* ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಗೆಲುವಿನ ಖಾತೆ ತೆರೆದ ಆತಿಥೇಯ ಇಂಗ್ಲೆಂಡ್
* ಆಸ್ಟ್ರೇಲಿಯಾ ಎದುರು 3 ವಿಕೆಟ್ ರೋಚಕ ಜಯ ಸಾಧಿಸಿದ ಬೆನ್ ಸ್ಟೋಕ್ಸ್
* ಆಲ್ರೌಂಡ್ ಪ್ರದರ್ಶನ ತೋರಿದ ಮಾರ್ಕ್‌ವುಡ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ
ಲಂಡನ್(ಜು.10): ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿ ಮತ್ತೊಮ್ಮೆ ಥ್ರಿಲ್ಲರ್‌ಗೆ ಸಾಕ್ಷಿಯಾಗಿದ್ದು, ಈ ಬಾರಿ ಇಂಗ್ಲೆಂಡ್‌ನ ಕೆಚ್ಚೆದೆಯ ಆಟದ ಮುಂದೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಕೊನೆಗೂ ಮಂಡಿಯೂರಿದೆ. ಭಾರೀ ರೋಚಕತೆಯಿಂದ ಕೂಡಿದ್ದ ಸರಣಿಯ 3ನೇ ಪಂದ್ಯದಲ್ಲಿ ಭಾನುವಾರ ಇಂಗ್ಲೆಂಡ್ 3 ವಿಕೆಟ್ ಗೆಲುವು ಸಾಧಿಸಿತು. ಮೊದಲೆರಡು ಪಂದ್ಯ ಗೆದ್ದಿದ್ದ ಆಸೀಸ್ ಈ ಪಂದ್ಯವನ್ನೂ ಗೆದ್ದು ಸರಣಿ ತನ್ನದಾಗಿಸಿಕೊಳ್ಳುವ ಕನಸು ಕೈಗೂಡಲಿಲ್ಲ. ಇದರ ಹೊರತಾಗಿಯೂ ಆಸೀಸ್ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ.
ಗೆಲುವಿಗೆ 251 ರನ್ ಗುರಿ ಪಡೆದಿದ್ದ ಇಂಗ್ಲೆಂಡ್ 3ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 27 ರನ್ ಗಳಿಸಿತ್ತು. ತಂಡದ ಗೆಲುವಿಗೆ ಭಾನುವಾರ ಇನ್ನೂ 224 ರನ್ ಬೇಕಿತ್ತು. ಆದರೆ ಸತತ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಇಂಗ್ಲೆಂಡ್ ಹ್ಯಾರಿ ಬ್ರೂಕ್ ಹಾಗೂ ಕೊನೆಯಲ್ಲಿ ಮಾರ್ಕ್ ವುಡ್, ಕ್ರಿಸ್ ವೋಕ್ಸ್ ನೆರವಿನಿಂದ ಪಂದ್ಯ ತನ್ನದಾಗಿಸಿಕೊಂಡಿತು.
undefined
ಆರಂಭಿಕರಾದ ಜ್ಯಾಕ್ ಕ್ರಾವ್ಲಿ(44), ಬೆನ್ ಡಕೆಟ್(23) ಕೊಂಚ ಪ್ರತಿರೋಧ ತೋರಿದರೂ ಇವರಿಬ್ಬರ ನಿರ್ಗಮನದ ಬಳಿಕ ಆಸೀಸ್ ಮೇಲುಗೈ ಸಾಧಿಸಿತು. ರೂಟ್(21), ಅಲಿ (05), ಸ್ಟೋಕ್ಸ್ (13), ಬೇರ್‌ಸ್ಟೋವ್(05) ನಿರ್ಣಾಯಕ ಹಂತದಲ್ಲಿ ಕೈಕೊಟ್ಟರು. ಆದರೆ ಹ್ಯಾರಿ ಬ್ರೂಕ್ 93 ಎಸೆತಗಳಲ್ಲಿ 75 ರನ್ ಸಿಡಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು. ಗೆಲುವಿಗೆ 21 ರನ್ ಬೇಕಿದ್ದಾಗ ಹ್ಯಾರಿ ಬ್ರೂಕ್ ಔಟಾದಾಗ ತಂಡ ಮತ್ತೆ ಸಂಕಷ್ಟಕ್ಕೊಳಗಾಯಿತು. ಆದರೆ ಕ್ರಿಸ್ ವೋಕ್ಸ್(ಔಟಾಗದೆ 32), ಮಾರ್ಕ್ ವುಡ್(ಔಟಾಗದೆ 16) ತಂಡವನ್ನು ಗೆಲುವಿನ ದಡ ಸೇರಿಸಿದರು.
ರಿಷಭ್ ಪಂತ್ ನಿಂದ ಆರ್ಚರ್‌ವರೆಗೆ: ಈ ಸ್ಟಾರ್ ಕ್ರಿಕೆಟಿಗರು ಏಕದಿನ ವಿಶ್ವಕಪ್ ಆಡೋದು ಡೌಟ್..!
ಮಿಚೆಲ್ ಸ್ಟಾರ್ಕ್‌ಗೆ 5 ವಿಕೆಟ್ ಗೊಂಚಲು: ಆಸ್ಟ್ರೇಲಿಯಾದ ಎಡಗೈ ಮಾರಕ ವೇಗಿ ಮಿಚೆಲ್ ಸ್ಟಾರ್ಕ್, 2019ರ ಬಳಿಕ ಟೆಸ್ಟ್ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ಮೊದಲ ಬಾರಿಗೆ 5 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಬೆನ್ ಡಕೆಟ್, ಮೋಯಿನ್ ಅಲಿ, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ ಹಾಗೂ ಜಾನಿ ಬೇರ್‌ಸ್ಟೋವ್ ಅವರಂತಹ ಪ್ರಮುಖ ಬ್ಯಾಟರ್‌ಗಳನ್ನು ಬಲಿ ಪಡೆಯುವ ಮೂಲಕ ಆಸ್ಟ್ರೇಲಿಯಾ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಆದರೆ ಕೊನೆಯಲ್ಲಿ ಕ್ರಿಸ್ ವೋಕ್ಸ್ ಹಾಗೂ ಮಾರ್ಕ್ ವುಡ್, ಆಸೀಸ್ ಸರಣಿ ಗೆಲುವಿನ ಕನಸಿಗೆ ತಣ್ಣೀರೆರಚಿದರು.
ಇದಕ್ಕೂ ಮೊದಲು, ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ 263ಕ್ಕೆ ಆಲೌಟಾಗಿ, ಬಳಿಕ ಇಂಗ್ಲೆಂಡ್‌ಅನ್ನು 237ಕ್ಕೆ ನಿಯಂತ್ರಿಸಿತ್ತು. ಬಳಿಕ ಆಸೀಸ್ 224 ರನ್‌ಗೆ ಆಲೌಟಾಗಿತ್ತು. ಇನ್ನು ಬ್ಯಾಟಿಂಗ್‌ನಲ್ಲಿ ಅಮೂಲ್ಯ 40 ರನ್ ಹಾಗೂ ಬೌಲಿಂಗ್‌ನಲ್ಲಿ 7 ವಿಕೆಟ್ ಕಬಳಿಸಿ ಮಿಂಚಿದ ವೇಗಿ ಮಾರ್ಕ್ ವುಡ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಸ್ಕೋರ್: ಆಸೀಸ್ 263/10 ಮತ್ತು 224/10,
ಇಂಗ್ಲೆಂಡ್ 234/10 ಮತ್ತು 254/7 (ಬ್ರೂಕ್ 75, ಕ್ರಾವ್ಲಿ 44, ವೋಕ್ಸ್ 32*, ಸ್ಟಾರ್ಕ್ 5-78)
ಪಂದ್ಯಶ್ರೇಷ್ಠ: ಮಾರ್ಕ್ ವುಡ್