ಬಾಂಗ್ಲಾದೇಶ ಮನವಿ ಒಪ್ಪಿಕೊಳ್ತಾ ಐಸಿಸಿ? ಬಾಂಗ್ಲಾ ಟಿ20 ವಿಶ್ವಕಪ್ ಮ್ಯಾಚ್ ಲಂಕಾಗೆ ಶಿಫ್ಟ್?

Published : Jan 05, 2026, 09:31 AM IST
ICC T20 WORLD CUP TROPHY

ಸಾರಾಂಶ

ಐಪಿಎಲ್‌ನಿಂದ ಮುಸ್ತಾಫಿಜುರ್ ರೆಹಮಾನ್‌ರನ್ನು ಕೈಬಿಟ್ಟಿದ್ದಕ್ಕೆ ಪ್ರತಿಯಾಗಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಆಟಗಾರರ ಸುರಕ್ಷತೆಯ ಕಾರಣ ನೀಡಿ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿಗೆ ಅಧಿಕೃತವಾಗಿ ಮನವಿ ಮಾಡಿದೆ.  

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಬಾಂಗ್ಲಾದೇಶದ ಆಟಗಾರ ಮುಸ್ತಾಫಿಜುರ್ ರೆಹಮಾನ್‌ರನ್ನು ಕೋಲ್ಕತಾ ನೈಟ್ ರೈಡರ್ಸ್ ಕೈಬಿಟ್ಟ ನಂತರ ಕ್ರಿಕೆಟ್ ಜಗತ್ತಿನಲ್ಲಿ ಹೊಸ ವಿವಾದವೊಂದು ಶುರುವಾಗಿದೆ. ಫೆಬ್ರವರಿಯಲ್ಲಿ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ತಮ್ಮ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸಬೇಕೆಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ (ಐಸಿಸಿ) ಮನವಿ ಮಾಡಿದೆ. ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಬಾಂಗ್ಲಾದೇಶ ಈ ಕಠಿಣ ನಿಲುವು ತೆಗೆದುಕೊಂಡಿದೆ.

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ವಿರೋಧಿಸಿ ಭಾರತದ ಕೆಲವು ತೀವ್ರಗಾಮಿ ಸಂಘಟನೆಗಳು ಬಿಸಿಸಿಐ ಮೇಲೆ ಒತ್ತಡ ಹೇರಿದ್ದವು. ಇದರ ಪರಿಣಾಮವಾಗಿ ಮುಸ್ತಾಫಿಜುರ್ ಅವರನ್ನು ಕೈಬಿಡಲು ಬಿಸಿಸಿಐ ಸೂಚಿಸಿತ್ತು. 9.20 ಕೋಟಿ ರೂಪಾಯಿಗೆ ಹರಾಜಿನಲ್ಲಿ ಖರೀದಿಸಿದ ಆಟಗಾರನನ್ನು ಕೈಬಿಟ್ಟಿದ್ದು ಬಾಂಗ್ಲಾದೇಶಕ್ಕೆ ಮಾಡಿದ ಅವಮಾನಕ್ಕೆ ಸಮ ಎಂದು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಸ್ರುಲ್ ಹೇಳಿದ್ದಾರೆ. 'ಒಪ್ಪಂದವಿದ್ದರೂ ಬಾಂಗ್ಲಾ ಆಟಗಾರನಿಗೆ ಭಾರತದಲ್ಲಿ ಆಡಲು ಸಾಧ್ಯವಾಗದಿದ್ದರೆ, ವಿಶ್ವಕಪ್‌ಗಾಗಿ ನಮ್ಮ ತಂಡವನ್ನು ಅಲ್ಲಿಗೆ ಕಳುಹಿಸುವುದು ಸುರಕ್ಷಿತವಲ್ಲ' ಎಂದು ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಸಭೆ ಬಳಿಕ ಮಾತನಾಡಿರುವ ಬಿಸಿಬಿ ಅಧಿಕಾರಿಯೊಬ್ಬರು, ‘ನಮ್ಮ ಒಬ್ಬ ಆಟಗಾರನಿಗೆ ಐಪಿಎಲ್‌ ವೇಳೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂದು ಭಾರತ ಹೇಳಿರುವಾಗ, ವಿಶ್ವಕಪ್‌ನಲ್ಲಿ ಆಡಲು ನಮ್ಮ ಇಡೀ ತಂಡವನ್ನು ಕಳುಹಿಸಲು ಹೇಗೆ ಸಾಧ್ಯ’ ಎಂದಿದ್ದಾರೆ. ಆದರೆ, ಮುಸ್ತಾಫಿಜುರ್‌ರನ್ನು ತಂಡದಿಂದ ಕೈಬಿಡುವಂತೆ ಕೆಕೆಆರ್‌ಗೆ ಸೂಚಿಸುವಾಗ ಬಿಸಿಸಿಐ ಎಲ್ಲೂ ರಕ್ಷಣೆ ನೀಡುವ ಬಗ್ಗೆ ಉಲ್ಲೇಖಿಸಿಲ್ಲ.

ಗ್ರೂಪ್‌ ಹಂತದ ನಾಲ್ಕು ಪಂದ್ಯಗಳು ಭಾರತದಲ್ಲಿ ನಿಗದಿ

ವಿಶ್ವಕಪ್‌ನಲ್ಲಿ ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಡೆಯಬೇಕಿದ್ದ ಬಾಂಗ್ಲಾದೇಶದ ನಾಲ್ಕು ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬುದು ಅವರ ಬೇಡಿಕೆಯಾಗಿದೆ. ಇದಕ್ಕೆ ಐಸಿಸಿ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ವರದಿಯಾಗಿದೆ. ಪ್ರತಿಭಟನೆಯ ಸಂಕೇತವಾಗಿ ಬಾಂಗ್ಲಾದೇಶದಲ್ಲಿ ಐಪಿಎಲ್ ಪಂದ್ಯಗಳ ಪ್ರಸಾರವನ್ನು ನಿಲ್ಲಿಸುವ ಬಗ್ಗೆ ಅಲ್ಲಿನ ಸರ್ಕಾರ ಚಿಂತನೆ ನಡೆಸುತ್ತಿದೆ. ಬಾಂಗ್ಲಾದೇಶದ ಬೇಡಿಕೆಯನ್ನು ಐಸಿಸಿ ಒಪ್ಪಿಕೊಂಡರೆ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಮ್ಮ ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲಿವೆ.

ಟೂರ್ನಿ ಆರಂಭಕ್ಕೆ ಕೇವಲ ಒಂದು ತಿಂಗಳು ಬಾಕಿ ಇರುವಾಗ ಸ್ಥಳ ಬದಲಾವಣೆ ಮಾಡುವುದು ಕಷ್ಟ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಈ ಹಿಂದೆ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಭಾರತದ ಮನವಿಯ ಮೇರೆಗೆ ಐಸಿಸಿ ಸ್ಥಳಾಂತರಿಸಿತ್ತು. ಅದೇ ರೀತಿ ಬಾಂಗ್ಲಾದೇಶದ ವಿಷಯದಲ್ಲೂ ಐಸಿಸಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಫೆಬ್ರವರಿ 7 ರಂದು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಬಾಂಗ್ಲಾದೇಶದ ಮೊದಲ ವಿಶ್ವಕಪ್ ಪಂದ್ಯ ನಿಗದಿಯಾಗಿದೆ.

ಟಿ20 ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡದ ವೇಳಾಪಟ್ಟಿ:

ಬಾಂಗ್ಲಾದೇಶ-ವೆಸ್ಟ್‌ ಇಂಡೀಸ್: ಫೆಬ್ರವರಿ 07- ಈಡನ್ ಗಾರ್ಡನ್ಸ್‌, ಕೋಲ್ಕತಾ

ಬಾಂಗ್ಲಾದೇಶ-ಇಟಲಿ: ಫೆಬ್ರವರಿ 09 - ಈಡನ್ ಗಾರ್ಡನ್ಸ್, ಕೋಲ್ಕತಾ

ಬಾಂಗ್ಲಾದೇಶ-ಇಂಗ್ಲೆಂಡ್: ಫೆಬ್ರವರಿ 14 - ಈಡನ್ ಗಾರ್ಡನ್ಸ್‌, ಕೋಲ್ಕತಾ

ಬಾಂಗ್ಲಾದೇಶ-ನೇಪಾಳ: ಫೆಬ್ರವರಿ 17 -ವಾಂಖೆಡೆ ಸ್ಟೇಡಿಯಂ, ಮುಂಬೈ.

ಬಾಂಗ್ಲಾದೇಶದಲ್ಲಿ ಐಪಿಎಲ್ ಬ್ಯಾನ್:

ಇದೀಗ ಮುಸ್ತಾಫಿಜುರ್ ಅವರನ್ನು ಐಪಿಎಲ್‌ನಿಂದ ವಾಪಾಸ್ ಕಳಿಸಿದ ಬೆನ್ನಲ್ಲೇ ಪ್ರತಿಕಾರದ ರೂಪದಲ್ಲಿ ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರ ಮಾಡದಿರಲು ತೀರ್ಮಾನಿಸಲಾಗಿದೆ. ಅಂದರೆ 19ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಬಾಂಗ್ಲಾದೇಶದಲ್ಲಿ ಕ್ರಿಕೆಟ್ ಅಭಿಮಾನಿಗಳು ನೋಡಲು ಸಾಧ್ಯವಾಗುವುದಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಜಯ್ ಹಜಾರೆ: ನಾಕೌಟ್‌ ಮೇಲೆ ಕರ್ನಾಟಕದ ಕಣ್ಣು, ಇಂದು ಕೊಹ್ಲಿ ಆಡ್ತಾರಾ?
ಬಾಂಗ್ಲಾದಲ್ಲಿ ಐಪಿಎಲ್‌ ಪ್ರಸಾರ ಬ್ಯಾನ್‌ನಿಂದಾಗಿ ಬಿಸಿಸಿಐ ಮೇಲಾಗುವ ಪರಿಣಾಮವೇನು?