ಆಸ್ಟ್ರೇಲಿಯಾ ತಂಡದಲ್ಲಿ ಹೇಡಿಗಳಿಲ್ಲ: ಕಾಂಗರೂ ನಾಯಕ ಪ್ಯಾಟ್ ಕಮಿನ್ಸ್‌ ಹೀಗಂದಿದ್ದೇಕೆ..?

By Naveen KodaseFirst Published Nov 29, 2022, 5:03 PM IST
Highlights

ಮಾಜಿ ಕೋಚ್ ಜಸ್ಟಿನ್ ಲ್ಯಾಂಗರ್‌ ವಿರುದ್ದ ಸಿಡಿದೆದ್ದ ಪ್ಯಾಟ್ ಕಮಿನ್ಸ್‌
ಆಸ್ಟ್ರೇಲಿಯಾ ತಂಡದಲ್ಲಿ ವಿಷಯ ಲೀಕ್ ಮಾಡುವ ಹೇಡಿಗಳಿದ್ದಾರೆ ಎಂದಿದ್ದ ಲ್ಯಾಂಗರ್
ತಮ್ಮ ತಂಡದಲ್ಲಿ ಯಾರೂ ಹೇಡಿಗಳಿಲ್ಲ ಎಂದು ಕೌಂಟರ್ ಕೊಟ್ಟ ನಾಯಕ ಕಮಿನ್ಸ್‌

ಮೆಲ್ಬರ್ನ್‌(ನ.29): ಆಸ್ಟ್ರೇಲಿಯಾದ ಮಾಜಿ ಕೋಚ್ ಜಸ್ಟಿನ್ ಲ್ಯಾಂಗರ್‌ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್‌, ಆಸ್ಟ್ರೇಲಿಯಾ ತಂಡದಲ್ಲಿ ಯಾರೂ ಹೇಡಿಗಳಿಲ್ಲ ಎಂದು ಕಿಡಿಕಾರಿದ್ದಾರೆ. ವೆಸ್ಟ್‌ ಇಂಡೀಸ್ ಎದುರಿನ ಸರಣಿಗೂ ಮುನ್ನ ಜಸ್ಟಿನ್ ಲ್ಯಾಂಗರ್ ಮಾಡಿರುವ ಆರೋಪವು ತಂಡದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಜಸ್ಟಿನ್ ಲ್ಯಾಂಗರ್‌ ಸ್ಪಷ್ಟಪಡಿಸಿದ್ದಾರೆ. 

ಕಳೆದ ವಾರವಷ್ಟೇ ಮಾಜಿ ಹೆಡ್ ಕೋಚ್ ಜಸ್ಟಿನ್ ಲ್ಯಾಂಗರ್, ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಕೆಲವು ಹೇಡಿಗಳಿದ್ದು, ಅವರು ಡ್ರೆಸ್ಸಿಂಗ್ ರೂಂನಲ್ಲಿ ನಡೆಯುತ್ತಿದ್ದ ಚಟುವಟಿಗಳನ್ನು ಹೊರಗಡೆ ಲೀಕ್ ಮಾಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಮಿನ್ಸ್‌, 'ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಯಾರೂ ಹೇಡಿಗಳಿಲ್ಲ, ಹಿಂದೆಯೂ ಇರಲಿಲ್ಲ' ಎಂದು ಖಡಕ್ ಆಗಿಯೇ ತಿರುಗೇಟು ನೀಡಿದ್ದಾರೆ.

ನಾನಂತೂ ಯಾವುದೇ ಖಾಸಗಿ ಚರ್ಚೆಗಳನ್ನು ಬಹಿರಂಗ ಮಾಡಿಲ್ಲ. ಆದರೆ ಮೈದಾನದಾಚೆಗಿನ ಕೆಲವು ಚಟುವಟಿಕೆಗಳಿಂದ ನಮಗೆ ಬೇಸರವನ್ನುಂಟು ಮಾಡುತ್ತದೆ. ಹಾಗಂತ ಇದು ತಂಡದ ಪ್ರದರ್ಶನದ ಮೇಲೆ ಯಾವುದೇ ರೀತಿಯ ಪರಿಣಾಮಗಳು ಬೀರುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

52 ವರ್ಷದ ಮಾಜಿ ಕ್ರಿಕೆಟಿಗ ಜಸ್ಟಿನ್ ಲ್ಯಾಂಗರ್‌ ಅವರ ಕೋಚ್ ಶೈಲಿಯ ಕುರಿತಂತೆ ಹಿರಿಯ ಆಟಗಾರರಾದ ಆರೋನ್ ಫಿಂಚ್, ಪ್ಯಾಟ್ ಕಮಿನ್ಸ್‌ ಹಾಗೂ ಮಾಜಿ ಟೆಸ್ಟ್ ನಾಯಕ ಟಿಮ್ ಪೈನ್ ತಮ್ಮ ಅಸಮಾಧಾನ ಹೊರಹಾಕಿದ್ದರು. 

ನನ್ನ ಪ್ರಕಾರ ಅವರು ಆ ರೀತಿ ಆಲೋಚಿಸಿದ್ದರು ಎಂದು ಭಾವಿಸಿದ್ದೇನೆ, ಅದಕ್ಕೆ ನಾನೀಗ ಸ್ಪಷ್ಟನೆ ನೀಡಿದ್ದೇನೆ. ಅವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಆದರೆ ಕಳೆದ 12 ತಿಂಗಳಿನಲ್ಲಿ ನಮ್ಮ ತಂಡವು ತೋರಿದ ಪ್ರದರ್ಶನದ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ. ಆಟಗಾರರು ತಲೆ ಎತ್ತಿ ನಡೆಯುವಂತ ಪ್ರದರ್ಶನ ನೀಡಿದ್ದಾರೆ ಎಂದು ಪ್ಯಾಟ್ ಕಮಿನ್ಸ್‌, ಕಾಂಗರೂ ಪಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಯು ಜಸ್ಟಿನ್‌ ಲ್ಯಾಂಗರ್ ಕೋಚ್ ಆಗಿ ಮುಂದುವರೆಯಲು ಆರು ತಿಂಗಳ ಮಟ್ಟಿಗಷ್ಟೇ ಒಪ್ಪಂದ ನವೀಕರಿಸಲು ಮುಂದಾಗಿತ್ತು. ಜಸ್ಟಿನ್ ಲ್ಯಾಂಗರ್ ಮಾರ್ಗದರ್ಶನದಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ಎದುರು 4-0 ಅಂತರದಲ್ಲಿ ಆ್ಯಷಸ್ ಸರಣಿ ಜಯಿಸಿತ್ತು. ಇದಾದ ಬಳಿಕ ಅದೇ ವರ್ಷ 2021ರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಜಯಿಸಿತ್ತು. ಹೀಗಿದ್ದೂ ಕೇವಲ 6 ತಿಂಗಳಿಗೆ ಆಸ್ಟ್ರೇಲಿಯಾ ಕೋಚ್ ಅವಧಿ ವಿಸ್ತರಿಸಿದ್ದು ಲ್ಯಾಂಗರ್‌ ಅಸಮಾಧಾನಕ್ಕೆ ಕಾರಣವಾಗಿತ್ತು.

ಇದರ ಬೆನ್ನಲ್ಲೇ ಕಳೆದ ವಾರ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ್ದ ಜಸ್ಟಿನ್ ಲ್ಯಾಂಗರ್, ಎಲ್ಲರೂ ನೋಡುವುದಕ್ಕೆ ಚೆನ್ನಾಗಿಯೇ ಇದ್ದಂತೆ ಕಾಣುತ್ತಾರೆ. ಆದರೆ ಕೆಲವು ವಿಚಾರಗಳನ್ನು ಓದಿದಾಗ ಅದರಲ್ಲಿನ ಅರ್ಧದಷ್ಟು ವಿಚಾರಗಳು ಹೇಗೆ ಎಲ್ಲರಿಗೂ ಗೊತ್ತಾಯಿತು ಎನ್ನುವುದೇ ತಿಳಿಯುತ್ತಿರಲಿಲ್ಲ. ಹಲವಾರು ಪತ್ರಕರ್ತರು, ಕೆಲವು ಮೂಲಗಳ ಪ್ರಕಾರ ಎಂದು ಉಲ್ಲೇಖಿಸಿ ಸುದ್ದಿ ಪ್ರಕಟಿಸುತ್ತಿದ್ದರು, ನಾನು ಹೇಳುವುದೇನೆಂದರೇ ಅದನ್ನು ಮೂಲಗಳು ಎಂದು ಕರೆಯಬೇಡಿ ಬದಲಾಗಿ ಹೇಡಿಗಳು ಹೇಳಿದ್ದಾರೆಂದು ಬರೆಯಿರಿ ಎಂದು ಲ್ಯಾಂಗರ್‌ ಹೇಳಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

click me!