
ಶಾರ್ಜಾ(ಸೆ.08): 2022ನೇ ಸಾಲಿನ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ ತಂಡಗಳ ನಡುವಿನ ಜಿದ್ದಾಜಿದ್ದಿನ ಕಾದಾಟಕ್ಕೆ ಶಾರ್ಜಾ ಕ್ರಿಕೆಟ್ ಮೈದಾನ ಸಾಕ್ಷಿಯಾಗಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು 4 ಎಸೆತಗಳು ಬಾಕಿ ಇರುವಂತೆಯೇ ಒಂದು ವಿಕೆಟ್ ರೋಚಕ ಜಯ ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಆಫ್ಘಾನಿಸ್ತಾನ ಎದುರು ಪಾಕಿಸ್ತಾನ ಗೆಲ್ಲಲು ಕೊನೆಯ ಓವರ್‌ನಲ್ಲಿ 11 ರನ್‌ಗಳ ಅಗತ್ಯವಿತ್ತು. ಪಾಕಿಸ್ತಾನದ ನಸೀಂ ಶಾ ಕೊನೆಯ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಆಕರ್ಷಕ ಸಿಕ್ಸರ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ ಫೈನಲ್ ಓವರ್ ಡ್ರಾಮಾ ನಡೆಯುವ ಮುನ್ನ, 19ನೇ ಓವರ್‌ನ 5ನೇ ಎಸೆತದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡವು ಸ್ಪೋಟಕ ಬ್ಯಾಟರ್ ಆಸಿಫ್ ಅಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಹಮದ್ ಮಲಿಕ್ 4ನೇ ಎಸೆತದಲ್ಲಿ ಸಿಕ್ಸರ್ ಚಚ್ಚಿದ್ದ ಆಸಿಫ್ ಅಲಿ, 5ನೇ ಎಸೆತದಲ್ಲಿ ಕರೀಂ ಜನ್ನತ್‌ಗೆ ಕ್ಯಾಚಿತ್ತು ಪೆವಿಲಿಯನ್ನತ್ತ ವಾಪಾಸಾಗುತ್ತಿದ್ದರು. ಈ ಸಂದರ್ಭದಲ್ಲಿ ವಿಕೆಟ್ ಕಬಳಿಸಿದ ಖಷಿಯಲ್ಲಿ ಅಹಮದ್ ಮಲಿಕ್ ಸಂಭ್ರಮಾಚರಣೆ ಮಾಡುತ್ತಿದ್ದ ವೇಳೆ ಆಸಿಫ್ ಅಲಿ ಪಕ್ಕದಲ್ಲೇ ಇದ್ದ ಅಹಮದ್ ಮಲಿಕ್‌ಗೆ ಬ್ಯಾಟ್‌ನಿಂದ ಬಾರಿಸಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಆಫ್ಘಾನ್ ಆಟಗಾರರು ಮಧ್ಯ ಪ್ರವೇಶಿಸಿ ಗಲಾಟೆಯನ್ನು ತಣ್ಣಗಾಗಿಸಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡವು ಈ ಗೆಲುವಿನೊಂದಿಗೆ, ಏಷ್ಯಾಕಪ್ ಟೂರ್ನಿಯಿಂದ ಭಾರತ ಹಾಗೂ ಆಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಫೈನಲ್ ರೇಸ್‌ನಿಂದ ಹೊರದಬ್ಬಿದೆ. ಭಾರತ ಕ್ರಿಕೆಟ್ ತಂಡವು ಸೂಪರ್ 4 ಹಂತದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ಎದುರು ಮುಗ್ಗರಿಸಿದೆ. ಇನ್ನು ಆಫ್ಘಾನಿಸ್ತಾನ ತಂಡ ಕೂಡಾ, ಶ್ರೀಲಂಕಾ ಹಾಗೂ ಪಾಕಿಸ್ತಾನ ಎದುರು ಸೋಲು ಕಾಣುವ ಮೂಲಕ ಫೈನಲ್ ಪ್ರವೇಶಿಸುವ ಅವಕಾಶವನ್ನು ಕೈಚೆಲ್ಲಿದೆ. ಇದೀಗ ಶ್ರೀಲಂಕಾ ಹಾಗೂ ಪಾಕಿಸ್ತಾನ ತಂಡಗಳು 2022ನೇ ಸಾಲಿನ ಏಷ್ಯಾಕಪ್ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.
ಇನ್ನು ಆಫ್ಘಾನಿಸ್ತಾನ ಎದುರು ಪಾಕಿಸ್ತಾನ ಕ್ರಿಕೆಟ್ ತಂಡವು ರೋಚಕ ಗೆಲುವು ಸಾಧಿಸುತ್ತಿದ್ದಂತೆಯೇ ಆಫ್ಘಾನಿಸ್ತಾನ ಕ್ರಿಕೆಟ್ ಅಭಿಮಾನಿಗಳು ಸ್ಟೇಡಿಯಂನಲ್ಲಿದ್ದ ಪೀಠೋಪಕರಣಗಳನ್ನು ಕಿತ್ತು ಪಾಕಿಸ್ತಾನ ಅಭಿಮಾನಿಗಳತ್ತ ಬೀಸುವ ಮೂಲಕ ದಾಂಧಲೆ ನಡೆಸಿದ್ದಾರೆ. ಈ ವಿಡಿಯೋಗಳು ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
ಇನ್ನು ಪಾಕಿಸ್ತಾನ ಮಾಜಿ ವೇಗಿ ಶೋಯೆಬ್ ಅಖ್ತರ್ ಈ ಕುರಿತಂತೆ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, 'ಆಫ್ಘಾನ್ ಕ್ರಿಕೆಟ್ ಅಭಿಮಾನಿಗಳು ಈ ರೀತಿ ವರ್ತಿಸಿದ್ದಾರೆ. ಅವರೆಲ್ಲರೂ ಈ ಹಿಂದೆಯೂ ಹಲವಾರು ಬಾರಿ ಇದೇ ರೀತಿಯ ವರ್ತನೆಯನ್ನು ಮಾಡಿದ್ದಾರೆ. ಇದೊಂದು ಪಂದ್ಯವಷ್ಟೇ, ಇದನ್ನು ಒಳ್ಳೆಯ ರೀತಿಯಲ್ಲಿ ನೋಡಬೇಕು. ಕ್ರೀಡೆಯಲ್ಲಿ ನೀವು ಬೆಳೆಯಬೇಕಿದ್ದರೇ ನಿಮ್ಮ ಅಭಿಮಾನಿಗಳು ಹಾಗೂ ನಿಮ್ಮ ಆಟಗಾರರು ಕೆಲವೊಂದು ವಿಚಾರಗಳನ್ನು ಕಲಿತುಕೊಳ್ಳಬೇಕು' ಎಂದು ಟ್ವೀಟ್ ಮೂಲಕ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಶಫಿಕ್ ಸ್ಟಾನಿಕ್‌ಝೈಗೆ ಕಿವಿಮಾತು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.