ಟೀಂ ಇಂಡಿಯಾ ಕ್ರಿಕೆಟಿಗನ ತಂದೆಗೆ 7 ವರ್ಷ ಜೈಲು; 11 ವರ್ಷಗಳ ಬಳಿಕ ಕೋರ್ಟ್‌ನಿಂದ ಶಿಕ್ಷೆ ಪ್ರಕಟ!

By Naveen Kodase  |  First Published Dec 25, 2024, 4:55 PM IST

ಮಾಜಿ ಕ್ರಿಕೆಟಿಗ ನಮನ್ ಓಝಾ ಅವರ ತಂದೆ ವಿನಯ್ ಓಝಾ ಅವರಿಗೆ ಬ್ಯಾಂಕ್ ಹಣ ದುರುಪಯೋಗ ಪ್ರಕರಣದಲ್ಲಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. 11 ವರ್ಷಗಳ ವಿಚಾರಣೆಯ ನಂತರ, ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 1.25 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ.


ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ, ವಿಕೆಟ್ ಕೀಪರ್ ಬ್ಯಾಟರ್ ನಮನ್ ಓಝಾ ಪಾಲಿಗೆ ದುಃಖಕರ ಸುದ್ದಿಯೊಂದು ಹೊರಬಿದ್ದಿದೆ. ನಮನ್ ಓಝಾ ಅವರ ತಂದೆ ವಿನಯ್ ಓಝಾ ಅವರು ಬ್ಯಾಂಕಿನ ಹಣ ದುರುಪಯೋಗ ಪಡಿಸಿಕೊಂಡ ಪ್ರಕರಣದಡಿ ಆರೋಪ ಸಾಬೀತಾಗಿರುವುದರಿಂದ 7 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ. ಬರೋಬ್ಬರಿ 11 ವರ್ಷಗಳ ವಿಚಾರಣೆಯ ಬಳಿಕ ಕೋರ್ಟ್ ಮಹತ್ವದ ತೀರ್ಮಾನವನ್ನು ಪ್ರಕಟಿಸಿದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರದ ಒಂದು ಬ್ರ್ಯಾಂಚ್ ಮಧ್ಯಪ್ರದೇಶದ ಜೋಲಖೇಡ ಎಂಬ ಹಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಈ ಬ್ಯಾಂಕ್‌ನಲ್ಲಿ ನಮನ್ ಓಝಾ ಅವರ ತಂದೆ ವಿನಯ್ ಓಝಾ ಅವರು ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. 2013ರಲ್ಲಿ ಈ ಬ್ಯಾಂಕ್‌ನಿಂದ ಸುಮಾರು 1.25 ಕೋಟಿ ರುಪಾಯಿ ವಂಚನೆ ಮಾಡಿದ್ದಾರೆ ಎಂದು ವಿನಯ್ ಓಝಾ ಅವರು ಸೇರಿದಂತೆ ಆರು ಮಂದಿಯ ಮೇಲೆ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಅಲ್ಲಿನ ಮುಲ್ತಾಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಈ ಪ್ರಕರಣದ ಮಾಸ್ಟರ್ ಮೈಂಡ್ ಅಭಿಷೇಕ್ ರತ್ನಂ ಸೇರಿದಂತೆ ಈ ಕೆಲವು ಪ್ರಮುಖರಿಗೆ ಶಿಕ್ಷೆ ಪ್ರಕಟಿಸಿದೆ.

Tap to resize

Latest Videos

undefined

ಬಾಕ್ಸಿಂಗ್ ಡೇ ಟೆಸ್ಟ್‌ಗೂ ಮುನ್ನ ಫಿಟ್ ಆದ ಟೀಂ ಇಂಡಿಯಾ ದುಷ್ಮನ್; ರೋಹಿತ್ ಪಡೆಗೆ ಶುರುವಾಯ್ತು ಟೆನ್ಷನ್!

ಈ ಪ್ರಕರಣದ ಮಾಸ್ಟರ್ ಮೈಂಡ್ ಅಭಿಷೇಕ್ ರತ್ನಂ ಅವರಿಗೆ ಕೋರ್ಟ್ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇದರ ಜತೆಗೆ 80 ಲಕ್ಷ ರುಪಾಯಿ ದಂಡ ವಿಧಿಸಿದೆ. ಇನ್ನು ನಮನ್ ಓಝಾ ಅವರ ತಂದೆ ವಿನಯ್ ಓಝಾ ಅವರಿಗೆ 7 ವರ್ಷ ಜೈಲು ಹಾಗೂ 7 ಲಕ್ಷ ರುಪಾಯಿ ದಂಡ ವಿಧಿಸಲಾಗಿದೆ. ಇನ್ನು ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಬ್ಯಾಂಕಿನ ಬ್ರೋಕರ್‌ಗಳಾದ ಧನ್‌ರಾಜ್ ಪವರ್ ಹಾಗೂ ಲಖನ್ ಹಿಂಗ್ವೆ ಅವರಿಗೆ 7 ವರ್ಷ ಜೈಲು ಹಾಗೂ ತಲಾ 7 ಲಕ್ಷ ರುಪಾಯಿ ದಂಡ ವಿಧಿಸಿದೆ.

ಮಧ್ಯಪ್ರದೇಶದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮಹಾರಾಷ್ಟ್ರದ ಜೋಲಖೇಡ ಬ್ರ್ಯಾಂಚ್‌ನಲ್ಲಾದ ಕೋಟ್ಯಾಂತರ ರುಪಾಯಿ ಅವ್ಯವಹಾರ ಮುಲ್ತಾಯಿ ಬ್ಲಾಕ್ ಸೇರಿದಂತೆ ಆ ಭಾಗದಲ್ಲೇ ದೊಡ್ಡ ಸದ್ದು ಮಾಡಿತ್ತು. ಹೈಪ್ರೊಫೈಲ್ ಕೇಸ್ ಆಗಿದ್ದರಿಂದ ಕೋರ್ಟ್ ತೀರ್ಪಿನ ಕುರಿತಂತೆ ಸಾಕಷ್ಟು ಕುತೂಹಲವವಿತ್ತು. ಆದರೆ ಮುಲ್ತಾಯಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ವಾದವಿವಾದ ಹಾಗೂ ಸೂಕ್ತ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ಪ್ರಕಟಿಸಿದೆ. ಈ ಮೂಲಕ ಭ್ರಷ್ಟಾಚಾರ ಮಾಡುವವರಿಗೆ ಈ ತೀರ್ಪು ಶಿಕ್ಷೆ ತಪ್ಪಿದ್ದಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

click me!