
ಅವನ ಸಾಮರ್ಥ್ಯದ ಮೇಲೆ ಸ್ವತಃ ತಂದೆಗೂ ನಂಬಿಕೆ ಇರಲಿಲ್ಲ. ಮಗನ ಕ್ರಿಕೆಟ್ ಪ್ರೀತಿ ಅವರಿಗೆ ಇಷ್ಟವೂ ಇರಲಿಲ್ಲ ಬಿಡಿ. Typical ಮಧ್ಯಮ ವರ್ಗದ ಕುಟುಂಬದ ಯಜಮಾನನ ಯೋಚನೆಯಾಗಿತ್ತು ಅವರದ್ದು.
ಆ ದಿನ.. ಅವನು ಆ ನಿರ್ಧಾರ ಮಾಡದೇ ಇದ್ದಿದ್ದರೆ ಮಹೇಂದ್ರ ಸಿಂಗ್ ಧೋನಿಯೆಂಬ ಮಹಾ ಯೋಧನನ್ನು, ಶ್ರೇಷ್ಠ ನಾಯಕನನ್ನು ಈ ಜಗತ್ತು ನೋಡುತ್ತಲೇ ಇರಲಿಲ್ಲ. ಪಶ್ಚಿಮ ಬಂಗಾಳದ ಖರಗ್’ಪುರದಲ್ಲಿ ರೈಲ್ವೇ ಟಿಕೆಟ್ ಕಲೆಕ್ಟರ್ ಆಗಿ ತಂದೆಯ ಒತ್ತಾಯಕ್ಕೆ ಒತ್ತಡಕ್ಕೆ ಮಾಡುತ್ತಿದ್ದ ಕೆಲಸವದು. ಅವನ ಯೋಚನೆಯೂ ಬೇರೆ, ಕನಸೂ ಬೇರೆ.. ‘ಸಮುದ್ರವನ್ನೇ ಈಜಿ ಬಿಡಬಲ್ಲೆ’ ಎಂಬ ಸಾಹಸಿಯನ್ನು ಖರಗ್’ಪುರ ಎಂಬ ಕೆರೆಯಲ್ಲಿ ತಂದು ಬಿಟ್ಟಿದ್ದರು. ಟಿಕೆಟ್ ಕಲೆಕ್ಟರ್ ಆಗಿದ್ದ ದಿನಗಳಲ್ಲಿ ಮಹೇಂದ್ರ ಸದಾ ಕಾಲ ಖಿನ್ನತೆಗೊಳಗಾದವನಂತೆ ಕಾಣುತ್ತಿದ್ದನಂತೆ.
ಅಪ್ಪನ ಇಚ್ಛೆಗೆ ವಿರುದ್ಧವಾಗಿ ಅವನು ನಿರ್ಧಾರ ತೆಗೆದುಕೊಳ್ಳಲೇಬೇಕಿತ್ತು. ಮಧ್ಯಮ ವರ್ಗದ ಕುಟುಂಬದ ಹುಡುಗನಿಗೆ ಆ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿರಲಿಲ್ಲ. ಕೊನೆಗೊಂದು ದಿನ ದೃಢ ನಿರ್ಧಾರ ಮಾಡಿಯೇ ಬಿಟ್ಟ. ‘‘ನಾನು ಇಲ್ಲಿರಬೇಕಾದವನಲ್ಲ.. ನನ್ನ ಗುರಿ ಬೇರೆಯೇ ಇದೆ.. ಈಜಿದರೆ ಸಮುದ್ರ’’ ಎಂದುಕೊಂಡವನೇ ಖರಗ್’ಪುರದಲ್ಲಿ ರೈಲು ಹತ್ತಿದ. ನೇರವಾಗಿ ಬಂದಿಳಿದದ್ದು 275 ಕಿ.ಮೀ ದೂರದ ರಾಂಚಿಗೆ. ಮರಳಿ ಊರಿಗೆ. ತಂದೆಯ ಎದುರು ನಿಂತ. ‘‘ಸರ್ಕಾರಿ ಕೆಲಸ ಬೇಡ ನನಗೆ, ನಾನು ಕ್ರಿಕೆಟ್ ಆಡುತ್ತೇನೆ’’ ಎಂದು ಬಿಟ್ಟ. ದೇವತೆಗಳು ಅಸ್ತು ಅಂದು ಬಿಟ್ಟರು ಆ ಕ್ಷಣ. ಅಪ್ಪನ ವಿರೋಧದ ಮಧ್ಯೆ ಕ್ರಿಕೆಟ್ ಆಡಲು ಆರಂಭಿಸಿದವನು ಅಪ್ಪನಿಗೆ ಕೊಟ್ಟ ಉಡುಗೊರೆ ಎಂಥದ್ದು ಗೊತ್ತೇ..?
‘ಪಾನ್ ಸಿಂಗ್’ ಎಂದರೆ ಅವರು ಯಾರು ಎಂಬುದು ಯಾರಿಗೂ ತಿಳಿಯದು. ಅದೇ ‘ಮಹೇಂದ್ರ ಸಿಂಗ್ ಧೋನಿಯ ತಂದೆ ಪಾನ್ ಸಿಂಗ್’ ಎಂದರೆ ಎಲ್ಲರ ಕಿವಿ ಒಮ್ಮೆ ನೆಟ್ಟಗಾಗಿ ಬಿಡುತ್ತದೆ. ಕ್ರಿಕೆಟ್ ಕ್ಷಿತಿಜದಲ್ಲಿ ಧ್ರುವನಕ್ಷತ್ರದಂತೆ ಮಿಂಚಿದ ಮಗ ತಂದೆಯ ಹೆಸರನ್ನೂ ಬಾನೆತ್ತರದಲ್ಲಿ ಮೆರೆಸಿ ಬಿಟ್ಟ. ಭಾರತ ತಂಡಕ್ಕೆ ಸೌರವ್ ಗಂಗೂಲಿ ಅಡಿಪಾಯ ಹಾಕಿದರು. ಆ ಅಡಿಪಾಯದ ಮೇಲೆ ಜಗತ್ತೇ ತಿರುಗಿ ನೋಡುವಂಥಾ ಯಶೋಶಿಖರವನ್ನೇ ಕಟ್ಟಿದ ಮಹೇಂದ್ರ ಸಿಂಗ್ ಧೋನಿ.
ರಾಂಚಿಯ ಮಾಹಿ ಬಂಗಾಳದ ಗಂಗೂಲಿ ಹುಡುಕಿ ತಂದ ಪ್ರತಿಭೆ. ಭಾರತ ತಂಡದಲ್ಲಿ ಅವಕಾಶ ಕೊಟ್ಟದ್ದೂ ಅವರೇ, ಬೆನ್ನು ತಟ್ಟಿ ಬೆಳೆಸಿದ್ದೂ ಅವರೇ..
ಒಬ್ಬ ಸೆಹ್ವಾಗ್, ಒಬ್ಬ ಯುವರಾಜ. ಒಬ್ಬ ಜಹೀರ್ ಖಾನ್, ಒಬ್ಬ ಹರ್ಭಜನ್ ಸಿಂಗ್. ಇವರೆಲ್ಲರ ನಂತರ ಎಂ.ಎಸ್ ಧೋನಿ. ಸೌರವ್ ಗಂಗೂಲಿಯಂಥಾ ನಾಯಕನ ಕೈಯಲ್ಲಿ ವಿಶ್ವಕಪ್ ಇರಬೇಕಿತ್ತು ಎಂದು ಅನ್ನಿಸುವುದು ನನಗೊಬ್ಬನಿಗೇ ಅಲ್ಲ. ಅದು ಬಹುತೇಕ ಕ್ರಿಕೆಟ್ ಅಭಿಮಾನಿಗಳ, ಅದರಲ್ಲೂ ದಾದಾ ಅಭಿಮಾನಿಗಳ ಈಡೇರದ ಬಯಕೆ.
ವಿಶ್ವಕಪ್ ಗೆಲ್ಲದಿದ್ದರೇನಂತೆ.. ವಿಶ್ವಕಪ್ ಗೆದ್ದುಕೊಡಬಲ್ಲ ಹುಡುಗರನ್ನು ರೆಡಿ ಮಾಡಿದ್ದರು ಸೌರವ್ ಗಂಗೂಲಿ. ಗಂಗೂಲಿ ಗರಡಿಯ ಹುಡುಗರಿಗೆ ನಾಯಕನಾದ ಧೋನಿ ಒಂದಲ್ಲ, ಎರಡು ವಿಶ್ವಕಪ್’ಗಳನ್ನು ಗೆದ್ದ. ಸೆಹ್ವಾಗ್, ಗಂಭೀರ್, ಯುವರಾಜ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಆಶಿಶ್ ನೆಹ್ರಾ, ದಿನೇಶ್ ಕಾರ್ತಿಕ್. ಇವರೆಲ್ಲಾ ಭಾರತ ತಂಡಕ್ಕೆ ಧೋನಿಗಿಂತ ಮೊದಲು ಬಂದವರು. ಧೋನಿ ಆಗಮನದ ಹೊತ್ತಿಗೆ ಭಾರತ ತಂಡದಲ್ಲಿ ಸ್ಟಾರ್ ಪಟ್ಟಕ್ಕೇರಿ ಬಿಟ್ಟಿದ್ದರು ಸೆಹ್ವಾಗ್, ಯುವರಾಜ್, ಜಹೀರ್, ಹರ್ಭಜನ್. ಎಲ್ಲರೂ ನೋಡುತ್ತಿರುವುದಾಗಲೇ ಮದ್ದಾನೆಯೊಂದು ನುಗ್ಗಿ ಬಿಟ್ಟಿತು. ಎಲ್ಲರನ್ನೂ ದಾಟಿ ಮುನ್ನುಗ್ಗಿ ಬಿಟ್ಟಿತು. ನೋಡ ನೋಡುತ್ತಿದ್ದಂತೆಯೇ ಅವನ ತಲೆಯಲ್ಲಿ ನಾಯಕತ್ವದ ಕಿರೀಟ. ಯುವರಾಜ್, ಸೆಹ್ವಾಗ್ ಅಚ್ಚರಿಗೊಳಗಾದರು. ‘‘ನಾನು ಉಪನಾಯಕನಾಗಿದ್ದೆ. ಮುಂದಿನ ನಾಯಕತ್ವಕ್ಕೆ ಉತ್ತರಾಧಿಕಾರಿಯಾಗಿದ್ದವನು ನಾನೇ. ಆದರೆ ಎಲ್ಲರನ್ನೂ ದಾಟಿ ಧೋನಿ ನಾಯಕನಾಗಿ ಬಿಟ್ಟ’’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದ ಯುವರಾಜ.
ಯುವರಾಜನಿಗೆ ಅನುಭವವಿತ್ತು. Stardom ಇತ್ತು. ನಾಯಕನಾಗಲು ಅರ್ಹತೆಯೂ ಇತ್ತು. ಜೊತೆಗಿದ್ದ ವೀರೇಂದ್ರ ಸೆಹ್ವಾಗ್ ಕೂಡ ನಾಯಕತ್ವ ಬಯಸಿದವನೇ. ಆದರೆ ಎಲ್ಲರನ್ನೂ ಪಕ್ಕಕ್ಕೆ ಸರಿಸಿ ಧೋನಿಗೆ ಪಟ್ಟ ಕಟ್ಟಿದಾಗ ಕೆಲವರಿಗೆ ಅಚ್ಚರಿ, ಕೆಲವರಿಗೆ ಆಘಾತ. ಹೌದು.. ಅಚ್ಚರಿ ಪಡುವ ನಿರ್ಧಾರವೇ ಅದು..
2007ರ ಟಿ20 ವಿಶ್ವಕಪ್’ಗೆ ಧೋನಿ ನೇತೃತ್ವದ ತಂಡವನ್ನು ಕಳುಹಿಸಿ ಕೊಟ್ಟಾಗ ಅದೆಷ್ಟು ಮಂದಿ ವಿಶ್ವಾಸವಿಟ್ಟಿದ್ದರು ಆ ತಂಡದ ಮೇಲೆ..! ಚರಿತ್ರೆ ಸೃಷ್ಠಿಸಿ ಬಿಟ್ಟಿತು ಆ ತಂಡ. ಅಲ್ಲಿಂದ 2011ರ ವಿಶ್ವಕಪ್. ಅಷ್ಟು ಹೊತ್ತಿಗೆ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಏಕದಿನ ಕ್ರಿಕೆಟ್’ನಿಂದ ನಿವೃತ್ತಿಯಾಗಿದ್ದರು. ದಾದಾ ಗರಡಿಯ ಹುಡುಗರ ಜೊತೆಗೆ ತನ್ನದೇ ತಂಡವನ್ನು ಕಟ್ಟಿದ್ದ ಧೋನಿ. ಅನುಭವದ ಜೊತೆ ಹೊಸ ಉತ್ಸಾಹ 28 ವರ್ಷಗಳ ನಂತರ ವಿಶ್ವಕಪ್ ಗೆದ್ದು ಕೊಟ್ಟಿತು.
ಚಾಂಪಿಯನ್ಸ್ ಟ್ರೋಫಿ ಗೆಲ್ಲದೆ 13 ವರ್ಷಗಳಾಗಿದ್ದವು. ಅದನ್ನೂ ಗೆದ್ದು ಬಿಟ್ಟ ಧೋನಿ. ದೇಶದ ಕ್ರಿಕೆಟ್ ಚರಿತ್ರೆಯಲ್ಲೇ ಭಾರತ ತಂಡದ ಟೆಸ್ಟ್ ಕ್ರಿಕೆಟ್’ನಲ್ಲಿ ಮೊಟ್ಟ ಮೊದಲ ಬಾರಿ ನಂ.1 ಆಗಿದ್ದೂ ಧೋನಿ ನಾಯಕತ್ವದಲ್ಲೇ. ಅವನಿಗೆ ನಾಯಕನಾಗುವ ಯೋಗವೂ ಇತ್ತು. ಆಳುವ ಯೋಗ್ಯತೆಯೂ ಇತ್ತು. ಯಾರ ಕೈಗೂ ದಾಳವಾಗದ ನಾಯಕ ಧೋನಿ. ಅವನದ್ದು ನಿಜವಾದ ಅಧಿಪತ್ಯ. ತಂಡದಲ್ಲೂ, ತಂಡದ ಆಯ್ಕೆಯಲ್ಲೂ, ತಂಡಕ್ಕೆ ಸಂಬಂಧಿಸಿದ ನಿರ್ಧಾರಗಳಲ್ಲೂ ಅವನದ್ದೇ ಅಂತಿಮ ಮಾತು. ದೊಡ್ಡ ದೊಡ್ಡ ನಾಯಕರುಗಳನ್ನೆಲ್ಲಾ ದಿನ ಬೆಳಗಾಗುವಷ್ಟರಲ್ಲಿ ಕಿತ್ತೆಸೆದ ಇತಿಹಾಸವಿರುವ ಭಾರತೀಯ ಕ್ರಿಕೆಟ್’ನಲ್ಲಿ ಆ ಪರಿ ಅಧಿಪತ್ಯ ಸಾಧಿಸಿದ ಮತ್ತೊಬ್ಬ ನಾಯಕನಿಲ್ಲ.
ಕ್ರಿಕೆಟ್ ಇಲ್ಲದಾಗ ಅವನು ಧೋನಿ ಅಪ್ಪಟ ಮಣ್ಣಿನ ಮಗ. ಅದು ಹೆಸರಿಗಷ್ಟೇ ಅಲ್ಲ. ಅವನು ಮಣ್ಣಿನಲ್ಲೇ ದುಡಿಯುವ ರೈತ. ರಾಂಚಿಯ ತನ್ನ ಮನೆಯ ಸುತ್ತ 43 ಎಕರೆಯಲ್ಲಿ ತೆಂಗು, ಹಣ್ಣು, ತರಕಾರಿಗಳನ್ನು ಬೆಳೆದಿದ್ದಾನೆ. ಹಸು, ಕೋಳಿ, ಮೀನುಗಳನ್ನು ಸಾಕಿದ್ದಾನೆ. ಅವನ ಡೈರಿಯಲ್ಲಿ ಪ್ರತೀ ದಿನ ನೂರಾರು ಲೀಟರ್ ಹಾಲು ಉತ್ಪಾದನೆಯಾಗುತ್ತದೆ. ಹತ್ತಾರು ನಾಯಿಗಳಿಗೆ ಧೋನಿ ಮುದ್ದಿನ ಯಜಮಾನ. ಕ್ರಿಕೆಟ್ ಇಲ್ಲದಿದ್ದಾಗ ಎಲ್ಲಿಯೂ ಕಾಣಿಸಿಕೊಳ್ಳಲಾರ, ಯಾರ ಕೈಗೂ ಸಿಗಲಾರ. ಕ್ರಿಕೆಟ್ ಇಲ್ಲದ ಬಹುತೇಕ ಸಮಯವನ್ನು ಧೋನಿ ರಾಂಚಿಯ ತನ್ನ ಕೃಷಿ ಭೂಮಿಯಲ್ಲೇ ಕಳೆಯುತ್ತಾನೆ. ಸ್ವತಃ ತಾನೇ ಟ್ರ್ಯಾಕ್ಟರ್ ಏರಿ ಈಗಲೂ ಉಳುಮೆ ಮಾಡುತ್ತಾನೆ. ಕೃಷಿ ಅವನಿಗೆ ಇಷ್ಟ.
ಅವನನ್ನೂ ಟೀಕಿಸುವವರೂ ಇದ್ದಾರೆ, ದ್ವೇಷಿಸುವವರೂ ಇದ್ದಾರೆ.. ಟೀಕೆ-ದ್ವೇಷಗಳಿಂದ ಧೋನಿ ಅತೀತನಲ್ಲ. ಆದರೆ ಯಾರೇನೇ ಹೇಳಲಿ. ಕ್ರಿಕೆಟ್ ಆಡುವ ಹುಡುಗರಿಗೆ ಸ್ಫೂರ್ತಿ ಮಹೇಂದ್ರ ಸಿಂಗ್ ಧೋನಿ. ಸಣ್ಣ ಊರಿನ ಹುಡುಗರಿಗೆ ದೊಡ್ಡ ಕನಸು ಕಾಣಲು ಪ್ರೇರಣೆ ಮಹೇಂದ್ರ ಸಿಂಗ್ ಧೋನಿ. ಅವನನ್ನು ಈ ದೇಶ ಸದಾಕಾಲ ಸಂಭ್ರಮಿಸುತ್ತಲೇ ಇರುತ್ತದೆ. ಆರಾಧಿಸುತ್ತಲೇ ಇರುತ್ತದೆ.
45ನೇ ಹುಟ್ಟುಹಬ್ಬದ ಶುಭಾಶಯಗಳು ಮಹೇಂದ್ರ ಸಿಂಗ್ ಧೋನಿ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.