ನಾಟ್‌ವೆಸ್ಟ್‌ ಸರಣಿ ಗೆಲುವಿಗೆ 19 ವರ್ಷ; ನೆನಪಿದೆಯಾ ದಾದಾ ಖದರ್‌..?

By Suvarna NewsFirst Published Jul 13, 2021, 3:18 PM IST
Highlights

* ಟೀಂ ಇಂಡಿಯಾ ನಾಟ್‌ವೆಸ್ಟ್‌ ಸರಣಿ ಗೆಲುವಿಗೆ 19 ವರ್ಷ ಭರ್ತಿ

* ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್‌ಗೆ ಸೋಲುಣಿಸಿ ಸರಣಿ ಗೆದ್ದಿದ್ದ ಸೌರವ್ ಪಡೆ

* ಲಾರ್ಡ್ಸ್‌ ಬಾಲ್ಕನಿಯಲ್ಲಿ ಸೌರವ್ ಗಂಗೂಲಿ ತಮ್ಮ ಶರ್ಟ್‌ ಬಿಚ್ಚಿ ಗಾಳಿಯಲ್ಲಿ ತೂರಿ ಸಂಭ್ರಮಿಸಿದ್ದರು.

ನವದೆಹಲಿ(ಜು.13): ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿಯಬಲ್ಲ ಕೆಲವೇ ಕೆಲವು ಅಪರೂಪದ ಗೆಲುವುಗಳಲ್ಲಿ ಇಂಗ್ಲೆಂಡ್ ವಿರುದ್ದದ ನಾಟ್‌ವೆಸ್ಟ್‌ ಸರಣಿ ಗೆಲುವು ಕೂಡಾ ಒಂದು. ಜುಲೈ 13, 2002ರಲ್ಲಿ ಲಾರ್ಡ್ಸ್‌ ಮೈದಾನದಲ್ಲಿ ನಡೆದ ನಾಟ್‌ವೆಸ್ಟ್‌ ಫೈನಲ್‌ ಪಂದ್ಯದಲ್ಲಿ ಸೌರವ್ ಗಂಗೂಲಿ ನೇತೃತ್ವದ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿತ್ತು. ಇದರ ಬೆನ್ನಲ್ಲೇ ದಾದಾ ಲಾರ್ಡ್ಸ್‌ ಬಾಲ್ಕನಿಯಲ್ಲಿ ತಮ್ಮ ಜೆರ್ಸಿ ಬೀಸಿ ಕುಣಿದು ಕುಪ್ಪಳಿಸಿದ್ದರು. ಆ ಸ್ಮರಣೀಯ ಗೆಲುವಿಗೀಗ 19 ವರ್ಷ ಭರ್ತಿ.

ಹೌದು, ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ಆರಂಭಿಕ ಬ್ಯಾಟ್ಸ್‌ಮನ್‌ ಮಾರ್ಕ್‌ ತ್ರೆಸ್ಕೋತಿಕ್ ಹಾಗೂ ನಾಯಕ ನಾಸೀರ್ ಹುಸೈನ್‌ ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 325 ರನ್‌ ಕಲೆಹಾಕಿತ್ತು. ಈ ಕಠಿಣ ಗುರಿ ಬೆನ್ನತ್ತಿದ್ದ ಭಾರತ ತಂಡವು ಒಂದು ಹಂತದಲ್ಲಿ 5 ವಿಕೆಟ್‌ ಕಳೆದುಕೊಂಡು ಕೇವಲ 146 ರನ್‌ ಬಾರಿಸಿ ಸೋಲಿನತ್ತ ಮುಖ ಮಾಡಿತ್ತು. ಆ ಮೇಲೆ ನಡೆದದ್ದು ಅಕ್ಷರಶಃ ಪವಾಡ. ಯುವರಾಜ್ ಸಿಂಗ್ ಹಾಗೂ ಮೊಹಮ್ಮದ್ ಕೈಫ್‌ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನದ ಮೂಲಕ ಟೀಂ ಇಂಡಿಯಾಗೆ ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. 

in 2002 📍 Lord's, London

A moment to remember for as the -led unit beat England to win the NatWest Series Final. 🏆 👏 pic.twitter.com/OapFSWe2kk

— BCCI (@BCCI)

ಇಂಗ್ಲೆಂಡ್‌ ನೀಡಿದ್ದ ಸವಾಲಿನ ಗುರಿ ಬೆನ್ನತ್ತಿದ ಭಾರತ ಕ್ರಿಕೆಟ್ ತಂಡಕ್ಕೆ ನಾಯಕ ಸೌರವ್ ಗಂಗೂಲಿ ಹಾಗೂ ವಿರೇಂದ್ರ ಸೆಹ್ವಾಗ್ ಶತಕದ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಮೊದಲ ವಿಕೆಟ್‌ಗೆ ಈ ಜೋಡಿ 106 ರನ್‌ ಕಲೆಹಾಕಿಕೊಟ್ಟಿತ್ತು. ಗಂಗೂಲಿ 43 ಎಸೆತಗಳಲ್ಲಿ 60 ಚಚ್ಚಿ ವಿಕೆಟ್ ಒಪ್ಪಿಸಿದರೆ, ಮರು ಓವರ್‌ನಲ್ಲೇ ವಿರೇಂದ್ರ ಸೆಹ್ವಾಗ್ ಸಹಾ 45 ರನ್‌ ಬಾರಿಸಿ ಪೆವಿಲಿಯನ್ ಸೇರಿದ್ದರು. ಟೀಂ ಇಂಡಿಯಾ 40 ರನ್ ಅಂತರದಲ್ಲಿ ಅಂದರೆ 146 ರನ್‌ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಐವರು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ ಪರೇಡ್ ನಡೆಸಿದ್ದರು.

ಕ್ರಿಸ್ ಗೇಲ್‌ ಅಬ್ಬರ, ಆಸೀಸ್‌ ಎದುರು ಟಿ20 ಸರಣಿ ವಿಂಡೀಸ್ ಪಾಲು

ಯುವಿ-ಕೈಫ್‌ ಜುಗಲ್ಬಂದಿ: ಈ ವೇಳೆ ಆರನೇ ವಿಕೆಟ್‌ಗೆ ಜತೆಯಾದ ಯುಜರಾಜ್ ಸಿಂಗ್ ಹಾಗೂ ಮೊಹಮ್ಮದ್‌ ಕೈಫ್‌ 106 ಎಸೆತಗಳಲ್ಲಿ 120 ರನ್ ಬಾರಿಸುವ ಮೂಲಕ ತಂಡ ಗೆಲುವಿನ ಹಳಿಗೆ ಮರಳುವಂತೆ ಮಾಡಿದರು. ಯುವಿ 63 ಎಸೆತಗಳಲ್ಲಿ 69 ರನ್ ಚಚ್ಚಿ ಪಾಲ್ ಕಾಲಿಂಗ್‌ವುಡ್‌ಗೆ ವಿಕೆಟ್ ಒಪ್ಪಿಸಿದರು. ಮತ್ತೊಂದು ತುದಿಯಲ್ಲಿ ನೆಲಕಚ್ಚಿ ಆಡಿದ ಕೈಫ್‌ 75 ಎಸೆತಗಳಲ್ಲಿ ಅಜೇಯ 87 ರನ್‌ ಸಿಡಿಸುವ ಮೂಲಕ ಭಾರತ ತಂಡವು ಕೊನೆಯ ಓವರ್‌ನಲ್ಲಿ 2 ವಿಕೆಟ್‌ಗಳ ಗೆಲುವು ದಾಖಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳಿಗೆ ಚೀಯರ್ ಅಪ್‌ ಮಾಡಿ, ಪ್ರತಿದಿನ ಭಾರತೀಯ ಒಲಿಂಪಿಕ್ಸ್‌ ಜೆರ್ಸಿ ಪಡೆಯಿರಿ. ಒಲಿಂಪಿಕ್ಸ್‌ ಕ್ವಿಜ್‌ನಲ್ಲಿ ಪಾಲ್ಗೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ.

click me!