ಬೊಗಳೊ ನಾಯಿಗೆ ಕಲ್ಲೆಸೆದರೆ ಗುರಿ ತಲುಪಲಾಗಲ್ಲ: ಬುಮ್ರಾ ಹೀಗಂದಿದ್ದೇಕೆ..?

By Naveen Kodase  |  First Published Oct 6, 2022, 5:03 PM IST

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಿಂದ ಜಸ್ಪ್ರೀತ್ ಬುಮ್ರಾ ಔಟ್
ಬೆನ್ನು ನೋವಿನ ಸಮಸ್ಯೆಯಿಂದಾಗಿ ಟೀಂ ಇಂಡಿಯಾದಿಂದ ಹೊರಬಿದ್ದ ಬುಮ್ರಾ
ಟೀಕಾಕಾರರಿಗೆ ಮುಟ್ಟಿ ನೋಡಿಕೊಳ್ಳುವಂತಹ ಪ್ರತಿಕ್ರಿಯೆ ನೀಡಿದ ವೇಗಿ



ನವದೆಹಲಿ(ಅ.06): ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ಭಾರತ ಕ್ರಿಕೆಟ್ ತಂಡದ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಯಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದೀಗ ಹಲವು ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಬುಮ್ರಾಗೆ ಆದಷ್ಟು ಬೇಗ ಗುಣಮುಖರಾಗಿ ಎಂದು ಶುಭ ಹಾರೈಸಿದ್ದಾರೆ. ಇನ್ನು ಕೆಲವು ಟೀಕಾಕಾರರು ಬುಮ್ರಾ ಫಿಟ್ನೆಸ್ ಕುರಿತಂತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಇದೀಗ ಈ ಕುರಿತಂತೆ ಬುಮ್ರಾ, ಗೂಢಾರ್ಥ ಹೊಂದಿರುವ ಸಂದೇಶವನ್ನು ರವಾನಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಇಂಗ್ಲೆಂಡ್ ಪ್ರವಾಸದ ಬಳಿಕ ಫಿಟ್ನೆಸ್ ಕಾರಣದಿಂದಾಗಿ ಏಷ್ಯಾಕಪ್ ಟೂರ್ನಿಯಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ, ಆಸ್ಟ್ರೇಲಿಯಾ ಎದುರು ತವರಿನಲ್ಲಿ ನಡೆದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಕೂಡಿಕೊಂಡಿದ್ದರು. ಆದರೆ ಬುಮ್ರಾ ಎರಡನೇ ಹಾಗೂ ಮೂರನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿದರಾದರೂ ಪರಿಣಾಮಕಾರಿ ದಾಳಿ ನಡೆಸಲು ಯಶಸ್ವಿಯಾಗಿರಲಿಲ್ಲ. ಇನ್ನು ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಗೂ ಮುನ್ನ ಮತ್ತೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹರಿಣಗಳ ಎದುರಿನ ಸರಣಿಯಿಂದ ಹೊರಬಿದ್ದಿದ್ದರು. ಇದಾದ ಬಳಿಕ ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್ ಅಕಾಡೆಮಿಗೆ ತೆರಳಿದ್ದರಾದರೂ, ಮತ್ತೆ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಕೂಡಿಕೊಳ್ಳಲು ಸಾಧ್ಯವಾಗಿರಲಿಲ್ಲ.

Latest Videos

undefined

ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್ ಟೂರ್ನಿಗೆ ಅಲಭ್ಯರಾಗಿದ್ದಾರೆಂದು ಬಿಸಿಸಿಐ ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆಯೇ ಹಲವು ನೆಟ್ಟಿಗರು ಬಲಗೈ ವೇಗಿಯ ಮೇಲೆ ಸಾಮಾಜಿಕ ಜಾಲತಾಣಗಳ ಮೂಲಕ ಬೇಸರ ಹೊರಹಾಕಿದ್ದರು. ಹಲವು ನೆಟ್ಟಿಗರು, ರಾಷ್ಟ್ರೀಯ ಕೆಲಸಕ್ಕೆ ಗೈರು, ಐಪಿಎಲ್ ಬಂದ್ರೆ ಹಾಜರ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದರು.

2022ರಲ್ಲಿ ಜಸ್ಪ್ರೀತ್ ಬುಮ್ರಾ, ಏಕದಿನ, ಟೆಸ್ಟ್ ಹಾಗೂ ಟಿ20 ಭಾರತ ಪರ ಕೇವಲ 15 ಪಂದ್ಯಗಳನ್ನಷ್ಟೇ ಆಡಿದ್ದಾರೆ. 2016ರಿಂದೀಚೆಗೆ ಐಪಿಎಲ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ಪರ ಜಸ್ಪ್ರೀತ್ ಬುಮ್ರಾ ಬಹುತೇಕ ಎಲ್ಲಾ ಪಂದ್ಯಗಳನ್ನು ಆಡಿದ್ದಾರೆ. 

T20 World Cup: ಚುಟುಕು ಕ್ರಿಕೆಟ್‌ ವಿಶ್ವಕಪ್ ಆಡಲು ಆಸ್ಟ್ರೇಲಿಯಾಗೆ ಹಾರಿದ ಟೀಂ ಇಂಡಿಯಾ

ಇದೀಗ ತಮ್ಮ ವಿರುದ್ದ ಟೀಕೆ ಮಾಡುತ್ತಿರುವ ನೆಟ್ಟಿಗರ ವಿರುದ್ದ ಗೂಢಾರ್ಥದಲ್ಲಿ ತಮ್ಮ ಬೇಸರವನ್ನು ಹೊರಹಾಕಿದ್ದಾರೆ. ಇನ್‌ಸ್ಟಾ ಸ್ಟೋರಿಯಲ್ಲಿ ಜಸ್ಪ್ರೀತ್ ಬುಮ್ರಾ, ನೀವು ಸಾಗುವ ದಾರಿಯಲ್ಲಿ ನಾಯಿಗಳು ಬೊಗಳುತ್ತವೆ ಎಂದು ಅವಕ್ಕೆ ಕಲ್ಲು ಹೊಡೆಯಲು ಹೋದರೆ ನೀವೆಂದಿಗೂ ನಿಮ್ಮ ಗುರಿ ತಲುಪಲಾರಿರಿ ಎನ್ನುವ ಪೋಸ್ಟರ್‌ವೊಂದನ್ನು ಶೇರ್ ಮಾಡಿದ್ದಾರೆ. ಈ ಮೂಲಕ ಟೀಕಾಕಾರರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. 

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 23ರಂದು ಬದ್ದ ಎದುರಾಳಿ ಪಾಕಿಸ್ತಾನ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಮೆಲ್ಬೊರ್ನ್‌ ಕ್ರಿಕೆಟ್ ಸ್ಟೇಡಿಯಂ ಆತಿಥ್ಯವನ್ನು ವಹಿಸಲಿದೆ. ಸೂಪರ್ 12 ಹಂತದ ಪಂದ್ಯಗಳು ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ.

click me!