'ದ ಹಂಡ್ರೆಡ್‌' ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿದ ಕೇನ್‌ ವಿಲಿಯಮ್ಸನ್‌

By Suvarna NewsFirst Published Jul 2, 2021, 1:42 PM IST
Highlights

* ದಿ ಹಂಡ್ರೆಡ್‌ ಟೂರ್ನಿಯಿಂದ ಹಿಂದೆ ಸರಿದ ಕೇನ್‌ ವಿಲಿಯಮ್ಸನ್‌

* ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಕಿವೀಸ್‌ ನಾಯಕ

* ಟೆಸ್ಟ್‌ ಚಾಂಪಿಯನ್‌ಶಿಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿಲಿಯಮ್ಸನ್‌

ಲಂಡನ್‌(ಜು.02): ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಟ್ರೋಫಿ ಗೆದ್ದುಕೊಟ್ಟ ನಾಯಕ ಕೇನ್‌ ವಿಲಿಯಮ್ಸನ್‌ ಗಾಯದ ಸಮಸ್ಯೆಯಿಂದಾಗಿ ಚೊಚ್ಚಲ ಆವೃತ್ತಿಯ 'ದ ಹಂಡ್ರೆಡ್‌' ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. 

ಕೇನ್‌ ವಿಲಿಯಮ್ಸನ್‌ ಬರ್ಮಿಂಗ್‌ಹ್ಯಾಮ್‌ ಫೀನಿಕ್ಸ್‌ ತಂಡದೊಂದಿಗೆ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಮೊಣಕೈ ಗಾಯಕ್ಕೆ ಒಳಗಾಗಿರುವ ಕಿವೀಸ್‌ ನಾಯಕ ಅನಿವಾರ್ಯವಾಗಿ ದ ಹಂಡ್ರೆಂಡ್‌ ಟೂರ್ನಿಯಿಂದ ಹೊರಬಿದ್ದಂತೆ ಆಗಿದೆ. ಭಾರತ ವಿರುದ್ದದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ವಿಲಿಯಮ್ಸನ್‌, ದ ಹಂಡ್ರೆಡ್‌ ಟೂರ್ನಿಯಲ್ಲಿ ಭಾಗವಹಿಸುವ ಉದ್ದೇಶದಿಂದ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಂಡಿದ್ದರು. 

ಟೆಸ್ಟ್‌ ವಿಶ್ವಕಪ್‌ ಗೆದ್ದ ಮೇಲೆ ಕಿವೀಸ್‌ ರಾತ್ರಿಯಿಡೀ ಪಾರ್ಟಿ!

ಕಳೆದ ಆರು ತಿಂಗಳಿನಿಂದ ನ್ಯೂಜಿಲೆಂಡ್ ತಂಡದ ನಾಯಕ ವಿಲಿಯಮ್ಸನ್‌ ಗಾಯದ ವಿರುದ್ದ ಸೆಣಸಾಡುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಬಾಂಗ್ಲಾದೇಶ ವಿರುದ್ದದ ಏಕದಿನ ಸರಣಿ ಹಾಗೂ ಐಪಿಎಲ್‌ನ ಆರಂಭಿಕ ಪಂದ್ಯಗಳಿಂದ ಹೊರಗುಳಿದಿದ್ದರು. ಇನ್ನು ಇಂಗ್ಲೆಂಡ್ ವಿರುದ್ದದ ಎರಡನೇ ಟೆಸ್ಟ್‌ ಪಂದ್ಯದಿಂದಲೂ ಗಾಯದ ಸಮಸ್ಯೆಯಿಂದಾಗಿಯೇ ಹೊರಗುಳಿದಿದ್ದರು ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಮಾಡಿದೆ.

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಬಳಿಕ ವಿಲಿಯಮ್ಸನ್‌ ಇಂಗ್ಲೆಂಡ್‌ನಲ್ಲಿಯೇ ಉಳಿದುಕೊಂಡಿದ್ದು, ಎಡ್ಜ್‌ಬಾಸ್ಟನ್‌ ಮೂಲದ ತಂಡಕ್ಕೆ ಮೆಂಟರ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. 

ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಬಹುನಿರೀಕ್ಷಿತ ಚೊಚ್ಚಲ ಆವೃತ್ತಿಯ 'ದ ಹಂಡ್ರೆಡ್‌' ಟೂರ್ನಿಯು ಜುಲೈ 21ರಿಂದ ಆಗಸ್ಟ್ 21ರವರೆಗೆ ಜರುಗಲಿದ್ದು,  8 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.
 

click me!