ಬರ್ಗರ್‌ ದಾಳಿಗೆ ಬೆಂಡಾದ ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್‌ ಸೋಲು!

By Santosh Naik  |  First Published Dec 28, 2023, 9:59 PM IST

ನಾಂದ್ರೆ ಬರ್ಗರ್  ಹಾಗೂ ಮಾರ್ಕೋ ಜೆನ್ಸೆನ್‌ ಅವರ ಬೌಲಿಂಗ್‌ ದಾಳಿಯ ಮುಂದೆ ಸಂಪೂರ್ಣವಾಗಿ ಬೆಂಡಾದ ಭಾರತ ತಂಡ ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇನ್ನಿಂಗ್ಸ್‌ ಮತ್ತು 32 ರನ್‌ಗಳ ಸೋಲು ಕಂಡಿದೆ.
 


ಸೆಂಚುರಿಯನ್‌ (ಡಿ.28): ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್‌ ಮತ್ತು 32 ರನ್‌ಗಳ ಸೋಲು ಕಂಡಿದೆ. 2ನೇ ಇನ್ನಿಂಗ್ಸ್‌ ಅನುಭವಿ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ (76 ರನ್‌, 82 ಎಸೆತ, 12 ಬೌಂಡರಿ, 1 ಸಿಕ್ಸರ್‌) ಹಾಗೂ ಶುಭ್‌ಮನ್‌ ಗಿಲ್‌ (26 ರನ್‌, 37 ಎಸೆತ, 6 ಬೌಂಡರಿ) ಹೊರತಾಗಿ ಉಳಿದ ಯಾವ ಬ್ಯಾಟ್ಸ್‌ಮನ್‌ಗಳು ಕೂಡ ಎರಡಂಕಿ ಮೊತ್ತ ಬಾರಿಸಲಿಲ್ಲ. ಬೌಲಿಂಗ್‌ನಲ್ಲಿ ಗಮನಸೆಳೆದ ನಾಂದ್ರೆ ಬರ್ಗರ್‌ 33 ರನ್‌ಗೆ 4 ವಿಕೆಟ್‌ ಉರುಳಿಸಿದರೆ, ಮಾರ್ಕೋ ಜನ್ಸೆನ್‌ 36 ರನ್‌ಗೆ ಮೂರು ವಿಕೆಟ್‌ ಉರುಳಿಸಿದರು. ಇದರೊಂದಿಗೆ ಭಾರತ ತಂಡ ಸೆನಾ ದೇಶಗಳಲ್ಲಿ (ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ) ಆಡಿದ ಕಳೆದ 5 ಟೆಸ್ಟ್‌ ಪಂದ್ಯಗಳಲ್ಲಿ ಐದರಲ್ಲೂ ಸೋಲು ಕಂಡಂತಾಗಿದೆ. 2022ರಲ್ಲಿ ಜೊಹಾನ್ಸ್‌ಬರ್ಗ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಸೋಲು ಕಂಡಿದ್ದ ಭಾರತ, ಆ ಬಳಿಕ ಕೇಪ್‌ಟೌನ್‌, ಬರ್ಮಿಂಗ್‌ಹ್ಯಾಂ ಹಾಗೂ ಓವಲ್‌ನಲ್ಲಿ ನಡೆದಿದ್ದ ಪಂದ್ಯಗಳಲ್ಲಿ ಸೋಲು ಕಂಡಿತ್ತು.

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ 245 ರನ್‌ಗೆ ಪ್ರತಿಯಾಗಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ 408 ರನ್‌ಗೆ ಆಲೌಟ್‌ ಆಯಿತು.163 ರನ್‌ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್‌ ಆಡಿದ ಭಾರತ ತಂಡ 34 ಓವರ್‌ಗಳಲ್ಲಿ ಕೇವಲ 131 ರನ್‌ಗೆ ಆಲೌಟ್‌ ಆಯಿತು. ಇದರೊಂದಿಗೆ ದಕ್ಷಿಣ ಆಫ್ರಿಕಾ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆಗೇರಿತು. ಇದಕ್ಕೂ ಮುನ್ನ ಡೀನ್‌ ಎಲ್ಗರ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ 2ನೇ ಗರಿಷ್ಠ ಸ್ಕೋರ್‌ 185 ರನ್‌ ಬಾರಿಸಿದರೆ, ಮಾರ್ಕೋ ಜನ್ಸೆನ್‌ ಅಜೇಯ 84 ರನ್‌ನೊಂದಿಗೆ ಟೆಸ್ಟ್‌ ಮಾದರಿಯಲ್ಲಿ ತಮ್ಮ ಗರಿಷ್ಠ ರನ್‌ ಬಾರಿಸಿದರು. ಇದರೊಂದಿಗೆ 163 ರನ್‌ ಪಡೆದುಕೊಂಡಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ಭಾರತವನ್ನು ಸೋಲಿಸಿಲು ಇಷ್ಟೇ ರನ್‌ಗಳು ಸಾಕಾದವು.

Latest Videos

ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಹೋರಾಟವನ್ನು ಕಗಿಸೋ ರಬಾಡ ಐದು ವಿಕೆಟ್‌ ಉರುಳಿಸುವ ಮೂಲಕ ಕಟ್ಟಿಹಾಕಿದರೆ, 2ನೇ ಇನ್ನಿಂಗ್ಸ್‌ನಲ್ಲಿ ಎಡಗೈ ವೇಗಿ ನಾಂದ್ರೆ ಬರ್ಗರ್ ಹಾಗೂ ಮಾರ್ಕೋ ಜನ್ಸೆನ್‌ ಭಾರತವನ್ನು  ಹೆಡೆಮುರಿ ಕಟ್ಟಿದರು. ಇಬ್ಬರೂ ತಮ್ಮ ನಡುವೆ 7 ವಿಕೆಟ್‌ಗಳನ್ನು ಹಂಚಿಕೊಂಡರು. ಇದೇ ಪಿಚ್‌ನಲ್ಲಿ ಭಾರತದ ಬೌಲರ್‌ಗಳು ದಕ್ಷಿಣ ಆಫ್ರಿಕಾದ 9 ವಿಕೆಟ್‌ಗಳನ್ನು ಉರುಳಿಸಲು 108.4 ಓವರ್‌ ಬೌಲಿಂಗ್‌ ಮಾಡಿದ್ದರು. 8 ಎಸೆತ ಎದುರಿಸಿದ ರೋಹಿತ್‌ ಶರ್ಮ ಅವರನ್ನು ಬೌಲ್ಡ್‌ ಮಾಡುವ ಮೂಲಕ ರಬಾಡ ದಕ್ಷಿಣ ಆಫ್ರಿಕಾಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಆ ಬಳಿಕ ಭಾರತದ ಬ್ಯಾಟಿಂಗ್‌ ವಿಭಾಗ ಇಸ್ಪೀಟ್‌ ಎಲೆಗಳಂತೆ ಉದುರಿತು.

click me!