
ಢಾಕಾ: ಬಾಂಗ್ಲಾದೇಶ ಸರ್ಕಾರವು ತನ್ನ ದೇಶದಲ್ಲಿ 2026ರ ಐಪಿಎಲ್ ಪ್ರಸಾರವನ್ನು ನಿಷೇಧಗೊಳಿಸಿದೆ. ವೇಗಿ ಮುಸ್ತಾಫಿಜುರ್ ರಹಮಾನ್‌ರನ್ನು ಬಿಸಿಸಿಐ ಸೂಚನೆ ಮೇರೆಗೆ ಕೆಕೆಆರ್ ತಂಡದಿಂದ ಹೊರಹಾಕಿದ್ದಕ್ಕೆ, ಬಾಂಗ್ಲಾ ಈ ರೀತಿ ಪ್ರತಿಭಟನೆ ನಡೆಸುತ್ತಿದೆ.
ಯಾವುದೇ ಕಾರಣ ನೀಡದೆ ಮುಸ್ತಾಫಿಜುರ್‌ರನ್ನು ಐಪಿಎಲ್‌ನಿಂದ ಹೊರಹಾಕಿದ್ದರಿಂದ ನಮ್ಮ ಜನಕ್ಕೆ ನೋವಾಗಿದೆ. ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ಅನೇಕರು ಆಕ್ರೋಶ ಸಹ ವ್ಯಕ್ತಪಡಿಸಿದ್ದಾರೆ. ಹೀಗಾಗಿ ದೇಶದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡ ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಲು ನಿರ್ಧರಿಸಲಾಗಿದೆ ಎಂದು ಬಾಂಗ್ಲಾದ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪ್ರಕಟಣೆಗೆ ಸಚಿವಾಲಯದ ಸಹಾಯಕ ಕಾರ್ಯದರ್ಶಿ ಫಿರೋಜ್ ಖಾನ್ ಸಹಿ ಮಾಡಿದ್ದಾರೆ.
2008ರಲ್ಲಿ ಐಪಿಎಲ್ ಶುರುವಾದಾಗಿನಿಂದಲೂ ಬಾಂಗ್ಲಾದೇಶದ ಟೀವಿ ಚಾನೆಲ್‌ಗಳು, ಆನ್‌ಲೈನ್ ವೇದಿಕೆಗಳಲ್ಲಿ ವಿಶ್ವದ ಶ್ರೀಮಂತ ಟಿ20 ಲೀಗ್ ಪ್ರಸಾರವಾಗುತ್ತಿದೆ. ಒಂದು ಜಾಗತಿಕ ಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ಬಾಂಗ್ಲಾದೇಶ ನಿಷೇಧಗೊಳಿಸಿದ್ದು ಇದೇ ಮೊದಲು.
ಕಳೆದ ಶನಿವಾರ ಕೆಕೆಆರ್ ತನ್ನ ತಂಡದಿಂದ ಮುಸ್ತಾಫಿಜುರ್‌ರನ್ನು ಕೈಬಿಟ್ಟಿರುವುದಾಗಿ ಘೋಷಿಸಿತು. ಇದಕ್ಕೆ ಯಾವುದೇ ನಿರ್ದಿಷ್ಟ ಕಾರಣಗಳನ್ನು ತಂಡ ಪ್ರಕಟಿಸಿಲ್ಲ. ಆದರೆ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ಹಿಂಸಾಚಾರವನ್ನು ಖಂಡಿಸಿ, ಬಾಂಗ್ಲಾ ಆಟಗಾರರನ್ನು ಐಪಿಎಲ್‌ನಿಂದ ಹೊರಗಿಡಲು ಬಿಸಿಸಿಐ ನಿರ್ಧರಿಸಿತು ಎನ್ನಲಾಗಿದೆ. ಜೊತೆಗೆ ಕಳೆದೊಂದು ವರ್ಷದಿಂದ ಭಾರತ ಹಾಗೂ ಬಾಂಗ್ಲಾ ನಡುವಿನ ರಾಜತಾಂತ್ರಿಕ ಸಂಬಂಧ ಸಹ ಹಳಸಿದೆ. ಮುಸ್ತಾಫಿಜುರ್‌ರನ್ನು ಹೊರಹಾಕಲು ಇದೂ ಒಂದು ಕಾರಣ.
ಭಾನುವಾರಷ್ಟೇ ಬಾಂಗ್ಲಾದೇಶ, ತನ್ನ ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಐಸಿಸಿಗೆ ಒತ್ತಾಯಿಸಿತ್ತು. ಐಸಿಸಿಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಹೊರಬಿದ್ದಿಲ್ಲ. ಆದರೆ ಮೂಲಗಳ ಪ್ರಕಾರ, ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದ ಹೊರಗೆ ನಡೆಸಲು ಐಸಿಸಿ ಒಪ್ಪಿಗೆ ಸೂಚಿಸಲಿದೆ ಎನ್ನಲಾಗಿದೆ.
ಕಳೆದ ವರ್ಷ ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್) ಪ್ರಸಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ ಐಪಿಎಲ್ ಪ್ರಸಾರವನ್ನು ನಿಲ್ಲಿಸಿತ್ತು. ಈ ವರ್ಷವೂ ಪಾಕಿಸ್ತಾನದಲ್ಲಿ ಐಪಿಎಲ್ ಪ್ರಸಾರ ಅನುಮಾನ. ಇದೀಗ ಆ ಸಾಲಿಗೆ ಬಾಂಗ್ಲಾದೇಶ ಸಹ ಸೇರ್ಪಡೆಗೊಂಡಿದೆ.
ಬಾಂಗ್ಲಾದೇಶ ಐಪಿಎಲ್ ಪ್ರಸಾರವನ್ನು ನಿಷೇಧಗೊಳಿಸಿರುವುದರಿಂದ ಬಿಸಿಸಿಐಗೆ ದೊಡ್ಡ ಪ್ರಮಾಣದ ನಷ್ಟವೇನೂ ಆಗುವುದಿಲ್ಲ. ಬಿಸಿಸಿಐ ಹಾಗೂ ಪ್ರಸಾರ ಹಕ್ಕು ಹಂದಿರುವ ಸಂಸ್ಥೆಗೆ ಶೇ.95ರಷ್ಟು ಆದಾಯ ಭಾರತದಲ್ಲಿ ಪಂದ್ಯಗಳನ್ನು ಪ್ರಸಾರ ಮಾಡುವುದರಿಂದಲೇ ಬರಲಿದೆ. ಹೀಗಾಗಿ, ಬಾಂಗ್ಲಾದ ಈ ಪ್ರತಿಭಟನೆಗೆ ಭಾರತ, ಬಿಸಿಸಿಐ ತಲೆಕೆಡಿಸಿಕೊಳ್ಳುವ ಸಾಧ್ಯತೆ ಕಡಿಮೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.