
ಜೈಪುರ (ಮೇ.2): ಕಳೆದ ವರ್ಷದ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ಲೇಯರ್ ಆಗಿದ್ದ ಕ್ರಿಕೆಟಿಗ ಶಿವಾಲಿಕ್ ಶರ್ಮ ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ರಾಜಸ್ಥಾನದ ಜೋಧ್‌ಪುರದ ಕುಡಿ ಭಗತ್ಸುನಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಯಾವುದೇ ಕ್ಷಣದಲ್ಲಿ ಈತನ ಬಂಧನವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಆನಂದ್ ಸಿಂಗ್, ದೂರುದಾರೆಯಾಗಿರುವ ಯುವತಿ ಕುಡಿ ಭಗತ್ಸುನಿಯ ಸೆಕ್ಟರ್ 2 ರ ನಿವಾಸಿಯಾಗಿದ್ದು, ಅವರು ಶಿವಾಲಿಕ್ ಶರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ. ಪೊಲೀಸರು ಕ್ರಿಕೆಟಿಗನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಶರ್ಮಾ ದೇಶೀಯ ಕ್ರಿಕೆಟ್‌ನಲ್ಲಿ ಬರೋಡಾವನ್ನು ಪ್ರತಿನಿಧಿಸಿದ್ದಾರೆ. ಸಂತ್ರಸ್ಥೆಯ ವೈದ್ಯಕೀಯ ವರದಿಗಳನ್ನು ದಾಖಲಿಸಿದ ನಂತರ ಮತ್ತು BNNS ಸೆಕ್ಷನ್ 180 ರ ಅಡಿಯಲ್ಲಿ ನ್ಯಾಯಾಲಯದ ಮುಂದೆ ದೂರುದಾರರ ನ್ಯಾಯಾಂಗ ಹೇಳಿಕೆಯನ್ನು ಪಡೆದುಕೊಂಡ ನಂತರ ಪೊಲೀಸರು ಆರೋಪಿಯ ಹೆಸರನ್ನು ಬಹಿರಂಗಪಡಿಸಿದರು. ಪೊಲೀಸ್ ಎಫ್‌ಐಆರ್ ಪ್ರಕಾರ, ಕ್ರಿಕೆಟಿಗ ವಿವಾಹದ ಭರವಸೆ ನೀಡುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡು ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ಸಂತ್ರಸ್ಥ ಯುವತಿ ಆರೋಪಿಸಿದ್ದಾರೆ. ವರದಿಯಲ್ಲಿ, ಹುಡುಗಿ ಫೆಬ್ರವರಿ 2023 ರಲ್ಲಿ ಗುಜರಾತ್‌ನ ವಡೋದರಾಕ್ಕೆ ಹೋಗಿದ್ದೆ ಮತ್ತು ಆಗ ಶಿವಾಲಿಕ್ ಅವರನ್ನು ಸಂಪರ್ಕಿಸಿದ್ದೆ ಎಂದು ಹೇಳಿದ್ದಾಳೆ. ಶಿವಾಲಿಕ್ ಗುಜರಾತ್‌ನ ವಡೋದರಾ ನಿವಾಸಿ ಆಗಿದ್ದಾನೆ.
ಕ್ರಿಕೆಟಿಗ ಮತ್ತು ಸಂತ್ರಸ್ಥ ಯುವತಿ ಇಬ್ಬರೂ ಸ್ನೇಹಿತರಾದರು. ಅವರು ಆಗಾಗ್ಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಂತೆ ಆತ್ಮೀಯತೆ ಹೆಚ್ಚಾಯಿತು. ಇದಾದ ನಂತರ, ಇಬ್ಬರ ಪೋಷಕರು ಪರಸ್ಪರ ಭೇಟಿಯಾದರು. ಶಿವಾಲಿಕ್ ಅವರ ಪೋಷಕರು ಆಗಸ್ಟ್ 2023 ರಲ್ಲಿ ಜೋಧ್‌ಪುರಕ್ಕೆ ಬಂದರು. ಇದಾದ ನಂತರ, ಎರಡೂ ಕಡೆಯವರ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥ ನಡೆದಿತ್ತು.
ಯುವತಿಯ ಪ್ರಕಾರ, ನಿಶ್ಚಿತಾರ್ಥದ ನಂತರ, ಶಿವಾಲಿಕ್ ಜೋಧ್‌ಪುರಕ್ಕೆ ಹಿಂತಿರುಗಿದಾಗ, ಅವರು ದೈಹಿಕ ಸಂಬಂಧ ಹೊಂದಿದ್ದರು. ಇಬ್ಬರೂ ಜೈಪುರ ಸೇರಿದಂತೆ ರಾಜಸ್ಥಾನದ ಹಲವು ಸ್ಥಳಗಳಿಗೆ ಹೋಗಿದ್ದರು. ಆದರೆ, ಆಗಸ್ಟ್ 2024 ರಲ್ಲಿ ಯುವತಿಯನ್ನು ವಡೋದರಾಕ್ಕೆ ಕರೆಸಿದಾಗ ವಿಷಯಗಳು ಬೇರೆಯದೇ ತಿರುವು ಪಡೆದುಕೊಂಡವು ಮತ್ತು ಶಿವಾಲಿಕ್ ಅವರ ಪೋಷಕರು "ಅವರು ಕ್ರಿಕೆಟಿಗ, ಅವರಿಗೆ ಬೇರೆ ಸ್ಥಳಗಳಿಂದ ಪ್ರಸ್ತಾಪಗಳು ಬರುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಅವರೊಂದಿಗಿನ ಈ ನಿಶ್ಚಿತಾರ್ಥ ಮುಂದುವರಿಯಲು ಸಾಧ್ಯವಿಲ್ಲ" ಎಂದು ಹೇಳಿದ್ದರು.
ಇದಾದ ನಂತರ, ಯುವತಿ ಪೊಲೀಸರ ಬಳಿ ಹೋಗಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣವನ್ನು ಕುಡಿ ಭಗತ್ಸುನಿ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು 2024 ರಲ್ಲಿ ಐಪಿಎಲ್ ತಂಡ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಅವರು ಆಲ್‌ರೌಂಡರ್ ಆಟಗಾರ ಎನ್ನಲಾಗಿದೆ. ಶಿವಾಲಿಕ್ ಅಥವಾ ಅವರ ವಕೀಲರು ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.