India Tour Of New Zealand: ಏಕದಿನ, ಟಿ20 ಸರಣಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ

By Santosh NaikFirst Published Nov 15, 2022, 4:44 PM IST
Highlights

ಪ್ರವಾಸಿ ಭಾರತ ತಂಡದ ವಿರುದ್ಧ ಏಕದಿನ ಹಾಗೂ ಟಿ20 ಸರಣಿಗೆ ನ್ಯೂಜಿಲೆಂಡ್‌ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಆಟಗಾರರಾದ ಮಾರ್ಟಿಗ್‌ ಗುಪ್ಟಿಲ್‌ ಹಾಗೂ ವೇಗಿ ಟ್ರೆಂಟ್‌ ಬೌಲ್ಟ್‌ರನ್ನು ಕೈಬಿಡಲಾಗಿದೆ. ಈ ನಡುವೆ ನ್ಯೂಜಿಲೆಂಡ್‌ ತಂಡದ ಕೋಚ್‌ ಗ್ಯಾರಿ ಸ್ಟೀಡ್‌, ಮುಂದೆ ಸಾಕಷ್ಟು ಅಂತಾರಾಷ್ಟ್ರೀಯ ಸರಣಿಗಳು ಇರುವ ಕಾರಣ ಇಬ್ಬರು ಆಟಗಾರರಿಗೆ ತಂಡದ ಬಾಗಿಲು ಮುಚ್ಚಿಲ್ಲ ಎಂದು ಹೇಳಿದ್ದಾರೆ.

ವೆಲ್ಲಿಂಗ್ಟನ್‌ (ನ. 15): ಪ್ರವಾಸಿ ಭಾರತ ತಂಡದ ವಿರುದ್ಧ ನವೆಂಬರ್‌ 18 ರಿಂದ ಆರಂಭವಾಗಲಿರುವ ಏಕದಿನ ಹಾಗೂ ಟಿ20 ಸರಣಿಗೆ ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು ಪ್ರಕಟಿಸಲಾಗಿದ್ದು, ಅನುಭವಿ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗುಪ್ಟಿಲ್‌ ಹಾಗೂ ಟ್ರೆಂಟ್‌ ಬೌಲ್ಟ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ. ಸ್ಫೋಟಕ ಆರಂಭಿಕ ಆಟಗಾರ ಫಿನ್‌ ಆಲೆನ್‌ ಎರಡೂ ತಂಡಗಳಲ್ಲಿ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ವೇಗಿ ಆಡಮ್‌ ಮಿಲ್ನೆ 2017ರ ಬಳಿಕ ಏಕದಿನ ಮಾದರಿಯಲ್ಲಿ ತಂಡಕ್ಕೆ ಮರಳಿದ್ದಾರೆ. ಇದರ ನಡುವೆ ತಂಡದ ಮುಖ್ಯ ಕೋಚ್‌ ಗ್ಯಾರಿ ಸ್ಟೀಡ್‌, ಬೌಲ್ಟ್‌ ಹಾಗೂ ಗುಪ್ಟಿಲ್‌ಗೆ ರಾಷ್ಟ್ರೀಯ ತಂಡದ ಬಾಗಿಲು ಮುಚ್ಚಿಲ್ಲ ಎಂದು ಹೇಳಿದ್ದಾರೆ. ಮುಂದೆ ಸಾಕಷ್ಟು ಅಂತಾರಾಷ್ಟ್ರೀಯ ಕ್ರಿಕೆಟ್‌ ಇದೆ. ಇವರು ತಂಡಕ್ಕೆ ಮರಳಲು ಇನ್ನೂ ಅವಕಾಶವಿದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ನ್ಯೂಜಿಲೆಂಡ್‌ ತಂಡದ ಕೇಂದ್ರೀಯ ಗುತ್ತಿಗೆಯಿಂದಲೂ ಹೊರಬಿದ್ದಿದ್ದ ಟ್ರೆಂಟ್‌ ಬೌಲ್ಟ್‌, ಮುಂದಿನ ವರ್ಷದ ಏಕದಿನ ವಿಶ್ವಕಪ್‌ನಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಮಾರ್ಟಿಗ್‌ ಗುಪ್ಟಿಲ್‌ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನ ತಂಡದಲ್ಲಿ ಇದ್ದರಾದರೂ, ಕಿವೀಸ್‌ ತಂಡ ಡೆವೋನ್‌ ಕಾನ್ವೆ ಹಾಗೂ ಫಿನ್‌ ಅಲೆನ್‌ ಆರಂಭಿಕ ಜೋಡಿಯನ್ನು ಆಡಿಸಲು ತೀರ್ಮಾನ ಮಾಡಿದ್ದರಿಂದ ಗುಪ್ಟಿಲ್‌ ಅವಕಾಶ ಪಡೆದುಕೊಂಡಿರಲಿಲ್ಲ.

ನವೆಂಬರ್‌ 18 ರಂದು ವೆಲ್ಲಿಂಗ್ಟನ್‌ನಲ್ಲಿ ನಡೆಯಲಿರುವ ಟಿ20 ಪಂದ್ಯದೊಂದಿಗೆ ಮೂರು ಪಂದ್ಯಗಳ ಸರಣಿಗೆ ಚಾಲನೆ ಸಿಗಲಿದೆ. ನಂತರದ ಪಂದ್ಯಗಳು ಕ್ರಮವಾಗಿ ಟೌರಂಗಾ ಹಾಗೂ ನೇಪಿಯರ್‌ನಲ್ಲಿ ನವೆಂಬರರ್‌ 20 ಹಾಗೂ 22 ರಂದು ನಡೆಯಲಿದೆ. ನವೆಂಬರ್ 25 ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆಕ್ಲೆಂಡ್‌ನಲ್ಲಿ ಆರಂಭವಾಗಲಿದೆ. 2ನೇ ಪಂದ್ಯಕ್ಕೆ ಹ್ಯಾಮಿಲ್ಟನ್‌ನಲ್ಲಿ ನವೆಂಬರ್‌ 27 ರಂದು ನಡೆಯಲಿದ್ದರೆ, ಅಂತಿಮ ಏಕದಿನ ಪಂದ್ಯ ನವೆಂಬರ್‌ 30 ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ.

ರಾಹುಲ್ ದ್ರಾವಿಡ್‌ಗೆ ರೆಸ್ಟ್‌, ನ್ಯೂಜಿಲೆಂಡ್ ಪ್ರವಾಸಕ್ಕೆ ಲಕ್ಷ್ಮಣ್ ಟೀಂ ಇಂಡಿಯಾ ಹೆಡ್ ಕೋಚ್..!

ಫಿನ್‌ ಅಲೆನ್‌ ತಮ್ಮ ಕ್ರಿಕೆಟ್‌ ಜೀವನದಲ್ಲಿ ಉತ್ತಮ ಆರಂಭ ಪಡೆದುಕೊಂಡಿದ್ದಾರೆ. ಈವರೆಗೂ ಆಡಿರುವ 23 ಟಿ20 ಪಂದ್ಯಗಳಿಂದ 564 ರನ್ ಬಾರಿಸಿದ್ದು ಇದರಲ್ಲಿ ಎರಡು ಅರ್ಧಶತಕಗಳು ಹಾಗೂ ಒಂದು ಶತಕ ಸೇರಿಸಿದೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಆಡಿದ 8 ಪಂದ್ಯಗಳಿಂದ 308 ರನ್‌ ಬಾರಿಸಿದ್ದಾರೆ. ಮದುವೆಯ ಕಾರಣಕ್ಕಾಗಿಸ ಆಲ್ರೌಂಡರ್‌ ಜಿಮ್ಮಿ ನೀಶಾಮ್‌, ಕ್ರೈಸ್ಟ್‌ ಚರ್ಚ್‌ನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯಕ್ಕೆ ಲಭ್ಯರಿರುವುದಿಲ್ಲ. ಹೆನ್ರಿ ನಿಕೋಲಸ್‌ ಈ ಪಂದ್ಯದಲ್ಲಿ ತಂಡದಲ್ಲಿ ಇರಲಿದ್ದಾರೆ. ಬೆನ್ನು ನೋವಿನ ಗಾಯದ ಕಾರಣಕ್ಕಾಗಿ ಬೆನ್‌ ಸೀಯರ್ಸ್‌ ಹಾಗೂ ಕೈಲ್‌ ಜೇಮಿಸನ್‌ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ಎರಡೂ ತಂಡದಿಂದ ಬೌಲ್ಟ್‌ ಹೊರಬಿದ್ದಿರುವ ಕಾರಣ ವೇಗದ ಬೌಲಿಂಗ್‌ ವಿಭಾಗದಲ್ಲಿ ಟಿಮ್‌ ಸೌಥಿ, ಮ್ಯಾಟ್‌ ಹೆನ್ರಿ (ಏಕದಿನಕ್ಕೆ ಮಾತ್ರ), ಲಾಕಿ ಫರ್ಗ್ಯುಸನ್‌, ಬ್ಲೇರ್‌ ಟಿಕ್ನೆರ್‌ ಹಾಗೂ ಆಡಂ ಮಿಲ್ನೆ ಈ ವಿಭಾಗವನ್ನು ನಿಭಾಯಿಸಲಿದ್ದಾರೆ.

ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ಸರಣಿಗೆ ಟೀಂ ಇಂಡಿಯಾ ಪ್ರಕಟ, ಹಾರ್ದಿಕ್‌ಗೆ ನಾಯಕತ್ವ

ಏಕದಿನ ಸರಣಿಗೆ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಡೇರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಟಾಮ್ ಲಥಾಮ್‌ (ವಿ.ಕೀ) ಮ್ಯಾಟ್‌ ಹೆನ್ರಿ.

ಟಿ20 ಸರಣಿಗೆ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ (ವಿ.ಕೀ), ಲಾಕಿ ಫರ್ಗುಸನ್, ಡೇರಿಲ್ ಮಿಚೆಲ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಇಶ್ಕ್ ಸೋಧಿ, ಬ್ಲೇರ್ ಟಿಕ್ನೆರ್‌.

click me!