India Vs New Zealand: ಇಂದಿನಿಂದ ದ್ರಾವಿಡ್‌-ರೋಹಿತ್‌ ಯುಗ ಆರಂಭ!

By Kannadaprabha News  |  First Published Nov 17, 2021, 6:29 AM IST

*NZ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ ಜೈಪುರದಲ್ಲಿ ಚಾಲನೆ
*ಭಾರತಕ್ಕೆ ಟಿ20 ವಿಶ್ವಕಪ್‌ನ ಕಹಿ ನೆನಪು ಮರೆಯುವ ಗುರಿ
*2022ರ ಟಿ20 ವಿಶ್ವಕಪ್‌ಗೆ ಶುರುವಾಗಲಿದೆ ಭಾರತದ ತಯಾರಿ
*ನೂತನ ಕೋಚ್‌ ದ್ರಾವಿಡ್‌, ನಾಯಕ ರೋಹಿತ್‌ಗೆ ಮೊದಲ ಸವಾಲು
 


ಜೈಪುರ(ನ.17): ಯುಎಇನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ (T20 World cup) ಕಠಿಣ ಪಾಠಗಳನ್ನು ಕಲಿತ ಟೀಂ ಇಂಡಿಯಾ (Team India), 2022ರ ಟಿ20 ವಿಶ್ವಕಪ್‌ಗೆ ಹೊಸದಾಗಿ ಸಿದ್ಧತೆ ಆರಂಭಿಸಲು ಸಜ್ಜಾಗಿದೆ. ಟಿ20 ವಿಶ್ವಕಪ್‌ ರನ್ನರ್‌-ಅಪ್‌ ನ್ಯೂಜಿಲೆಂಡ್‌ (New Zealand) ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ ಜೈಪುರದಲ್ಲಿ ಇಂದು ಚಾಲನೆ ಸಿಗಲಿದೆ. ನೂತನ ಪೂರ್ಣಾವಧಿ ನಾಯಕ ರೋಹಿತ್‌ ಶರ್ಮಾ (Rohit Sharma) ಹಾಗೂ ಪ್ರಧಾನ ಕೋಚ್‌ ರಾಹುಲ್‌ ದ್ರಾವಿಡ್‌ (Rahul dravid) ಪಾಲಿಗಿದು ಮೊದಲ ಸವಾಲಾಗಲಿದ್ದು, ಮುಂದಿನ 11 ತಿಂಗಳಲ್ಲಿ ತಂಡ ಸಾಧಿಸಬೇಕಿರುವ ಗೆಲುವಿಗೆ ಮುನ್ನುಡಿ ಬರೆಯಲು ಎದುರು ನೋಡುತ್ತಿದ್ದಾರೆ.

ಈ ಸರಣಿಯಲ್ಲಿ ಭಾರತ ಕೆಲ ಹೊಸ ಪ್ರಯೋಗಗಳಿಗೆ ಕೈಹಾಕಲಿದೆ. ಯುಎಇನಲ್ಲಿ ನಿರಾಸೆ ಮೂಡಿಸಿದ ಆಲ್ರೌಂಡರ್‌ ಹಾರ್ದಿಕ್‌ ಪಾಂಡ್ಯರನ್ನು ತಂಡದಿಂದ ಹೊರಗಿಟ್ಟಿರುವ ಭಾರತ, ಅವರ ಜಾಗದಲ್ಲಿ ವೆಂಕಟೇಶ್‌ ಅಯ್ಯರ್‌ರನ್ನು ಪರೀಕ್ಷಿಸಲು ಮುಂದಾಗಲಿದೆ. ಐಪಿಎಲ್‌ನಲ್ಲಿ ಕೆಕೆಆರ್‌ ತಂಡದಲ್ಲಿ ಮಿಂಚಿದ್ದ ವೆಂಕಿ ಅಯ್ಯರ್‌, ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲೂ ಮಧ್ಯಪ್ರದೇಶ ಪರ ಉತ್ತಮ ಆಟವಾಡಿದ್ದರು. ಐಪಿಎಲ್‌ನಲ್ಲಿ (IPL) ಗಮನಾರ್ಹ ಪ್ರದರ್ಶನ ತೋರಿದ ಋುತುರಾಜ್‌ ಗಾಯಕ್ವಾಡ್‌, ಹರ್ಷಲ್‌ ಪಟೇಲ್‌, ಆವೇಶ್‌ ಖಾನ್‌ಗೆ ಸ್ಥಾನ ನೀಡಲಾಗಿದೆ. ಟಿ20 ವಿಶ್ವಕಪ್‌ ತಂಡದಿಂದ ಹೊರಬಿದ್ದಿದ್ದ ಯಜುವೇಂದ್ರ ಚಹಲ್‌ ತಂಡಕ್ಕೆ ವಾಪಸಾಗಿದ್ದು, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಕಾಯುತ್ತಿದ್ದಾರೆ.

Tap to resize

Latest Videos

undefined

India vs New zealand; ಕ್ರಿಕೆಟಿಗರು ಯಂತ್ರಗಳಲ್ಲ, ವಿಶ್ರಾಂತಿ ಬೇಕೆ ಬೇಕು; ನಾಯಕ ರೋಹಿತ್ ಹೇಳಿಕೆ ಸಂಚಲನ!

ಮೊಹಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ ಅನುಪಸ್ಥಿತಿಯಲ್ಲಿ ಮೊಹಮದ್‌ ಸಿರಾಜ್‌, ಆವೇಶ್‌ಗೆ ತಂಡದ ಆಡಳಿತದ ಗಮನ ಸೆಳೆಯಲು ಉತ್ತಮ ಅವಕಾಶ ಇದಾಗಲಿದೆ. ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ತೋರಿದರೂ ಭುವನೇಶ್ವರ್‌ಗೆ ಕುಮಾರ್‌ಗೆ ಮತ್ತೊಂದು ಅವಕಾಶ ಸಿಕ್ಕಿದೆ.

ಆಸ್ಪ್ರೇಲಿಯಾದಲ್ಲಿ ಮುಂದಿನ ಟಿ20 ವಿಶ್ವಕಪ್‌!

ಮುಂದಿನ ಟಿ20 ವಿಶ್ವಕಪ್‌ ಆಸ್ಪ್ರೇಲಿಯಾದಲ್ಲಿ ನಡೆಯಲಿರುವ ಕಾರಣ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲು ರೋಹಿತ್‌, ದ್ರಾವಿಡ್‌ ಯೋಚಿಸಬಹುದು. ತಂಡದಲ್ಲಿ ರೋಹಿತ್‌ ಸೇರಿ ಐವರು ಆರಂಭಿಕ ಬ್ಯಾಟರ್‌ಗಳಿದ್ದಾರೆ. ಈ ಸರಣಿಯಲ್ಲಿ ರೋಹಿತ್‌ ಜೊತೆ ಕೆ.ಎಲ್‌.ರಾಹುಲ್‌ ಇನ್ನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ. ಆದರೆ ಇಶಾನ್‌ ಕಿಶನ್‌, ಋುತುರಾಜ್‌ ಗಾಯಕ್ವಾಡ್‌ ಸಹ ಆರಂಭಿಕರಾಗಿ ಆಡಲು ಎದುರು ನೋಡಲಿದ್ದಾರೆ. ವೆಂಕಟೇಶ್‌ ಅಯ್ಯರ್‌ ಆರಂಭಿಕನಾಗಿ ಯಶಸ್ಸು ಸಾಧಿಸಿದ್ದು, ಮಧ್ಯಮ ಕ್ರಮಾಂಕಕ್ಕೆ ಹೊಂದಿಕೊಳ್ಳಲಿದ್ದಾರೆಯೇ ಎನ್ನುವ ಪ್ರಶ್ನೆಗೂ ಉತ್ತರ ಸಿಗಬೇಕಿದೆ.

Cricket: ಫಿಲ್ಡಿಂಗ್‌ ವೇಳೆ ಡಿಕ್ಕಿ: ಯುವ ಕ್ರಿಕೆಟಿಗನ ತಲೆಗೆ ಬಲವಾದ ಪೆಟ್ಟು!

4ನೇ ಕ್ರಮಾಂಕಕ್ಕೆ ಸೂರ್ಯಕುಮಾರ್‌ ಯಾದವ್‌ಗೆ ಶ್ರೇಯಸ್‌ ಅಯ್ಯರ್‌ರಿಂದ ಪ್ರಬಲ ಪೈಪೋಟಿ ಎದುರಾಗಲಿದೆ. ರಿಷಭ್‌ ಪಂತ್‌ ಮೇಲೂ ಸ್ಥಿರ ಪ್ರದರ್ಶನ ತೋರಬೇಕಾದ ಒತ್ತಡವಿರಲಿದೆ. ಅಕ್ಷರ್‌ ಪಟೇಲ್‌, ಆರ್‌.ಅಶ್ವಿನ್‌, ದೀಪಕ್‌ ಚಹರ್‌ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ಕಿವೀಸ್‌ಗೆ ಕೇನ್‌ ಸೇವೆ ಅಲಭ್ಯ: ಟಿ20 ವಿಶ್ವಕಪ್‌ ಆಡಿದ ಮೂರೇ ದಿನದಲ್ಲಿ ಮತ್ತೊಂದು ಸವಾಲಿಗೆ ನ್ಯೂಜಿಲೆಂಡ್‌ ಸಜ್ಜಾಗಿದೆ. ನಿರಂತರ ಕ್ರಿಕೆಟ್‌ನಿಂದ ದಣಿದಿರುವ ನಾಯಕ ಕೇನ್‌ ವಿಲಿಯಮ್ಸನ್‌ ಟಿ20 ಸರಣಿಯಿಂದ ಹೊರಗುಳಿಯಲು ನಿರ್ಧರಿಸಿದ್ದು, ಟೆಸ್ಟ್‌ ಸರಣಿಗೆ ಅಭ್ಯಾಸ ನಡೆಸಲಿದ್ದಾರೆ. ಕೇನ್‌ ಅನುಪಸ್ಥಿತಿಯಲ್ಲಿ ಟಿಮ್‌ ಸೌಥಿ ತಂಡವನ್ನು ಮುನ್ನಡೆಸಲಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ತೋರಿದ ಪ್ರದರ್ಶನವನ್ನೇ ಕಿವೀಸ್‌ ಮತ್ತೆ ಮುಂದುವರಿಸಲು ಕಾತರಿಸುತ್ತಿದೆ.

ಒಟ್ಟು ಮುಖಾಮುಖಿ: 17

ಭಾರತ: 08

ನ್ಯೂಜಿಲೆಂಡ್‌: 09

ತಂಡಗಳು

ಭಾರತ: ರೋಹಿತ್‌(ನಾಯಕ), ಕೆ.ಎಲ್‌.ರಾಹುಲ್‌, ಋುತುರಾಜ್‌, ಶ್ರೇಯಸ್‌ ಅಯ್ಯರ್‌, ಸೂರ್ಯಕುಮಾರ್‌, ರಿಷಭ್‌ ಪಂತ್‌, ಇಶಾನ್‌ ಕಿಶನ್‌, ವೆಂಕಟೇಶ್‌ ಅಯ್ಯರ್‌, ಯಜುವೇಂದ್ರ ಚಹಲ್‌, ಆರ್‌.ಅಶ್ವಿನ್‌, ಅಕ್ಷರ್‌ ಪಟೇಲ್‌, ಆವೇಶ್‌ ಖಾನ್‌, ಭುವನೇಶ್ವರ್‌ ಕುಮಾರ್‌, ದೀಪಕ್‌ ಚಹರ್‌, ಹರ್ಷಲ್‌ ಪಟೇಲ್‌, ಮೊಹಮದ್‌ ಸಿರಾಜ್‌.

ನ್ಯೂಜಿಲೆಂಡ್‌: ಮಾರ್ಟಿನ್‌ ಗಪ್ಟಿಲ್‌, ಡ್ಯಾರೆಲ್‌ ಮಿಚೆಲ್‌, ಟಿಮ್‌ ಸೀಫರ್ಟ್‌, ಗ್ಲೆನ್‌ ಫಿಲಿಫ್ಸ್‌, ಜೇಮ್ಸ್‌ ನೀಶಮ್‌, ಮಾರ್ಕ್ ಚಾಪ್ಮನ್‌, ಟಿಮ್‌ ಸೌಥಿ(ನಾಯಕ), ಕೈಲ್‌ ಜೇಮಿಸನ್‌, ಮಿಚೆಲ್‌ ಸ್ಯಾಂಟ್ನರ್‌, ಇಶ್‌ ಸೋಧಿ, ಟಾಡ್‌ ಆ್ಯಸ್ಟನ್‌, ಟ್ರೆಂಟ್‌ ಬೌಲ್ಟ್‌, ಲಾಕಿ ಫಗ್ರ್ಯೂಸನ್‌, ಆ್ಯಡಂ ಮಿಲ್ನೆ.

click me!