ಭಾರತದ ವಿರುದ್ಧ ಗೆದ್ದರೂ ಸಂಭ್ರಮಿಸಲಿಲ್ಲ ಪಾಕ್ ಆಟಗಾರರು: ಇಲ್ಲಿದೆ ಕಾರಣ!

Published : Oct 25, 2021, 01:38 PM ISTUpdated : Oct 25, 2021, 01:56 PM IST
ಭಾರತದ ವಿರುದ್ಧ ಗೆದ್ದರೂ ಸಂಭ್ರಮಿಸಲಿಲ್ಲ ಪಾಕ್ ಆಟಗಾರರು: ಇಲ್ಲಿದೆ ಕಾರಣ!

ಸಾರಾಂಶ

* ಪಾಕಿಸ್ತಾನಕ್ಕೆ ಪ್ರಥಮ ಗೆಲುವಿನ ಸಿಹಿ * ಪಾಕಿಸ್ತಾನಕ್ಕೆ 10 ವಿಕೆಟ್‌ ಅಮೋಘ ಗೆಲುವು * ಗೆದ್ದರೂ ಸಂಭ್ರಮಿಸಲಿಲ್ಲ ಪಾಕಿಸ್ತಾನ

ಯುಎಇ(ಅ.25): ವಿಶ್ವಕಪ್‌(World Cup) ಇತಿಹಾಸದಲ್ಲೇ ಭಾರತ ವಿರುದ್ಧ ಪಾಕಿಸ್ತಾನ(Pakistan) ಮೊದಲ ಗೆಲುವು ಸಾಧಿಸಿ ಸಂಭ್ರಮಿಸಿದೆ. ಬರೋಬ್ಬರಿ 29 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯಗೊಂಡಿದೆ. 1992ರಿಂದ ಆರಂಭಗೊಂಡ ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್‌ ಸೆಣಸಾಟದಲ್ಲೇ ಭಾರತವೇ ಇಷ್ಟುವರ್ಷ ಮೇಲುಗೈ ಸಾಧಿಸಿತ್ತು. ಆದರೆ 2021ರ ಟಿ20 ವಿಶ್ವಕಪ್‌ನಲ್ಲಿ(T20 World Cup) ಭಾರತದ ಅಜೇಯ ಓಟಕ್ಕೆ ಪಾಕಿಸ್ತಾನ ತಡೆಯೊಡ್ಡಿದೆ. ಹೀಗಿದ್ದರೂ ಪಾಕಿಸ್ತಾನದ ಆಟಗಾರರು ಮಾತ್ರ ಈ ಐತಿಹಾಸಿಕ ಗೆಲುವನ್ನು ಸಂಭ್ರಮಿಸಲಿಲ್ಲ. 

ಹೌದು ಏಕದಿನ ವಿಶ್ವಕಪ್‌ನಲ್ಲಿ ಇನ್ನೂ ಪಾಕಿಸ್ತಾನ ವಿರುದ್ಧ ಅಜೇಯವಾಗಿ ಉಳಿದಿರುವ ಭಾರತ, ಟಿ20 ವಿಶ್ವಕಪ್‌ನಲ್ಲಿ ಸತತ 5 ಗೆಲುವುಗಳ ಬಳಿಕ ಮೊದಲ ಬಾರಿಗೆ ಸೋಲು ಕಂಡಿತು. ದುಬೈನಲ್ಲಿ ನಡೆದ ಈ ವಿಶ್ವಕಪ್‌ನ ಬಹು ನಿರೀಕ್ಷಿತ ಪಂದ್ಯದಲ್ಲಿ ಪಾಕಿಸ್ತಾನ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿ, ಭಾರತ ಭಾರೀ ಮುಖಭಂಗಕ್ಕೊಳಗಾಗುವಂತೆ ಮಾಡಿತು. ಈ ಗೆಲುವು ಪಾಕಿಸ್ತಾನ ಅಭಿಮಾನಿಗಳನ್ನು ಸಂಭ್ರಮಿಸುವಂತೆ ಮಾಡಿತ್ತು. ಹೀಗಿದ್ದರೂ ಪಾಕಿಸ್ತಾನ ಆಟಗಾರರು ಡ್ರೆಸ್ಸಿಂಗ್ ರೂಮ್‌ನಲ್ಲಿ ಈ ಗೆಲುವಿನ ಸಂಭ್ರಮಾಚರಣೆ ಮಾಡಿಲ್ಲ. ಅಲ್ಲದೇ ತಂಡದ ನಾಯಕ ಬಾಬರ್ ಅಜಾಮ್ ತಂಡದ ಆಟಗಾರರಿಗೆ ಈ ಹಿಂದೆ ಮಾಡಿದ ತಪ್ಪನ್ನು ಮರುಕಳಿಸದಂತೆ ನೋಡಬೇಕು ಎಂಬ ಮಾತನ್ನು ಹೇಳಿದ್ದಾರೆ.

ಹೌದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಪಂದ್ಯದ ಬಳಿಕ, ತಮಡದ ನಾಯಕ ಬಾಬರ್ ಮಾತನಾಡುತ್ತಿರುವ ವಿಡಿಯೋ ಒಂದನ್ನು ಟ್ವಿಟ್ ಮಾಡಿದೆ. ಇದರಲ್ಲಿ ಬಾಬರ್ ಆಟಗಾರರನ್ನು ಕೂರಿಸಿ ಕೆಲ ಮಾತುಗಳನ್ನು ಹೇಳಿದ್ದಾರೆ. ಭಾರತದ ವಿರುದ್ಧದ ಪಂದ್ಯದಲ್ಲಿ ತಂಡದ ಪ್ರದರ್ಶನದ ಬಗ್ಗೆ ಹಾಡಿಹೊಗಳಿದ ನಾಯಕ ಬಾಬರ್ ಈ ಉತ್ತಮ ಪ್ರದರ್ಶನಕ್ಕೆ ಭೇಷ್ ಎಂದಿದ್ದಾರೆ. ನಂತರ ಮಾತನಾಡಿದ ಅವರು, ಇದು ಕೇವಲ ಆರಂಭವಷ್ಟೇ ನಮ್ಮ ಗುರಿ ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿಯುವುದು ಎಂಬುವುದನ್ನು ಮರೆಯಬೇಡಿ ಎಂದಿದ್ದಾರೆ.

ಇದೇ ವೆಳೆ ಆಟಗಾರರ ಬಳಿ ಮನವಿ ಮಾಡಿದ ನಾಯಕ  ಈ ಗೆಲುವಿನಿಂದ ಬೀಗಬೇಡಿ, ಮುಂದಿನ ಪಂದ್ಯಗಳಿಗೆ ಸಜ್ಜಾಗಿ. ನಾವು ಈ ಹಿಂದೆ ಒಂದು ತಪ್ಪು ಮಾಡಿದ್ದೆವು. ಒಂದು ಪಂದ್ಯ ಗೆದ್ದ ಬಳಿಕ ದೊಡ್ಡ ರೀತಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದೆವು. ಬಳಿಕ ಮುಂದಿನ ಪಂದ್ಯ ಸೋತೆವು. ಈ ಬಾರಿ ಆ ರೀತಿ ಆಗಬಾರದು. ಸಂಭ್ರಮ ಕಡಿಮೆ ಮಾಡಿ ಮುಂದಿನ ಪಂದ್ಯದ ಬಗ್ಗೆ ಗಮನ ಹರಿಸಬೇಕು ಎಂದಿದ್ದಾರೆ.

ಶಾಹೀನ್‌ ಶಾಕ್‌!:

ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟಭಾರತಕ್ಕೆ ಎಡಗೈ ವೇಗಿ ಶಾಹೀನ್‌ ಅಫ್ರಿದಿ ಆಘಾತ ನೀಡಿದರು. ತಾವಾಡಿರುವ ಮೂರನೇ ಒಂದು ಭಾಗದ ಪಂದ್ಯಗಳಲ್ಲಿ ಮೊದಲ ಓವರಲ್ಲೇ ವಿಕೆಟ್‌ ಕಿತ್ತ ದಾಖಲೆ ಹೊಂದಿರುವ ಅಫ್ರಿದಿ, ಈ ಪಂದ್ಯದಲ್ಲೂ ತಮ್ಮ ಕಲೆ ಪ್ರದರ್ಶಿಸಿದರು. ರೋಹಿತ್‌(00) ಮೊದಲ ಓವರ್‌ನ 4ನೇ ಎಸೆತದಲ್ಲಿ ಔಟಾದರು. ತಮ್ಮ ಆರಂಭಿಕ ಜೊತೆಗಾರ ಔಟಾಗುತ್ತಿದ್ದಂತೆ ಒತ್ತಡಕ್ಕೆ ಸಿಲುಕಿದ ಕೆ.ಎಲ್‌.ರಾಹುಲ್‌(03) ಅಫ್ರಿದಿಗೆ 2ನೇ ಬಲಿಯಾದರು. 6 ರನ್‌ಗೆ ಭಾರತ 2 ವಿಕೆಟ್‌ ಕಳೆದುಕೊಂಡಿತು.

3ನೇ ಓವರ್‌ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್‌ ಸಿಕ್ಸರ್‌ ಬಾರಿಸಿ ಒತ್ತಡ ಇಳಿಸಿದರು. ಈ ವಿಶ್ವಕಪ್‌ನಲ್ಲಿ ಭಾರತ ಪರ ಮೊದಲ ಸಿಕ್ಸರ್‌, ಬೌಂಡರಿ ಬಾರಿಸಿದ ಹಿರಿಮೆಗೆ ಪಾತ್ರರಾದ ಸೂರ್ಯ, ತಂಡ ಚೇತರಿಸಿಕೊಳ್ಳುತ್ತಿದೆ ಎನ್ನುವಷ್ಟರಲ್ಲಿ ಔಟಾಗಿ ಹೊರನಡೆದರು. ಪವರ್‌-ಪ್ಲೇ ಮುಕ್ತಾಯದ ವೇಳೆಗೆ ಭಾರತ 3 ವಿಕೆಟ್‌ ನಷ್ಟಕ್ಕೆ 36 ರನ್‌ ಗಳಿಸಿತು.

ಕೊಹ್ಲಿ ಆಸರೆ:

ವಿರಾಟ್‌ ಕೊಹ್ಲಿ ತಾವೇಕೆ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು. ಬೆಂಕಿಯುಂಡೆಗಳನ್ನು ಉಗುಳುತ್ತಿದ್ದ ಪಾಕಿಸ್ತಾನದ ವೇಗಿಗಳ ಎದುರು ಎದೆಯೊಡ್ಡಿ ನಿಂತ ಕೊಹ್ಲಿ, ಪಂತ್‌ ಜೊತೆ ಸೇರಿ 4ನೇ ವಿಕೆಟ್‌ಗೆ ಉತ್ತಮ ಜೊತೆಯಾಟವಾಡಿದರು. 10 ಓವರ್‌ ಮುಕ್ತಾಯದ ವೇಳೆಗೆ 60 ರನ್‌ ಗಳಿಸಿದ ಭಾರತ, 12ನೇ ಓವರಲ್ಲಿ ಸ್ಫೋಟಕ ಆಟಕ್ಕಿಳಿಯುವ ಸುಳಿವು ನೀಡಿತು.

ಹಸನ್‌ ಅಲಿ ಎಸೆದ 12ನೇ ಓವರಲ್ಲಿ 15 ರನ್‌ ಕಲೆಹಾಕಿದ ಭಾರತ, 13ನೇ ಓವರಲ್ಲಿ ಪಂತ್‌(39) ವಿಕೆಟ್‌ ಕಳೆದುಕೊಂಡ ಬಳಿಕ ಮತ್ತೆ ಮಂಕಾಯಿತು. ಹೋರಾಟ ಮುಂದುವರಿಸಿದ ಕೊಹ್ಲಿ 45 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜಡೇಜಾ(13) ಪರಿಣಾಮಕಾರಿ ಇನ್ನಿಂಗ್ಸ್‌ ಕಟ್ಟಲಿಲ್ಲ. 18ನೇ ಓವರಲ್ಲಿ ಕೊಹ್ಲಿ(57) ಔಟಾದರು. ಹಾರ್ದಿಕ್‌(11) ನಿರೀಕ್ಷೆ ಹುಸಿಗೊಳಿಸಿದ ಕಾರಣ ಭಾರತ 7 ವಿಕೆಟ್‌ಗೆ 151 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಪಾಕಿಸ್ತಾನ ಅತ್ಯುತ್ತಮ ಬೌಲಿಂಗ್‌ ಹಾಗೂ ಅಷ್ಟೇ ಉತ್ತಮವಾದ ಕ್ಷೇತ್ರರಕ್ಷಣೆಯಿಂದ ಭಾರತ ದೊಡ್ಡ ಮೊತ್ತ ಗಳಿಸದಂತೆ ನಿಯಂತ್ರಿಸಿತು.

ಟರ್ನಿಂಗ್‌ ಪಾಯಿಂಟ್‌

ಪವರ್‌-ಪ್ಲೇನಲ್ಲಿ ಪಾಕಿಸ್ತಾನ ವಿಕೆಟ್‌ ಕಳೆದುಕೊಳ್ಳದೆ 43 ರನ್‌ ಗಳಿಸಿತು. ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಲು ಬಿಡದ ಬಾಬರ್‌ ಹಾಗೂ ರಿಜ್ವಾನ್‌, ವರುಣ್‌ರ ಅಂತಿಮ ಓವರಲ್ಲಿ 18 ರನ್‌ ಚಚ್ಚಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!
ಆ ಒಂದು ಫೋಟೋ: ಪಾಪರಾಜಿಗಳ ಮೇಲೆ ಹಾರ್ದಿಕ್ ಪಾಂಡ್ಯ ಕೆಂಡಾಮಂಡಲ!