ ಖವಾಜಾ 2018ರ ಬಾಲ್ ಟ್ಯಾಂಪರಿಂಗ್ ಪ್ರಕರಣದ ಬಗ್ಗೆ ಹೊಸ ಆರೋಪ ಮಾಡಿದ್ದಾರೆ. ಈ ಕುರಿತು ಕಮಿನ್ಸ್ ಪ್ರತಿಕ್ರಿಯೆ ನೀಡಲಿದ್ದಾರೆ.

ಬೆಂಗಳೂರು(ನ.12): ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಮತ್ತು ಅವರ ಪತ್ನಿ ಬೆಕಿ ನಡುವಿನ ವಾಗ್ವಾದದ ಫೋಟೋಗಳು ಸುದ್ದಿಯಾಗಿರುವ ಬೆನ್ನಲ್ಲೇ, ಬೆಕಿ ಸಾಮಾಜಿಕ ಜಾಲತಾಣದಲ್ಲಿ ದಂಪತಿಯ ಆತ್ಮೀಯ ಕುಟುಂಬದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. 2018ರ ಕೇಪ್‌ಟೌನ್‌ ಬಾಲ್‌ ಟ್ಯಾಂಪರಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಉಸ್ಮಾನ್‌ ಖವಾಜಾ ಮಾಡಿರುವ ಹೊಸ ಆರೋಪಗಳು ಕ್ರಿಕೆಟ್‌ ಜಗತ್ತಿನಲ್ಲಿ ಮತ್ತೆ ಚರ್ಚೆ ಹುಟ್ಟುಹಾಕಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.

ಬುಧವಾರ ಮಧ್ಯಾಹ್ನ ಸಿಡ್ನಿಯ ರಸ್ತೆಯೊಂದರಲ್ಲಿ ತಮ್ಮ ಕಾರಿನ ಪಕ್ಕದಲ್ಲಿ ಪ್ಯಾಟ್‌ ಕಮಿನ್ಸ್‌ ಮತ್ತು ಬೆಕಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿರುವ ಚಿತ್ರಗಳನ್ನು ನ್ಯೂಸ್‌ ಕಾರ್ಪ್‌ ಪ್ರಕಟಿಸಿತ್ತು. ಸುಮಾರು ಐದು ನಿಮಿಷಗಳ ಕಾಲ ಇಬ್ಬರ ನಡುವೆ ಚರ್ಚೆ ನಡೆದಿದ್ದು, ಬಳಿಕ ಅವರು ಸಮೀಪದ ಕಟ್ಟಡವೊಂದರ ಒಳಗೆ ತೆರಳಿದ್ದಾರೆ ಎಂದು ವರದಿ ತಿಳಿಸಿತ್ತು. ಆ ಸಂದರ್ಭದಲ್ಲಿ ಕಮಿನ್ಸ್‌ ಬರಿಗಾಲಿನಲ್ಲಿ ಕಾಣಿಸಿಕೊಂಡಿದ್ದರು. ಕೆಲಕಾಲ ಕಾರಿನ ಸುತ್ತಲೂ ಓಡಾಡುತ್ತಿದ್ದ ಅವರು, ಮತ್ತೊಮ್ಮೆ ಕಾರಿಗೆ ಒರಗಿ ನಿಂತಿದ್ದರು. ಬೆಕಿ ಹೆಚ್ಚಿನ ಸಮಯ ಮಾತನಾಡುತ್ತಿರುವುದು ಫೋಟೋಗಳಲ್ಲಿ ಕಂಡುಬಂದಿತ್ತು. ಈ ಘಟನೆ ಕುರಿತು ಪ್ರತಿಕ್ರಿಯೆ ನೀಡಲು ಕಮಿನ್ಸ್‌ ಅವರ ಮ್ಯಾನೇಜ್‌ಮೆಂಟ್‌ ನಿರಾಕರಿಸಿದೆ.

ಇದರ ಬೆನ್ನಲ್ಲೇ ಬೆಕಿ ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಕುಟುಂಬದ ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಕಮಿನ್ಸ್‌ ತಮ್ಮ ಮಗಳು ಎಡಿತ್‌ಳನ್ನು ಎತ್ತಿಕೊಂಡಿದ್ದು, ಬೆಕಿ ಪತಿಯ ಭುಜಕ್ಕೆ ತಲೆಯೊರಗಿಸಿದ್ದಾರೆ. ಫೋಟೋದಲ್ಲಿ ಮಗಳ ಮುಖ ಕಾಣದಂತೆ ಮರೆಮಾಡಲಾಗಿದೆ. ಕಮಿನ್ಸ್‌ ಅವರನ್ನು ಟ್ಯಾಗ್‌ ಮಾಡಿರುವ ಬೆಕಿ, “ನನ್ನ ಪ್ರೀತಿಪಾತ್ರರು” (My loves) ಎಂದು ಶೀರ್ಷಿಕೆ ನೀಡಿದ್ದಾರೆ.

ಖವಾಜಾ ಆರೋಪಗಳ ಬಗ್ಗೆ ಶುಕ್ರವಾರ ಮಾತನಾಡಲಿರುವ ಕಮಿನ್ಸ್‌

ಇದೇ ವೇಳೆ, ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌, ಉಸ್ಮಾನ್‌ ಖವಾಜಾ ಮಾಡಿರುವ ಆರೋಪಗಳ ಕುರಿತು ಶುಕ್ರವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿದ್ದಾರೆ. 2018ರಲ್ಲಿ ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸುವ ಪ್ರಕರಣದ ಬಗ್ಗೆ ಆಸ್ಟ್ರೇಲಿಯಾ ತಂಡದ ಎಲ್ಲರಿಗೂ ತಿಳಿದಿತ್ತು. ಅಷ್ಟೇ ಅಲ್ಲದೆ, ಅದಕ್ಕೂ ಹಿಂದಿನ ಪೋರ್ಟ್‌ ಎಲಿಜಬೆತ್‌ ಟೆಸ್ಟ್‌ ಪಂದ್ಯದಲ್ಲೂ ಸ್ಯಾಂಡ್‌ಪೇಪರ್‌ ಬಳಸಲಾಗಿತ್ತು ಎಂದು ಖವಾಜಾ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಮಿನ್ಸ್‌ ಮಾಧ್ಯಮಗಳೊಂದಿಗೆ ಮಾತನಾಡಲು ಮುಂದಾಗಿದ್ದಾರೆ.

“ಈ ವಾರ ನಡೆದ ಘಟನೆಗಳ ಕುರಿತು ಶುಕ್ರವಾರ ಬೆಳಗ್ಗೆ 9.30ಕ್ಕೆ ಎಲ್ಲ ಮಾಧ್ಯಮಗಳ ಪ್ರಶ್ನೆಗಳಿಗೂ ಉತ್ತರಿಸಲು ಸಿದ್ಧನಿದ್ದೇನೆ. ಉಜ್ಜಿ (ಉಸ್ಮಾನ್‌ ಖವಾಜಾ) ಮಾಡಿರುವ ಹಲವು ಆರೋಪಗಳು ಮತ್ತು ಅವುಗಳ ಸಂಪೂರ್ಣ ಹಿನ್ನೆಲೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದೇನೆ. ಹೀಗಾಗಿ ಈ ಕುರಿತು ಸೂಕ್ತವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಲಿದೆ” ಎಂದು ಕಮಿನ್ಸ್‌ ತಿಳಿಸಿದ್ದಾರೆ.

ಮಂಗಳವಾರ ಬಿಡುಗಡೆಯಾದ ಉಸ್ಮಾನ್‌ ಖವಾಜಾ ಅವರ ಆತ್ಮಕಥೆ ‘ಸಬ್ರ್‌’ನಲ್ಲಿ (Sabr) ಈ ಪ್ರಕರಣದ ಬಗ್ಗೆ ಹಲವು ಹೊಸ ಆರೋಪಗಳನ್ನು ಮಾಡಲಾಗಿದೆ. ಬಾಲ್‌ ಟ್ಯಾಂಪರಿಂಗ್‌ ಪ್ರಕರಣದ ಬಗ್ಗೆ ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಮತ್ತು ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್‌ ಅವರಿಗೆ ಮಾತ್ರವಲ್ಲದೆ, ಆಸ್ಟ್ರೇಲಿಯಾ ತಂಡದ ಇತರ ಆಟಗಾರರಿಗೂ ತಿಳಿದಿತ್ತು ಎಂಬುದು ಖ್ವಾಜಾ ಅವರ ಪುಸ್ತಕದಲ್ಲಿನ ಪ್ರಮುಖ ಆರೋಪವಾಗಿದೆ.

2018ರ ಕೇಪ್‌ಟೌನ್‌ ಬಾಲ್‌ ಟ್ಯಾಂಪರಿಂಗ್‌ ಪ್ರಕರಣ:

2018ರ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ನಲ್ಲಿ ನಡೆದ ಮೂರನೇ ಟೆಸ್ಟ್‌ ಪಂದ್ಯದ ವೇಳೆ ಕ್ಯಾಮರೂನ್‌ ಬ್ಯಾನ್‌ಕ್ರಾಫ್ಟ್‌ ಸ್ಯಾಂಡ್‌ಪೇಪರ್‌ ಬಳಸಿ ಚೆಂಡಿನ ಸ್ಥಿತಿಯನ್ನು ಬದಲಾಯಿಸಲು ಯತ್ನಿಸುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆ ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಪ್ರಕರಣದ ಬಳಿಕ ಕ್ರಿಕೆಟ್‌ ಆಸ್ಟ್ರೇಲಿಯಾ ಸ್ಟೀವ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ಗೆ ತಲಾ 12 ತಿಂಗಳ ನಿಷೇಧ ವಿಧಿಸಿತ್ತು. ಸ್ಮಿತ್‌ ತಮ್ಮ ನಾಯಕತ್ವದ ಸ್ಥಾನ ಕಳೆದುಕೊಂಡರೆ, ವಾರ್ನರ್‌ ಉಪನಾಯಕನ ಸ್ಥಾನದಿಂದ ಕೆಳಗಿಳಿದಿದ್ದರು. ಇನ್ನು ಬ್ಯಾನ್‌ಕ್ರಾಫ್ಟ್‌ಗೆ ಒಂಬತ್ತು ತಿಂಗಳ ನಿಷೇಧ ವಿಧಿಸಲಾಗಿತ್ತು.

ಆದರೆ, ಈ ಪ್ರಕರಣದ ಬಗ್ಗೆ ಆಸ್ಟ್ರೇಲಿಯಾ ತಂಡದ ಎಲ್ಲ ಆಟಗಾರರಿಗೂ ತಿಳಿದಿತ್ತು ಎಂಬ ಖವಾಜಾ ಅವರ ಹೊಸ ಹೇಳಿಕೆ ಇದೀಗ ತಂಡದ ಬೌಲಿಂಗ್‌ ವಿಭಾಗದ ಮೇಲೆಯೂ ಅನುಮಾನ ಮೂಡಿಸಿದೆ. ಆ ಸಮಯದಲ್ಲಿ ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹೇಜಲ್‌ವುಡ್‌ ಮತ್ತು ನಾಥನ್‌ ಲಯನ್‌ ಆಸ್ಟ್ರೇಲಿಯಾ ತಂಡದ ಪ್ರಮುಖ ಬೌಲರ್‌ಗಳಾಗಿದ್ದರು.

“ಅದು ನಮ್ಮೆಲ್ಲರಿಗೂ ತಿಳಿದಿತ್ತು. ಕೇವಲ ಬ್ಯಾಟರ್‌ಗಳಿಗೆ ಮಾತ್ರವಲ್ಲ, ಬೌಲರ್‌ಗಳಿಗೆ ಅಥವಾ ಸಿಬ್ಬಂದಿಗೆ ಮಾತ್ರವಲ್ಲ. ನಮ್ಮೆಲ್ಲರಿಗೂ ಗೊತ್ತಿತ್ತು” ಎಂದು ಖವಾಜಾ ವಾರಾಂತ್ಯದಲ್ಲಿ ಸಿಡ್ನಿ ಮಾರ್ನಿಂಗ್‌ ಹೆರಾಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಅವರ ಆತ್ಮಕಥೆ ಬಿಡುಗಡೆಯಾಗುವ ಮುನ್ನ ಈ ಹೇಳಿಕೆ ನೀಡಿದ್ದರು. ಆದರೆ, 2021ರಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದ ಕಮಿನ್ಸ್‌, ಸ್ಟಾರ್ಕ್‌, ಹೇಜಲ್‌ವುಡ್‌ ಮತ್ತು ಲಯನ್‌, ಕೇಪ್‌ಟೌನ್‌ ಟೆಸ್ಟ್‌ ಪಂದ್ಯದಲ್ಲಿ ಚೆಂಡಿನ ಸ್ಥಿತಿಯನ್ನು ಬದಲಾಯಿಸಲು ಹೊರಗಿನ ವಸ್ತುವೊಂದನ್ನು ಮೈದಾನಕ್ಕೆ ತರಲಾಗಿತ್ತು ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇನ್ನೊಂದೆಡೆ, ಡೇವಿಡ್‌ ವಾರ್ನರ್‌ ತಮ್ಮ ಮಾಜಿ ಆರಂಭಿಕ ಆಟಗಾರ ಉಸ್ಮಾನ್‌ ಖವಾಜಾ ಅವರಿಗೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. “ಈ ವಿಷಯದ ಬಗ್ಗೆ ನಾನು ಮಾತನಾಡಿ ಎಂಟು ವರ್ಷಗಳಾಗಿವೆ. ಉಜ್ಜಿ, ನಾನು ನಿನಗೆ ಸಂಪೂರ್ಣ ಬೆಂಬಲ ನೀಡುತ್ತೇನೆ. ನೀನು ಮಾತನಾಡಿರುವುದಕ್ಕೆ ಧನ್ಯವಾದಗಳು. ನೀನು ಹೇಳಿರುವುದು ಶೇಕಡಾ 100ರಷ್ಟು ಸತ್ಯ. ಎಲ್ಲರಿಗೂ ಸತ್ಯ ಏನೆಂಬುದು ಗೊತ್ತಿದೆ. ಅದು ಈಗ ಹೊರಬಂದಿದೆ. ಜನರು ತಿಳಿದುಕೊಳ್ಳಲು ಬಯಸಿದ್ದ ಸತ್ಯ ಇದೇ” ಎಂದು ವಾರ್ನರ್‌ ಹೇಳಿದ್ದಾರೆ.

ಪ್ರಕರಣದ ಮರು ತನಿಖೆಯಿಂದ ಯಾವುದೇ ಪ್ರಯೋಜನವಿಲ್ಲ ಎಂದ ಕ್ರಿಕೆಟ್‌ ಆಸ್ಟ್ರೇಲಿಯಾ

ಈ ವಿವಾದದ ಬೆನ್ನಲ್ಲೇ ಪ್ರಕರಣದ ಬಗ್ಗೆ ಮತ್ತೆ ತನಿಖೆ ನಡೆಸುವ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಎದುರಾಗಿದೆ. ಆದರೆ, ಕ್ರಿಕೆಟ್‌ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾಡ್‌ ಗ್ರೀನ್‌ಬರ್ಗ್‌ ಪ್ರಕರಣದ ತನಿಖೆಯನ್ನು ಮತ್ತೆ ತೆರೆಯುವುದರಿಂದ “ಯಾವುದೇ ಪ್ರಯೋಜನವಿಲ್ಲ” ಎಂದು ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Vaibhav ಸೂರ್ಯವಂಶಿ ದಾಖಲೆ ಮುರಿಯುವ ಸನಿಹದಲ್ಲೇ ಎಡವಿದ ಸೆಹ್ವಾಗ್ ಪುತ್ರ; ಮಿಸ್ ಆಗಿದ್ದು ಕೇವಲ ಇಷ್ಟೇ ರನ್‌ಗಳಿಂದ!
'ಆ ಮ್ಯಾಚ್‌ಗೂ ಮೊದಲು ವಿರಾಟ್ ಕೊಹ್ಲಿ ನಮ್ಮ ಪಾಲಿಗೆ ಸಾಮಾನ್ಯ ಆಟಗಾರನಾಗಿದ್ದ': ಸೆಹ್ವಾಗ್‌ ಹೇಳಿದ ಆ ಇನ್ನಿಂಗ್ಸ್‌ ಯಾವುದು?