2023ರ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಪಾಕಿಸ್ತಾನ ಆತಿಥ್ಯ
ತಟಸ್ಥ ಸ್ಥಳದಲ್ಲಿ ನಡೆದರೆ ಮಾತ್ರ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ನಿರ್ಧಾರ
ಇದರ ಬೆನ್ನಲ್ಲೇ 2023ರ ಏಕದಿನ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯುವ ಬೆದರಿಕೆ ಹಾಕಿದ ಪಾಕಿಸ್ತಾನ
ಇಸ್ಲಾಮಾಬಾದ್(ಅ.19): ಮುಂಬರುವ ಏಷ್ಯಾಕಪ್ ಟೂರ್ನಿಯು ಪಾಕಿಸ್ತಾನದಲ್ಲಿ ಆಯೋಜನೆಗೊಂಡರೆ ಭಾರತ ಕ್ರಿಕೆಟ್ ತಂಡವು, ಪಾಕಿಸ್ತಾನ ಪ್ರವಾಸ ಮಾಡುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿಕೆ ಬೆನ್ನಲ್ಲೇ ಪಾಕಿಸ್ತಾನವು, ಭಾರತದಲ್ಲಿ 2023ರಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದ ಹಿಂದೆ ಸರಿಯುವ ಬೆದರಿಕೆಯೊಡ್ಡಿದೆ.
ತಟಸ್ಥ ಸ್ಥಳಕ್ಕೆ ಭಾರತ ನಿರ್ಧಾರ:
ಮಂಗಳವಾರ ಬಿಸಿಸಿಐ ವಾರ್ಷಿಕ ಸಭೆ ಬಳಿಕ ಮಾತನಾಡಿದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರೂ ಆಗಿರುವ ಜಯ್ ಶಾ, ‘ಮುಂದಿನ ವರ್ಷ ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ತೆರಳದಿರಲು ನಾವು ನಿರ್ಧರಿಸಿದ್ದೇವೆ. ಅದರ ಬದಲು ತಟಸ್ಥ ಸ್ಥಳದಲ್ಲಿ ಆಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದ್ದಾರೆ. 2023ರ ಏಷ್ಯಾಕಪ್ ಆಯೋಜನೆ ಹಕ್ಕು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಬಳಿ ಇದ್ದು, ಟೂರ್ನಿಯಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ತೆರಳುವ ಬಗ್ಗೆ ಬಿಸಿಸಿಐ ಅಜೆಂಡಾದಲ್ಲಿ ಇತ್ತೀಚೆಗೆ ಉಲ್ಲೇಖಿಸಲಾಗಿತ್ತು. ಹೀಗಾಗಿ 15 ವರ್ಷಗಳ ಬಳಿಕ ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವ ಬಗ್ಗೆ ಸುದ್ದಿಯಾಗಿತ್ತು. ಅಲ್ಲದೇ ಬಿಸಿಸಿಐ, ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿದೆ ಎಂದು ಹೇಳಲಾಗಿತ್ತು. ಆದರೆ ಮಂಗಳವಾರದ ಬಿಸಿಸಿಐ ಸಭೆ ಬಳಿಕ ಈ ಎಲ್ಲಾ ವದಂತಿಗಳಿಗೆ ಶಾ ತೆರೆ ಎಳೆದರು.
ಪಾಕ್ ಬಹಿಷ್ಕಾರ?:
ಭಾರತದ ಈ ನಡೆಯಿಂದ ಆಕ್ರೋಶಗೊಂಡ ಪಿಸಿಬಿ 2023ರ ಏಕದಿನ ವಿಶ್ವಕಪ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ‘ಪಿಸಿಬಿ ಈಗ ಕಠಿಣ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ. ಯಾಕೆಂದರೆ ಭಾರತದಲ್ಲಿ ಪಾಕಿಸ್ತಾನ ತಂಡ ದೊಡ್ಡ ಟೂರ್ನಿಗಳಲ್ಲಿ ಆಡದಿದ್ದರೆ ಐಸಿಸಿ ಹಾಗೂ ಎಸಿಸಿಗೆ ಭಾರೀ ನಷ್ಟ ಉಂಟಾಗಲಿದೆ’ ಎಂದು ಪಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ. ಸ್ವತಃ ಮಂಡಳಿಯ ಅಧ್ಯಕ್ಷ ರಮೀಜ್ ರಾಜಾ ಕೂಡಾ ಜಯ್ ಶಾ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಮಂಡಳಿಯಿಂದ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.
T20 World Cup: ಕ್ಯಾಂಪರ್-ಡಾಕ್ರೆಲ್ ಶತಕದ ಜತೆಯಾಟ, ಸ್ಕಾಟ್ಲೆಂಡ್ ಎದುರು ಐರ್ಲೆಂಡ್‌ಗೆ ಭರ್ಜರಿ ಜಯ..!
ಸದ್ಯ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು ಜಾಗತಿಕ ಟೂರ್ನಿಗಳಾದ ಏಷ್ಯಾಕಪ್ ಹಾಗೂ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಕಳೆದೊಂದು ದಶಕದಿಂದ ಉಭಯ ತಂಡಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಭಾರತ ತಂಡವು ಪಾಕಿಸ್ತಾನ ನೆಲದಲ್ಲಿ 2008ರಲ್ಲಿ ಕೊನೆಯ ಬಾರಿಗೆ ಕ್ರಿಕೆಟ್ ಪಂದ್ಯವನ್ನಾಡಿದೆ. ಇನ್ನು 2012ರಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿಯನ್ನು ಆಡಿತ್ತು.
ಇನ್ನು ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 23ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ 2022ರ ಐಸಿಸಿ ಟಿ20 ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬೊರ್ನ್ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ.