ಒನ್‌ ಡೇ ವಿಶ್ವಕಪ್‌ ಬಗ್ಗೆ ಮತ್ತೆ ಪಾಕಿಸ್ತಾನ ಕಿರಿಕ್‌..! ಪಾಕಿಸ್ತಾನದ ಕ್ರೀಡಾ ಸಚಿವ ತಕರಾರು..!

By Kannadaprabha News  |  First Published Jul 10, 2023, 9:46 AM IST

ಏಕದಿನ ವಿಶ್ವಕಪ್ ಟೂರ್ನಿಗೆ ಮತ್ತೆ ಕಿರಿಕ್ ತೆಗೆದ ಪಾಕ್ ಕ್ರೀಡಾ ಸಚಿವ
ಪಾಕಿಸ್ತಾನ ಮತ್ತೆ ಏಷ್ಯಾಕಪ್‌ ಆತಿಥ್ಯದ ವಿಚಾರವನ್ನಿಟ್ಟು ತಗಾದೆ ತೆಗೆದಿದೆ
ಭಾರತ ಸರ್ಕಾರ ಕ್ರಿಕೆಟ್‌ನಲ್ಲಿ ರಾಜಕೀಯವನ್ನು ತರುತ್ತಿದೆ ಎಂದು ಆರೋಪ


ಕರಾಚಿ(ಜು.10): ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಭಾಗವಹಿಸುವ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದ್ದು, ಈ ನಡುವೆ ಪಾಕಿಸ್ತಾನ ಮತ್ತೆ ಏಷ್ಯಾಕಪ್‌ ಆತಿಥ್ಯದ ವಿಚಾರವನ್ನಿಟ್ಟು ತಗಾದೆ ತೆಗೆದಿದೆ. ಏಷ್ಯಾಕಪ್‌ ಆಡಲು ಟೀಂ ಇಂಡಿಯಾ ಪಾಕಿಸ್ತಾನಕ್ಕೆ ಬರದಿದ್ದರೆ, ವಿಶ್ವಕಪ್‌ ಆಡಲು ಪಾಕ್ ತಂಡವನ್ನು ಭಾರತಕ್ಕೆ ಕಳುಹಿಸುವುದಿಲ್ಲ ಎಂದು ಪಾಕಿಸ್ತಾನದ ಕ್ರೀಡಾ ಸಚಿವ ಎಹ್ಸಾನ್ ಮಜಾರಿ ಹೇಳಿಕೆ ನೀಡಿದ್ದಾರೆ. 

ಪಾಕ್‌ ಕ್ರಿಕೆಟ್ ಮಂಡಳಿ(ಪಿಸಿಬಿ) ನನ್ನ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಭಾರತ ತನ್ನ ಏಷ್ಯಾಕಪ್ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಲು ಒತ್ತಾಯಿಸಿದರೆ, ನಾವು ಭಾರತದಲ್ಲಿ ನಮ್ಮ ವಿಶ್ವಕಪ್ ಪಂದ್ಯಗಳಿಗೆ ಅದೇ ಬೇಡಿಕೆ ಇಡುತ್ತೇವೆ ಎಂದು ಮಜಾರಿ ಹೇಳಿದ್ದಾರೆ. ಅಲ್ಲದೇ, ಭಾರತ ಸರ್ಕಾರ ಕ್ರಿಕೆಟ್‌ನಲ್ಲಿ ರಾಜಕೀಯವನ್ನು ತರುತ್ತಿದೆ ಎಂದು ದೂರಿದ್ದಾರೆ.

Latest Videos

undefined

ವಿಶ್ವಕಪ್‌ನಲ್ಲಿ ಪಾಕ್‌ ಆಡುವ ಬಗ್ಗೆ ನಿರ್ಧರಿಸಲು ಸಮಿತಿ!

ಕರಾಚಿ: ಭಾರತದದಲ್ಲಿ ಅಕ್ಟೋಬರ್‌ನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಪಾಲ್ಗೊಳ್ಳುವ ಬಗ್ಗೆ ನಿರ್ಧರಿಸಲು ಪಾಕ್‌ ಪ್ರಧಾನಿ ಶಾಬಾಜ್‌ ಶರೀಪ್‌ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದಾರೆ. ಪಾಕ್‌ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ನೇತೃತ್ವದ ಸಮಿತಿಯು ಭಾರತದಲ್ಲಿ ಪಾಕ್‌ ಆಟಗಾರರಿಗೆ ನೀಡಲಾಗುವ ಭದ್ರತೆ, ಸರ್ಕಾರದ ನಿಲುವು ಹಾಗೂ ಇತರ ಆಯಾಮಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಆ ಬಳಿಕ ಪಾಕ್‌ ತಂಡ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಬೇಕೇ ಬೇಡಬೇ ಎಂಬುದನ್ನು ಸರ್ಕಾರ ನಿರ್ಧರಿಸಲಿದೆ. ಸಮಿತಿಯಲ್ಲಿ ಪಾಕ್‌ ಕ್ರೀಡಾ ಸಚಿವ ಅಹ್ಸನ್‌ ಮಜಾರಿ ಹಾಗೂ ಇತರ ಆರು ಮಂದಿ ಇದ್ದಾರೆ.

ಐಸಿಸಿ ವಿಶ್ವಕಪ್‌ ಅರ್ಹತಾ ಟೂರ್ನಿ ಜಯಿಸಿದ ಲಂಕಾ

ಹರಾರೆ: ಮುಂಬರುವ ಐಸಿಸಿ ಏಕದಿನ ವಿಶ್ವಕಪ್‌ನ ಅರ್ಹತಾ ಟೂರ್ನಿಯಲ್ಲಿ ಶ್ರೀಲಂಕಾ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಭಾನುವಾರ ಫೈನಲ್‌ನಲ್ಲಿ ಲಂಕಾ, ನೆದರ್‌ಲೆಂಡ್ಸ್‌ ವಿರುದ್ಧ 128 ರನ್‌ ಗೆಲುವು ಸಾಧಿಸಿತು. ಈಗಾಗಲೇ ಎರಡೂ ತಂಡಗಳೂ ವಿಶ್ವಕಪ್‌ನ ಪ್ರಧಾನ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಂಡಿದ್ದವು. ಶ್ರೀಲಂಕಾ ಕ್ವಾಲಿಫೈಯರ್‌-2 ತಂಡವಾಗಿ ವಿಶ್ವಕಪ್‌ ಪ್ರವೇಶಿಸಿದ್ದರೆ, ನೆದರ್‌ಲೆಂಡ್ಸ್‌ ಕ್ವಾಲಿಫೈಯರ್‌-1 ತಂಡವಾಗಿ ಪ್ರಧಾನ ಸುತ್ತಿಗೇರಿತ್ತು. 

ರಿಷಭ್ ಪಂತ್ ನಿಂದ ಆರ್ಚರ್‌ವರೆಗೆ: ಈ ಸ್ಟಾರ್ ಕ್ರಿಕೆಟಿಗರು ಏಕದಿನ ವಿಶ್ವಕಪ್ ಆಡೋದು ಡೌಟ್..!

ಭಾನುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಂಕಾ 47.5 ಓವರ್‌ಗಳಲ್ಲಿ 233 ರನ್‌ಗೆ ಸರ್ವ್‍ಪತನ ಕಂಡಿತು. ಸಹಾನ್‌ ಅರಚಿಗೆ 57 ರನ್‌ ಸಿಡಿಸಿದರೆ, ಕುಸಾಲ್‌ ಮೆಂಡಿಸ್‌ 43, ಅಸಲಂಕ 36 ರನ್‌ ಕೊಡುಗೆ ನೀಡಿದರು. ತಂಡದ ಕೊನೆ 7 ವಿಕೆಟ್‌ 53 ರನ್‌ ಅಂತರದಲ್ಲಿ ಉರುಳಿತು. ಸಾಧಾರಣ ಗುರಿ ಬೆನ್ನತ್ತಿದರೂ ಡಚ್‌ ಪಡೆ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗಿ 23.3 ಓವರ್‌ಗಳಲ್ಲಿ ಆಲೌಟಾಯಿತು. ಮ್ಯಾಕ್ಸ್‌ ಒಡೌಡ್‌(33) ತಂಡದ ಪರ ಗರಿಷ್ಠ ಮೊತ್ತ ಗಳಿಸಿದರು. ತೀಕ್ಷಣ 4, ಮಧುಶನಕ 3 ವಿಕೆಟ್‌ ಕಿತ್ತರು.

ವನಿತಾ ಟಿ20: ಬಾಂಗ್ಲಾ ವಿರುದ್ಧ ಭಾರತಕ್ಕೆ ಗೆಲುವು

ಢಾಕಾ: ಬಾಂಗ್ಲಾದೇಶ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮಹಿಳಾ ತಂಡ ಶುಭಾರಂಭ ಮಾಡಿದೆ. ಭಾನುವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 7 ವಿಕೆಟ್‌ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 114 ರನ್‌ ಗಳಿಸಲಷ್ಟೇ ಶಕ್ತವಾಯಿತು. ಪೂಜಾ, ಮಿನ್ನು ಮಾನಿ ಹಾಗೂ ಶಫಾಲಿ ತಲಾ 1 ವಿಕೆಟ್‌ ಪಡೆದರು. ಸುಲಭ ಗುರಿ ಬೆನ್ನತ್ತಿದ ಭಾರತ 16.2 ಓವರ್‌ಗಳಲ್ಲಿ ಜಯ ತನ್ನದಾಗಿಸಿಕೊಂಡಿತು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಔಟಾಗದೆ 54 ರನ್‌ ಸಿಡಿಸಿದರೆ ಸ್ಮೃತಿ ಮಂಧನಾ 38 ರನ್‌ ಕೊಡುಗೆ ನೀಡಿದರು. 2ನೇ ಪಂದ್ಯ ಮಂಗಳವಾರ ನಡೆಯಲಿದೆ.
 

click me!