ಸ್ಕಾಟ್ಲೆಂಡ್ ಎದುರು ರೋಚಕ ಗೆಲುವು ದಾಖಲಿಸಿದ ಐರ್ಲೆಂಡ್
6 ವಿಕೆಟ್ ಜಯ ಸಾಧಿಸಿ ಪ್ಲೇ ಆಫ್ ಕನಸು ಜೀವಂತವಾಗಿರಿಸಿಕೊಂಡ ಐರ್ಲೆಂಡ್
ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಕುರ್ಟಿಸ್ ಕ್ಯಾಂಪರ್
ಹೋಬರ್ಟ್(ಅ.19): ಆರಂಭಿಕ ಅಘಾತದ ಹೊರತಾಗಿಯೂ ಕುರ್ಟಿಸ್ ಕ್ಯಾಂಪರ್ ಹಾಗೂ ಜಾರ್ಜ್ ಡಾಕ್ರೆಲ್ ಮುರಿಯದ ಶತಕದ ಜತೆಯಾಟದ ನೆರವಿನಿಂದ ಸ್ಕಾಟ್ಲೆಂಡ್ ಎದುರು ಐರ್ಲೆಂಡ್ ತಂಡವು 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಸೂಪರ್ 12 ಹಂತಕ್ಕೇರುವ ಆಸೆಯನ್ನು ಐರ್ಲೆಂಡ್ ತಂಡವು ಜೀವಂತವಾಗಿರಿಸಿಕೊಂಡಿದೆ.
ಇಲ್ಲಿನ ಬೆಲ್ಲಿರೈವ್ ಓವಲ್ ಮೈದಾನದಲ್ಲಿ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ, ಸ್ಕಾಟ್ಲೆಂಡ್ ನೀಡಿದ್ದ 177 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ. ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ದ ಆಘಾತಕಾರಿ ಸೋಲು ಕಂಡಿದ್ದ ಐರ್ಲೆಂಡ್ ತಂಡವು, ಎರಡನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ ಗೆಲುವಿನ ಹಳಿಗೆ ಮರಳುವಲ್ಲಿ ಯಶಸ್ವಿಯಾಗಿದೆ. ಸವಾಲಿನ ಗುರಿ ಬೆನ್ನತ್ತಿದ ಐರ್ಲೆಂಡ್ ತಂಡವು ಆರಂಭದಲ್ಲೇ ನಾಯಕ ಆಂಡ್ರ್ಯೂ ಬಲ್ಬಿರೈನ್(14) ವಿಕೆಟ್ ಕಳೆದುಕೊಂಡಿತು. ಇನ್ನು ಸ್ಟಾರ್ ಬ್ಯಾಟರ್ ಪೌಲ್ ಸ್ಟರ್ಲಿಂಗ್(8) ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಐರ್ಲೆಂಡ್ ತಂಡವು 29 ರನ್‌ಗಳಿಸುವಷ್ಟರಲ್ಲಿ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಲೋರ್ಕನ್ ಟಕ್ಕರ್(20) ಹಾಗೂ ಹ್ಯಾರಿ ಟೆಕ್ಟರ್(14) ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲವಾದರು.
Curtis Campher and George Dockrell, take a bow!
Their extraordinary partnership helps Ireland to a crucial win 👏 | | 📝 https://t.co/IGLPbx7vMD pic.twitter.com/zHz4dKDGdm
undefined
ಐರ್ಲೆಂಡ್‌ಗೆ ಗೆಲುವು ತಂದಿತ್ತ ಕ್ಯಾಂಪರ್-ಡಾಕ್ರೆಲ್ ಜೋಡಿ: ಐರ್ಲೆಂಡ್ ತಂಡವು ಒಂದು ಹಂತದಲ್ಲಿ 9.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 61 ರನ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ಬಳಿಕ 5ನೇ ವಿಕೆಟ್‌ಗೆ ಜತೆಯಾದ ಕುರ್ಟಿಸ್ ಕ್ಯಾಂಪರ್ ಹಾಗೂ ಜಾರ್ಜ್ ಡಾಕ್ರೆಲ್ ಜೋಡಿಯು 57 ಎಸೆತಗಳಲ್ಲಿ ಮುರಿಯದ 119 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದರು. ಸ್ಪೋಟಕ ಬ್ಯಾಟಿಂಗ್ ನಡೆಸಿದ ಕುರ್ಟಿಸ್ ಕ್ಯಾಂಪರ್ ಕೇವಲ 32 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 72 ರನ್ ಬಾರಿಸಿದರೆ, ಮತ್ತೊಂದು ತುದಿಯಲ್ಲಿ ಜಾರ್ಜ್ ಡಾಕ್ರೆಲ್ 27 ಎಸೆತಗಳಲ್ಲಿ 39 ರನ್ ಬಾರಿಸುವ ಮೂಲಕ ಉತ್ತಮ ಸಾಥ್ ನೀಡಿದರು.
T20 World Cup: ಇಂದು ಭಾರತ-ನ್ಯೂಜಿಲೆಂಡ್ ಅಭ್ಯಾಸ ಪಂದ್ಯ
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸ್ಕಾಟ್ಲೆಂಡ್ ತಂಡವು ಕೂಡಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದ ಜಾರ್ಜ್ ಮುನ್ಶಿ ಕೇವಲ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಮತ್ತೋರ್ವ ಆರಂಭಿಕ ಬ್ಯಾಟರ್ ಮೈಕಲ್ ಜೋನ್ಸ್ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಸ್ಕಾಟ್ಲೆಂಡ್ ತಂಡವು ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಜೋನ್ಸ್ 55 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 86 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಮ್ಯಾಥ್ಯೂ ಕ್ರಾಸ್(28), ರಿಚಿ ಬ್ಯಾರಿಂಗ್ಟನ್(37) ಹಾಗೂ ಲೀಕ್ಸ್ ಅಜೇಯ 17 ರನ್ ಬಾರಿಸುವ ಮೂಲಕ ಸ್ಕಾಟ್ಲೆಂಡ್ ತಂಡವು ಸವಾಲಿನ ಮೊತ್ತ ಕಲೆಹಾಕಲು ನೆರವಾದರು.