ICC Spirit of Cricket award 2021: ವರ್ಷದ ಕ್ರೀಡಾಸ್ಪೂರ್ತಿ ಪ್ರಶಸ್ತಿಗೆ ಭಾಜನರಾದ ಡೇರಲ್ ಮಿಚೆಲ್

Suvarna News   | Asianet News
Published : Feb 02, 2022, 04:25 PM IST
ICC Spirit of Cricket award 2021: ವರ್ಷದ ಕ್ರೀಡಾಸ್ಪೂರ್ತಿ ಪ್ರಶಸ್ತಿಗೆ ಭಾಜನರಾದ ಡೇರಲ್ ಮಿಚೆಲ್

ಸಾರಾಂಶ

* ಐಸಿಸಿ ಕ್ರೀಡಾಸ್ಪೂರ್ತಿ ಪ್ರಶಸ್ತಿ ಜಯಿಸಿದ ಡೇರಲ್ ಮಿಚೆಲ್ * ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕ್ರೀಡಾ ಸ್ಪೂರ್ತಿ ಮೆರೆದಿದ್ದ ಕಿವೀಸ್ ಆಟಗಾರ * ಕ್ರೀಡಾ ಸ್ಪೂರ್ತಿ ಪ್ರಶಸ್ತಿ ಜಯಿಸಿದ ನ್ಯೂಜಿಲೆಂಡ್‌ನ 4ನೇ ಆಟಗಾರ ಮಿಚೆಲ್

ದುಬೈ(ಫೆ.02): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಬ್ಯಾಟರ್‌ ಡೇರಲ್ ಮಿಚೆಲ್‌ (Daryl Mitchell) 2021ನೇ ಸಾಲಿನ ಐಸಿಸಿ ವರ್ಷದ ಕ್ರೀಡಾಸ್ಪೂರ್ತಿ ಪ್ರಶಸ್ತಿಗೆ (ICC Spirit of Cricket award for 2021) ಭಾಜನರಾಗಿದ್ದಾರೆ. ಐಸಿಸಿ ಟಿ20 ವಿಶ್ವಕಪ್ (ICC T20 World Cup) ಟೂರ್ನಿಯ ಇಂಗ್ಲೆಂಡ್ ವಿರುದ್ದದ ಸೆಮಿಫೈನಲ್‌ ಪಂದ್ಯದಲ್ಲಿ ಕ್ರೀಡಾಸ್ಪೂರ್ತಿ ಮೆರೆದಿದ್ದ ಡೇರಲ್ ಮಿಚೆಲ್‌ಗೆ ಐಸಿಸಿಯ ಪ್ರತಿಷ್ಠಿತ ಕ್ರೀಡಾಸ್ಪೂರ್ತಿ ಪ್ರಶಸ್ತಿ ಲಭಿಸಿದೆ. ಇದರೊಂದಿಗೆ ಡೇನಿಯಲ್ ವೆಟ್ಟೋರಿ(Daniel Vettori), ಬ್ರೆಂಡನ್ ಮೆಕ್ಕಲಂ (Brendon McCullum) ಹಾಗೂ ಕೇನ್‌ ವಿಲಿಯಮ್ಸನ್ (Kane Williamson) ಬಳಿಕ ಐಸಿಸಿ ಕ್ರೀಡಾ ಸ್ಪೂರ್ತಿ ಪ್ರಶಸ್ತಿ ಜಯಿಸಿದ ನ್ಯೂಜಿಲೆಂಡ್‌ನ ನಾಲ್ಕನೇ ಕ್ರಿಕೆಟಿಗ ಎನ್ನುವ ಕೀರ್ತಿಗೆ ಡೇರಲ್ ಮಿಚೆಲ್ ಪಾತ್ರರಾಗಿದ್ದಾರೆ.

ಯುಎಇನಲ್ಲಿ ನಡೆದ 2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ (New Zealand vs England) ತಂಡಗಳು ಮುಖಾಮುಖಿಯಾಗಿದ್ದವು. ಇಂಗ್ಲೆಂಡ್ ನೀಡಿದ್ದ 167 ರನ್‌ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ತಂಡವು ಗೆಲುವಿನತ್ತ ದಾಪುಗಾಲಿಡುತ್ತಿತ್ತು. ಇಂಗ್ಲೆಂಡ್‌ನ ಸ್ಪಿನ್ನರ್ ಆದಿಲ್ ರಶೀದ್ (Adil Rashid) ಪಂದ್ಯದ 18ನೇ ಓವರ್‌ ಬೌಲಿಂಗ್‌ ಮಾಡುತ್ತಿದ್ದರು. ಸ್ಟ್ರೈಕ್‌ನಲ್ಲಿದ್ದ ಜೇಮ್ಸ್‌ ನೀಶಮ್ ನೇರವಾಗಿ ಚೆಂಡನ್ನು ಬಾರಿಸಿದರು. ಚೆಂಡನ್ನು ಹಿಡಿಯುವ ಯತ್ನದಲ್ಲಿದ್ದ ರಶೀದ್‌ಗೆ ನಾನ್‌ ಸ್ಟ್ರೈಕರ್‌ನಲ್ಲಿದ್ದ ಡೇರಲ್ ಮಿಚೆಲ್ ಅಡ್ಡಿ ಪಡಿಸಿದ್ದರು. ಬಳಿಕ ಒಂದು ರನ್ ಓಡುವ ಅವಕಾಶವಿದ್ದರೂ ಸಹಾ ಡೇರಲ್‌ ಮಿಚೆಲ್‌ ಕ್ರೀಡಾಸ್ಪೂರ್ತಿಯಿಂದಾಗಿ ರನ್‌ ಓಡಿರಲಿಲ್ಲ. ಇದು ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಸೆಮಿಫೈನಲ್ ಪಂದ್ಯದಲ್ಲಿ ಡೇರಲ್ ಮಿಚೆಲ್‌ 47 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 72 ರನ್ ಬಾರಿಸುವ ಮೂಲಕ. ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಐಸಿಸಿ ಕ್ರೀಡಾಸ್ಪೂರ್ತಿ ಪಡೆದುಕೊಂಡ ಬಳಿಕ ಮಾತನಾಡಿದ ಡೇರಲ್ ಮಿಚೆಲ್, ಐಸಿಸಿ ಕ್ರೀಡಾಸ್ಪೂರ್ತಿ ಪ್ರಶಸ್ತಿ ಸಿಕ್ಕಿರುವುದು ನನ್ನ ಪಾಲಿಗೆ ಅತಿದೊಡ್ಡ ಗೌರವದ ಸಂಗತಿಯಾಗಿದೆ. ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಭಾಗವಾಗಿದ್ದಕ್ಕೆ ನಿಜಕ್ಕೂ ಸಂತಸವಾಗುತ್ತಿದೆ. ಇಂಗ್ಲೆಂಡ್ ಎದುರಿನ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್ ಪಂದ್ಯವು ಸಾಕಷ್ಟು ಪೈಪೋಟಿಯಿಂದ ಕೂಡಿತ್ತು. ಪಂದ್ಯ ಮುಕ್ತಾಯಕ್ಕೆ ಕೆಲವೇ ಓವರ್‌ಗಳಿದ್ದಾಗ ಜೇಮ್ಸ್ ನೀಶಮ್ ಲಾಂಗ್ ಆನ್‌ನತ್ತ ಚೆಂಡನ್ನು ಬಾರಿಸಿ ಒಂದು ರನ್ ಗಳಿಸುವ ಯತ್ನದಲ್ಲಿದ್ದರು. ನಾನಾಗ ಚೆಂಡು ಹಿಡಿಯುವ ಯತ್ನದಲ್ಲಿದ್ದ ಆದಿಲ್‌ ರಶೀದ್‌ಗೆ ಅಡ್ಡಿಪಡಿಸಿದೆ ಎಂದೆನಿಸಿ ಒಂದು ರನ್ ಓಡಲು ಮುಂದಾಗಲಿಲ್ಲ ಎಂದು ಡೇರಲ್ ಮಿಚೆಲ್ ಹೇಳಿದ್ದಾರೆ.

ICC ಕೊಟ್ಟ ಅವಾರ್ಡ್‌ಗೆ ವಿರಾಟ್ ಕೊಹ್ಲಿ ಫುಲ್ ಶಾಕ್..!

ಒಂದು ತಂಡವಾಗಿ ನಾವೆಲ್ಲಾ ಆಡುತ್ತಿರುವ ರೀತಿಯ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ. ವೈಯುಕ್ತಿಕವಾಗಿ ಹೇಳಬೇಕೆಂದರೆ, ಅದು ನಿಜಕ್ಕೂ ಕ್ರೀಡಾಸ್ಪೂರ್ತಿಯ ಕ್ಷಣ. ನಾವು ಪಂದ್ಯವನ್ನು ಗೆಲ್ಲಬೇಕು ನಿಜ, ಆದರೆ ಅದು ಒಳ್ಳೆಯ ರೀತಿಯಲ್ಲಿ ಗೆಲ್ಲಬೇಕು. ಹಾಗೂ ನಾವು ಆ ಪಂದ್ಯವನ್ನು ಒಳ್ಳೆಯ ರೀತಿಯಲ್ಲಿಯೇ ಜಯಿಸಿದೆವು ಎಂದು ಡೇರಲ್ ಮಿಚೆಲ್ ಹೇಳಿದ್ದಾರೆ.

ನಾವು ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕೆಂದು ಬಯಸುತ್ತೇವೆ. ಆದರೆ ಕ್ರೀಡಾ ಮೌಲ್ಯಗಳಿಗೆ ವಿರುದ್ದವಾಗಿ ಪಂದ್ಯಗಳನ್ನು ಗೆಲ್ಲಲು ಬಯಸುವುದಿಲ್ಲ. ಕ್ರೀಡೆಯಲ್ಲ ಕ್ರೀಡಾಸ್ಪೂರ್ತಿ ಮುಖ್ಯವಾಗಿರುತ್ತದೆ. ನಾವು ಆಡುವ ರೀತಿಯನ್ನು ಯುವ ಕ್ರಿಕೆಟಿಗರು ನೋಡಿ ಅನುಕರಿಸುತ್ತಿರುತ್ತಾರೆ. ಹೀಗಾಗಿ ಸರಿಯಾದ ರೀತಿಯಲ್ಲಿ ಪಂದ್ಯವನ್ನು ಗೆಲ್ಲಬೇಕು ಹಾಗೂ ಕ್ರೀಡಾಸ್ಪೂರ್ತಿ ಪಾಲಿಸುವ ಮೂಲಕ ಯುವಕರಿಗೆ ಮಾದರಿಯಾಗಬೇಕು ಎಂದು ಡೇರಲ್ ಮಿಚೆಲ್ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ
U19 ಏಷ್ಯಾಕಪ್, 150 ರನ್‌ಗೆ ಪಾಕಿಸ್ತಾನ ಆಲೌಟ್ ಮಾಡಿದ ಟೀಂ ಇಂಡಿಯಾಗೆ 90 ರನ್ ಗೆಲುವು